ಸಚಿವ ಸ್ಥಾನ ನೀಡುವ ವಿಚಾರದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಆದಷ್ಟು ಬೇಗ ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ದೊರಕಿಸಿಕೊಡಬೇಕು. ಈ ಕುರಿತು ಹೈಕಮಾಂಡ್ ಜತೆ ಮಾತನಾಡಿ ನ್ಯಾಯ ಒದಗಿಸಬೇಕು. ಇದರಿಂದ ನಮ್ಮ ಸಮುದಾಯ ನಿಮಗೆ ಚಿರಋಣಿಯಾಗಿರುತ್ತದೆ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಹಾವೇರಿ: ಸಚಿವ ಸ್ಥಾನ ನೀಡುವ ವಿಚಾರದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಆದಷ್ಟು ಬೇಗ ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ದೊರಕಿಸಿಕೊಡಬೇಕು. ಈ ಕುರಿತು ಹೈಕಮಾಂಡ್ ಜತೆ ಮಾತನಾಡಿ ನ್ಯಾಯ ಒದಗಿಸಬೇಕು. ಇದರಿಂದ ನಮ್ಮ ಸಮುದಾಯ ನಿಮಗೆ ಚಿರಋಣಿಯಾಗಿರುತ್ತದೆ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕಾಗಿನೆಲೆಯಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಿಲ್ಲೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಹೋದರೆ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ಭವಿಷ್ಯ ಕಷ್ಟವಾಗಲಿದೆ ಎಂಬ ಸಂದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡುತ್ತಿದ್ದೇನೆ. ಮುಖ್ಯಮಂತ್ರಿಗಳ ಮುಂದೆ ನಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದೇವೆ. ಕೆಲವರ ತಪ್ಪಿನಿಂದ ರಾಜಕಾರಣಿಗಳಿಗೆ ಕೆಟ್ಟ ಹೆಸರು ಬರುತ್ತದೆ. ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಅಂಬೇಡ್ಕರ್‌ ಅವರು ಕೊಟ್ಟ ಸಂವಿಧಾನದಿಂದ ನಾನು ಸಿಎಂ ಮುಂದೆ ನಿಂತು ಮಾತಾಡ್ತಿದ್ದೇನೆ. ಆದರೆ ಸಂವಿಧಾನದ ಅಡಿಯಲ್ಲಿ ನಮ್ಮ ಸಮಾಜದ ಪರಿಸ್ಥಿತಿಯನ್ನು ಕೂಡಾ ನೋಡಬೇಕಾಗುತ್ತದೆ. ಯಾವುದೇ ಒಬ್ಬ ನೌಕರರನ್ನು ನಿವೃತ್ತಿ ಸಂದರ್ಭದಲ್ಲಿ ವರ್ಗಾವಣೆ ಮಾಡಬಾರದು ಎಂದು‌ ಕಾನೂನು ಹೇಳುತ್ತದೆ. ಆದರೆ ನಮ್ಮ ಸಮಾಜದ ಒಬ್ಬ ನೌಕರನನ್ನು ನಿವೃತ್ತಿ ಸಂದರ್ಭದಲ್ಲಿ ವರ್ಗಾವಣೆ ಮಾಡಿದ್ದಾರೆ. ಆತ ಕೋರ್ಟ್‌ಗೆ ಹೋದರೆ ಆತನನ್ನು ವರ್ಗಾವಣೆ ಮಾಡಬಾರದು, ಮುಂದುವರೆಸಬೇಕೆಂದು ಕಾನೂನು ಹೇಳಿತು. ಬಳಿಕ ಸುಪ್ರೀಂ ಕೋರ್ಟ್‌ಗೆ ಹೋದರೂ ಆ ನೌಕರನ್ನು ಮುಂದುವರೆಸಬೇಕೆಂದೇ ಹೇಳಿತು. ಆದರೆ ಆತನನ್ನು ರೊಚ್ಚಿಗೆಬ್ಬಿಸಿ ಹಿರಿಯ ಮೇಲಾಧಿಕಾರಿಗಳ ವಿರುದ್ದ ಮಾತನಾಡಲು ಹಚ್ಚಿಸಿ ಆತನನ್ನು ಸಸ್ಪೆಂಡ್ ಮಾಡಿದರು. ಈ ರೀತಿ ಶೋಷಿತ ಸಮಾಜದ ಅಧಿಕಾರಿಗಳಿಗೆ ತೊಂದರೆ ಕೊಡಬಾರದು. ಸಚಿವ ರುದ್ರಪ್ಪ ಲಮಾಣಿ ಇಲ್ಲೇ ಇದ್ದೀರಿ, ಇದನ್ನು ಸರಿಪಡಿಸಿದರೆ ಒಳ್ಳೆಯದು, ಇಲ್ಲದಿದ್ದರೆ ನಿಮ್ಮ ಭವಿಷ್ಯ ಕಷ್ಟ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರ ನಡೆ-ನುಡಿಯಲ್ಲಿ ಬದಲಾವಣೆಯಾಗಿದೆ. ಇದೇ ರೀತಿ ಮುಂದುವರಿದರೆ ಅವರನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಶಾಲಾ ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ ₹10 ಕೋಟಿ ಅನುದಾನ ನೀಡುವಂತೆಯೂ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿ ನಮ್ಮ ಮನೆಗೆ ಬಂದಿದ್ದಾರೆ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಬಸವಣ್ಣ ಮತ್ತು ಕನಕದಾಸರಂತಹ ಮಹಾನ್ ದಾರ್ಶನಿಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಒಂದೊಂದು ಜನಾಂಗದವರು ತಮ್ಮ ತಮ್ಮ ಸಮುದಾಯದ ದಾರ್ಶನಿಕರ ಜಯಂತಿ ಆಚರಿಸುವ ಬದಲು, ಎಲ್ಲರೂ ಸೇರಿ ಎಲ್ಲ ದಾರ್ಶನಿಕರ ಜಯಂತಿ ಆಚರಿಸಿದಾಗ ಮಾತ್ರ ಸೌಹಾರ್ದ ಕರ್ನಾಟಕ ನಿರ್ಮಾಣ ಸಾಧ್ಯ. ಬಸವಣ್ಣ ಮತ್ತು ಕನಕದಾಸರು ಮನುಷ್ಯರನ್ನು ಮನುಷ್ಯರಂತೆ ಕಾಣುವುದನ್ನು ಕಲಿಸಿದವರು. ಯಾರನ್ನೂ ಕೀಳಾಗಿ ಕಾಣಬಾರದು ಎಂಬ ಸಂದೇಶ ಸಾರಿದವರು. ದಾರ್ಶನಿಕರ ತತ್ವಗಳು ಸಮಾಜಕ್ಕೆ ಬೆಳಕಾಗಬೇಕು ಎಂದರು.

ಡಿ.ಕೆ. ಶಿವಕುಮಾರ್ ಅವರು ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಾವು ನಿಜವಾಗಿಯೂ ಎಷ್ಟು ಸುರಕ್ಷಿತವಾಗಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ಸಂವಿಧಾನ ಮತ್ತು ಕಾನೂನಿಗೆ ಬೆಲೆ ಇಲ್ಲದಿದ್ದರೆ ನಮ್ಮಂತಹ ಸಣ್ಣ ಸಮುದಾಯದ ನೌಕರರು ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು? ನಮ್ಮನ್ನು ಕಾಯಬೇಕಾದವರೇ ವಿಷ ನೀಡಿದರೆ ರಕ್ಷಣೆ ನೀಡುವವರು ಯಾರು ಎಂದು ಪ್ರಶ್ನಿಸಿದರು.