ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ರೆಡ್ಡಿ ಸಮುದಾಯದ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಬೆಳಗಾವಿ ರೆಡ್ಡಿ ಸಂಘದ ಮಾಜಿ ಉಪಾಧ್ಯಕ್ಷ ಬಸವರಾಜ ಬಾವಲತ್ತಿ ಎಚ್ಚರಿಕೆ ನೀಡಿದರು.

ನಗರದ ರೆಡ್ಡಿ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ನಾಯಕರಾಗಿ ಸೇವೆ ಸಲ್ಲಿಸಿರುವ ರಾಮಲಿಂಗಾ ರೆಡ್ಡಿ ಮತ್ತು ಎಚ್.ಕೆ.ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವುದು ಸಮುದಾಯಕ್ಕೆ ಮಾಡಿರುವ ಗಂಭೀರ ಅನ್ಯಾಯವಾಗಿದೆ ಎಂದು ಆರೋಪಿಸಿದರು.ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರು ಎಂದಿಗೂ ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ಆದರೂ ಅನುಭವಿ ಹಾಗೂ ಜನಪರ ನಾಯಕರನ್ನು ಕಡೆಗಣಿಸಿರುವುದು ಬೇಸರದ ಸಂಗತಿ. ಸಚಿವ ಸಂಪುಟದಿಂದ ಎಚ್.ಕೆ.ಪಾಟೀಲ ಅವರನ್ನು ಕೈಬಿಟ್ಟಿರುವುದು ಮತ್ತು ರಾಮಲಿಂಗಾ ರೆಡ್ಡಿಗೆ ಅವಕಾಶ ನೀಡದಿರುವುದು ರೆಡ್ಡಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದರು.ರೆಡ್ಡಿ ಸಮುದಾಯದ ರಾಜಕೀಯ ನಾಯಕರ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲದಿದ್ದರೂ ಅವರಿಗೆ ಸಚಿವ ಸ್ಥಾನ ನಿರಾಕರಿಸಿರುವುದು ನೋವಿನ ಸಂಗತಿ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಗೌರವ ಇಲ್ಲದಂತಾಗಿದೆ ಎಂಬ ಭಾವನೆ ಸಮುದಾಯದಲ್ಲಿ ಮೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸುಮಾರು 80 ಲಕ್ಷ ಜನಸಂಖ್ಯೆ ಹೊಂದಿರುವ ರೆಡ್ಡಿ ಸಮುದಾಯಕ್ಕೆ ಕನಿಷ್ಠ ನಾಲ್ವರು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಆಗ್ರಹಿಸಿದ ಅವರು, ಈ ಅನ್ಯಾಯವನ್ನು ಕಾಂಗ್ರೆಸ್ ಹೈಕಮಾಂಡ್ ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.ಮೊದಲು ಪಕ್ಷದ ಹೈಕಮಾಂಡ್‌ಗೆ ಮನವಿ ಸಲ್ಲಿಸಲಾಗುವುದು. ನಂತರ ವಿವಿಧ ಹಂತಗಳಲ್ಲಿ ಹೋರಾಟ ನಡೆಸಿ ಸಮುದಾಯದ ಹಕ್ಕಿಗಾಗಿ ಧ್ವನಿ ಎತ್ತಲಾಗುವುದು ಎಂದು ಬಸವರಾಜ ಬಾವಲತ್ತಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷ ಕಾಂತು ಜಾಲಿಬೇರಿ, ಪರಮೇಶ್ವರ ಮುಳ್ಳೂರ, ಪ್ರಕಾಶ ಕಕರಡ್ಡಿ, ಮಂಜುನಾಥ ಪಾಟೀಲ, ಬಸವರಾಜ ಗಣಿ ಉಪಸ್ಥಿತರಿದ್ದರು.