ಜಾತಿ ಸಮೀಕ್ಷೆಯಲ್ಲಿ ವಿಶ್ವ ಕರ್ಮ ಸಮಾಜಕ್ಕೆ ಅನ್ಯಾಯ

| Published : Apr 17 2025, 12:47 AM IST

ಸಾರಾಂಶ

ಸರ್ಕಾರ ಮಾಡಿರುವ ಜಾತಿ ಸಮೀಕ್ಷೆಯಲ್ಲಿ ವಿಶ್ವಕರ್ಮ ಸಮಾಜದ ಅಂಕಿ ಅಂಶಗಳನ್ನು ಗುರುತಿಸುವಲ್ಲಿ ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಾತಿ ಸಮೀಕ್ಷೆಯಲ್ಲಿ ವಿಶ್ವಕರ್ಮ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವ ಬ್ರಾಹ್ಮಣ ಮಠಾಧಿಪತಿಗಳು ಹಾಗೂ ಪೀಠಾಧಿಪತಿಗಳ ಒಕ್ಕೂಟದ ಗೌರವಾಧ್ಯಕ್ಷರಾದ ಅನಂತ ವಿಭೂಸಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ನುಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮಾಡಿರುವ ಜಾತಿ ಸಮೀಕ್ಷೆಯಲ್ಲಿ ವಿಶ್ವಕರ್ಮ ಸಮಾಜದ ಅಂಕಿ ಅಂಶಗಳನ್ನು ಗುರುತಿಸುವಲ್ಲಿ ವಿಫಲವಾಗಿದೆ. ಸರ್ಕಾರ ಬಿಡುಗಡೆಗೊಳಿಸಿರುವ ಸಮೀಕ್ಷೆಯಲ್ಲಿ ನಮ್ಮ ಜನಾಂಗ ಕೇವಲ 15 ಲಕ್ಷ ಎಂದು ನಮೂದಿಸಿದೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ. ನಮ್ಮ ಜನಾಂಗವು ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಇದೆ ಎಂದರು.ರಾಜ್ಯದ ಪ್ರತಿ ಗ್ರಾಮದಲ್ಲಿಯೂ ವಿಶ್ವಕರ್ಮ ಬ್ರಾಹ್ಮಣರ ಕುಟುಂಬಗಳಿವೆ. ಇದರಲ್ಲಿ ಪಂಚ ವೃತ್ತಿಯೊಂದಿಗೆ ನಮ್ಮ ಜನಾಂಗ ಗುರುತಿಸಿಕೊಂಡಿದ್ದು ಇದನ್ನು ಸರಿಯಾಗಿ ಗುರುತಿಸದೇ ಯಾವುದೇ ಅಂದಾಜಿನಲ್ಲಿ ಅಂಕಿ ಸಂಖ್ಯೆಯನ್ನು ದಾಖಲೆ ಮಾಡಿದ್ದಾರೆ. ಇದನ್ನು ಪುನರ್ ಪರಿಶೀಲನೆ ಮಾಡಿ ನೈಜವಾದ ಅಂಕಿ ಸಂಖ್ಯೆ ನಮೂದಿಸಬೇಕು ಎಂದು ತಿಳಿಸಿದರು.

ದೇಶದ ಬೆನ್ನೆಲುಬು ರೈತರಾದರೆ ರೈತರ ಬೆನ್ನೆಲುಬು ವಿಶ್ವಕರ್ಮ ಜನಾಂಗ. ರೈತಾಪಿ ಜನಾಂಗಕ್ಕೆ ಬೇಕಾಗುವ ಕೃಷಿ ಕಾರ್ಯಕ್ಕೆ ಬೇಕಾಗುವ ಉಪಕರಣಗಳು, ಬಡಿಗ ಹಾಗೂ ಕಮ್ಮಾರ ನಿರ್ಮಿಸಿಕೊಡುತ್ತಾನೆ. ಜಾತಿ, ಮತ, ಪಂಥಗಳನ್ನು ಲೆಕ್ಕಿಸದೇ ಗುಡಿ ಗೋಪುರಗಳನ್ನು ದೇವಶಿಲ್ಪಿಗಳಾದವರು. ನಮ್ಮ ಜನಾಂಗದ ಕೊಡುಗೆ ಅಪಾರವಾಗಿದೆ. ಬೇಲೂರು, ಹಳೆಬೀಡು, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಹಂಪಿ, ಅಜಂತಾ ಎಲ್ಲೋರಾ ಮುಂತಾದ ದೇವಸ್ಥಾನಗಳ ಗೋಪುರ ನಿರ್ಮಿಸಿದ್ದೇವೆ. ಸರ್ಕಾರ ಜಾತಿ ಸಮೀಕ್ಷೆ ಪರಿಶೀಲನೆ ಮಾಡಿ ಸತ್ಯ ವರದಿಯನ್ನು ನೀಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ನಮ್ಮ ಸಮಾಜವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ರಾಮಚಂದ್ರ ಮಹಾಸ್ವಾಮಿಗಳು, ಜಗನ್ನಾಥ ಮಹಾಸ್ವಾಮಿಗಳು, ಕಾಳಹಸ್ತಿ ಮಹಾಸ್ವಾಮಿಗಳು, ದೇವೇಂದ್ರ ಮಹಾ ಸ್ವಾಮಿಗಳು ಉಪಸ್ಥಿತರಿದ್ದರು.