ಚಿಕ್ಕಮಗಳೂರುಹಳ್ಳಿಗಳ ಜನರ ಜೀವನ ಮಟ್ಟ ಸುಧಾರಣೆಯಾಗಬೇಕು. ಸ್ಥಳೀಯವಾಗಿ ಎಲ್ಲಾ ಕಾಲದಲ್ಲೂ ಅವರಿಗೆ ಕೂಲಿ ಕೆಲಸ ಸಿಗಬೇಕೆಂಬ ಉದ್ದೇಶದಿಂದ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಕೂಲಿ ಕಾರ್ಮಿಕರಿಗೆ, ರೈತರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
- ಮನರೇಗಾ ಯೋಜನೆಗೆ ತಿದ್ದುಪಡಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ, ಪೂರ್ವಭಾವಿ ಸಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹಳ್ಳಿಗಳ ಜನರ ಜೀವನ ಮಟ್ಟ ಸುಧಾರಣೆಯಾಗಬೇಕು. ಸ್ಥಳೀಯವಾಗಿ ಎಲ್ಲಾ ಕಾಲದಲ್ಲೂ ಅವರಿಗೆ ಕೂಲಿ ಕೆಲಸ ಸಿಗಬೇಕೆಂಬ ಉದ್ದೇಶದಿಂದ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಕೂಲಿ ಕಾರ್ಮಿಕರಿಗೆ, ರೈತರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ರದ್ದುಪಡಿಸಿ ಗ್ರಾಮ ಪಂಚಾಯಿತಿ ಅಧಿಕಾರವನ್ನು ಮೊಟಕುಗೊಳಿಸಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಕುರಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ನಿಂದ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಮನರೇಗಾ ಯೋಜನೆಯಿಂದ ಗ್ರಾಮ ಪಂಚಾಯಿತಿಗಳು, ಗ್ರಾಮಗಳು ಅಭಿವೃದ್ಧಿ ಹೊಂದಿವೆ. ಪ್ರಧಾನಮಂತ್ರಿಗಳು ಬಿಡುಗಡೆ ಮಾಡುವ ಹಣ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಬರುತ್ತಿತ್ತು. ವಿಬಿ ಜಿ ರಾಮ್ ಜಿ ಯೋಜನೆಯಿಂದ ಗ್ರಾಮ ಪಂಚಾಯಿತಿಗಳು ತಮ್ಮ ಅಧಿಕಾರ ಕಳೆದುಕೊಳ್ಳಲಿವೆ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿರುವ ಯೋಜನೆಗಳ ಹೆಸರು ಬದಲಾವಣೆ ಮಾಡುವುದೇ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಹೀಗೆ ಸಾಕಷ್ಟು ಬದಲಾವಣೆ ತರುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಗ್ರಾಮೀಣ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ತಿಳಿಸಿದರು.ಮಹಾತ್ಮಗಾಂಧಿಯವರ ಕನಸು ನನಸು ಮಾಡಲು ಕಾಂಗ್ರೆಸ್ ಮುಂದಾಗಿದ್ದರೆ, ಕೇಂದ್ರ ಬಿಜೆಪಿ ಸರ್ಕಾರ ಮಹಾತ್ಮಗಾಂಧಿ ಅವರ ಕನಸಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಬಿಜೆಪಿಗೆ ಜನಸಾಮಾನ್ಯರು, ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ದುಷ್ಟ ಶಕ್ತಿಗಳು ಒಂದಾಗಿದ್ದು, ಅವುಗಳನ್ನು ಮಟ್ಟ ಹಾಕಬೇಕಾದರೆ ಕಾಂಗ್ರೆಸ್ ಕಾರ್ಯಕರ್ತರು ಒಂದಾಗಬೇಕೆಂದು ಸಲಹೆ ನೀಡಿದರು.ಕಾಂಗ್ರೆಸ್ ಆಡಳಿತದಲ್ಲಿ ಉತ್ತಮ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆ ಮೊಟಕುಗೊಳಿಸುವ ಮೂಲಕ ಗ್ರಾಮೀಣ ಭಾಗದ ಜನರ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರ ಕಿತ್ತುಕೊಳ್ಳಲು ಹೊರಟಿದೆ ಎಂದು ತಿಳಿಸಿದರು.
ಮುಂಬರುವ ಗ್ರಾಪಂ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಮೂಲಕ ಸದೃಡಗೊಳಿಸಲು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮುಂದಾಗುವಂತೆ ಮನವಿ ಮಾಡಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ಮನರೇಗಾ ಯೋಜನೆ ಹೆಸರನ್ನು ಬದಲಾಯಿಸುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ದಿಕ್ಕು ತಪ್ಪಿಸುವ ಕೆಲಸ ಮಾಡಲು ಹೊರಟಿದೆ. ಹೆಸರು ಬದಲಾಯಿಸುವುದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಪ್ರತಿ ಗ್ರಾಪಂ ಮಟ್ಟದಲ್ಲಿ ಸಭೆ ಮಾಡುವ ಮೂಲಕ ವಿಬಿ ಜಿ ರಾಮ್ ಜಿ ವಿರುದ್ಧ ಹೋರಾಟ ಮಾಡಲು ಎಲ್ಲರೂ ಮುಂದಾಗ ಬೇಕು. ಗ್ರಾಮೀಣ ಜನರಿಗೆ ಜನ ಜಾಗೃತಿ ಮೂಡಿಸುವ ಕೆಲಸ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕು ಎಂದರು.ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಮದ್ ನಯಾಜ್, ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕ ಜಿಲ್ಲಾಧ್ಯಕ್ಷ ಮಲ್ಲೇಶಸ್ವಾಮಿ ಮಾತನಾಡಿದರು. ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಕ.ರಾ.ಕೃ.ಉ.ಸಂ.ರಪ್ತು ನಿಗಮ ಅಧ್ಯಕ್ಷ ಬಿ.ಎಚ್.ಹರೀಶ್, ನಗರಸಭಾ ಸದಸ್ಯರಾದ ಜಾವಿದ್, ಪರಮೇಶ್ ರಾಜ್ ಅರಸ್, ಶಾದಬ್ ಆಲಂ ಖಾನ್, ಮಂಜುಳ ಲಕ್ಷ್ಮಣ್, ಜಿಲ್ಲಾ ವಕ್ತಾರ ರೂಬೆನ್ ಮೊಸಸ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಬೆಟ್ಟಗೆರೆ ಪ್ರವೀಣ್, ನಗರಾಧ್ಯಕ್ಷ ತನೋಜ್ ಕುಮಾರ್, ಮುಖಂಡರಾದ ಅತೀಕ್ ಖೈಸರ್, ಜೇಮ್ಸ್ ಡಿಸೋಜಾ, ಎಚ್.ಸಿ.ಗಂಗಾಧರ್, ಕೆ.ಭರತ್, ಆಶ್ರಯ ಸಮಿತಿ, ಸಿಡಿಎ, ನಗರಸಭೆ ಸದಸ್ಯರು ಉಪಸ್ಥಿತರಿದ್ದರು. 19 ಕೆಸಿಕೆಎಂ 3ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ರದ್ದುಪಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿದರು.