ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಉಸ್ತುವಾರಿ ಸಚಿವರಿಂದ ರೈತರಿಗೆ ನೀರಿನ ವಿಷಯದಲ್ಲಿ ದ್ರೋಹವಾಗಿದೆ. ಮಾನವೀಯತೆ ಮೇಲೆ ತೆಲಂಗಾಣಕ್ಕೆ ನೀರು ಬಿಡಲಾಗಿದೆ ಎನ್ನುವ ಡಾ.ಶರಣಪ್ರಕಾಶ ಪಾಟೀಲ್, ಅದೇ ಮಾನವೀಯತೆ ಮೇಲೆ ಕೊಯ್ನಾ ಡ್ಯಾಂನಿಂದ ನೀರು ತರಲಿ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಸವಾಲು ಹಾಕಿದರು.
ಕನ್ನಡಪ್ರಭ ವಾರ್ತೆ ದೇವದುರ್ಗ
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಉಸ್ತುವಾರಿ ಸಚಿವರಿಂದ ರೈತರಿಗೆ ನೀರಿನ ವಿಷಯದಲ್ಲಿ ದ್ರೋಹವಾಗಿದೆ. ಮಾನವೀಯತೆ ಮೇಲೆ ತೆಲಂಗಾಣಕ್ಕೆ ನೀರು ಬಿಡಲಾಗಿದೆ ಎನ್ನುವ ಡಾ.ಶರಣಪ್ರಕಾಶ ಪಾಟೀಲ್, ಅದೇ ಮಾನವೀಯತೆ ಮೇಲೆ ಕೊಯ್ನಾ ಡ್ಯಾಂನಿಂದ ನೀರು ತರಲಿ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಸವಾಲು ಹಾಕಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನೀರಾವರಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ ಪರಿಣಾಮ ನಾವು ಇಂದು ನೀರಿಗಾಗಿ ಪರದಾಡುವಂತಾಗಿದೆ. ನಿಂತಲ್ಲಿ ನಿಲ್ಲದೇ ಸದಾ ಓಡುತ್ತಲೇ ಇರುವ ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಧರಂಸಿಂಗ್, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತದಿಂದ ರೈತರ ಸಮಸ್ಯೆಗಳಿಗೆ ಸ್ಪಂದನೆ ದೊರಕುತ್ತಿಲ್ಲ. ಬೆಳೆಗಳ ಕುರಿತು ಅಧಿಕಾರಿಗಳು ನೀಡಿದ ವರದಿ ಲೋಪದಿಂದ ಕೂಡಿದ್ದು, ಜಲಾಶಯಗಳಲ್ಲಿ ನೀರಿನ ಲಭ್ಯತೆ ಕುರಿತು ಚರ್ಚಿಸಿದರೂ, ಅವರು ನೀಡಿದ ಭರವಸೆ ಸುಳ್ಳಾಗಿದೆ. ಅವೈಜ್ಞಾನಿಕವಾಗಿ ನೀರಿನ ಪ್ರಮಾಣದ ಸಂಗ್ರಹ ನಿಗದಿ ಮಾಡಲಾಗಿದೆ. ಕುಡಿವ ನೀರು, ಆವಿಯಾಗಬಹುದಾದ ನೀರು, ಗೂಗಲ್ ಬ್ರಿಜ್ ಹಾಗೂ ವಿದ್ಯುತ್ ಘಟಕಗಳಿಗೆ ಪೂರೈಕೆ ಎಂಬ ನೆಪಗಳ ಮೇಲೆ ಹೆಚ್ಚಿನ ಪ್ರಮಾಣ ನೀರಿನ ಲೆಕ್ಕಾಚಾರ ಮಾಡಲಾಗಿದೆ ಎಂದರು.
ನ.12ನಂತರ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಿದ ಬಳಿಕ ಜಲಾಶಯಗಳ ಉಸ್ತುವಾರಿಯನ್ನು ಪ್ರಾದೇಶಿಕ ಆಯುಕ್ತರಿಗೆ ವಹಿಸಲಾಗಿದೆ. ಸಿಎಂ, ನೀರಾವರಿ ಸಚಿವ ಮತ್ತು ಆಯುಕ್ತರು ನಿರ್ಧಾರ ಕೈಗೊಳ್ಳಬೇಕಾಗಿದೆ. ಮೆಣಸಿನಕಾಯಿ ಬೆಳೆಗಳನ್ನು ಉಳಿಸಿಕೊಳ್ಳಬೇಕಾದರೆ ಕನಿಷ್ಠ ಜ.15ರವರೆಗೆ ನೀರು ಬೇಕೇ ಬೇಕು. ಈಗಾಗಲೇ ರೈತರು ಪ್ರತೀ ಎಕರೆಗೆ ಒಂದುವರೆ ಲಕ್ಷ ರುಪಾಯಿ ಖರ್ಚು ಮಾಡಿದ್ದಾರೆ. ಜಲಾಶಯದಿಂದ ಇದುವರೆಗೆ 2,400 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. ಇದೀಗ 1,400 ಕ್ಯೂಸೆಕ್ ನೀರನ್ನು 10 ದಿನ ಬಂದ್ ಮತ್ತು 5 ದಿನ ನಿರಂತರ ನೀರು ಹರಿಸಬೇಕಾಗಿದೆ ಎಂದು ಪ್ರಭಾಕರ ಪಾಟೀಲ್ ಹೇಳಿದರು.ಕಾಲುವೆಗಳಿಗೆ ನೀರು ಹರಿಸದಿದ್ದರೆ ಹೋರಾಟಗಳು ತೀವ್ರ ಸ್ವರೂಪ ಪಡೆಯುಲಿವೆ. ಹೆದ್ದಾರಿಗಳನ್ನು ಬಂದ್ ಮಾಡಿ, ಅಲ್ಲೇ ಬಿಡಾರ ಹೂಡಲಾಗುವದು. ಪೊಲೀಸರು ರಸ್ತೆ ತಡೆ ಮಾಡಬೇಡಿ ಎನ್ನುತ್ತಿದ್ದಾರೆ. ಆದರೆ ರೈತರ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದ್ದು, ನ.22ರ ಬಳಿಕ ಯಾವುದೇ ಮುನ್ಸೂಚನೆ ನೀಡದೇ, ಪರವಾನಿಗೆ ಪಡೆಯದೇ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ತಾಲೂಕು ಘಟಕ ಅಧ್ಯಕ್ಷ ಹಾಜಿ ಮಸ್ತಾನ ಬಿ.ಗಣೇಕಲ್, ಪದಾಧಿಕಾರಿಗಳಾದ ಹನುಮಗೌಡ ಜಾಲಹಳ್ಳಿ, ಮಲ್ಲಪ್ಪ ಗೌಡ ಗಬ್ಬೂರ ಇದ್ದರು.