ಹಿರೇಕೆರೂರ ತಾಲೂಕಿನಲ್ಲಿ ಮಾತ್ರ ಅಲ್ಲಿನ ಶಾಸಕರ ಮುತುವರ್ಜಿಯಿಂದಾಗಿ ಎಲ್ಲ ವಿವಾಹ ಧನ ಸಹಾಯ ಹಾಗೂ ಇತರ ಸೌಲಭ್ಯಗಳ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಿಸಿ ಹಣ ಬಿಡುಗಡೆಯಾಗಿದೆ.
ರಾಣಿಬೆನ್ನೂರು: ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಾಲೂಕಿನ ನೈಜ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಜಿಲ್ಲಾ ಶಕ್ತಿಧಾಮ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ್ಣಪ್ಪ ಅಂತರವಳ್ಳಿ ಆರೋಪಿಸಿದರು.
ನಗರದಲ್ಲಿ ತಾಲೂಕು ವೆಲ್ಡಿಂಗ್ ಮತ್ತು ಇತರೆ ಕಾರ್ಮಿಕರ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಯಮ ಹಾಗೂ ಸಕಾಲ ಕಾಯ್ದೆಯ ಪ್ರಕಾರ ಕಾರ್ಮಿಕರು ವಿವಾಹವಾದ 6 ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಿದ ನಂತರ ನಿಗದಿತ ದಿನಗಳಲ್ಲಿ ಮದುವೆ ಧನ ಸಹಾಯದ ಮೊತ್ತ ₹ 60 ಸಾವಿರ ಬಿಡುಗಡೆ ಮಾಡಬೇಕು. ಆದರೆ, ತಾಲೂಕಿನಲ್ಲಿ ಈ ರೀತಿ ಸಲ್ಲಿಕೆಯಾದ ಸುಮಾರು 200 ಅರ್ಜಿಗಳಿಗೆ (2023ರಲ್ಲಿ ವಿವಾಹವಾದವರದು ಸೇರಿ) ಈ ವರೆಗೂ ಹಣ ಬಿಡುಗಡೆಯಾಗಿಲ್ಲ. ಈ ಕುರಿತು ಜಿಲ್ಲೆಯ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಹಿರೇಕೆರೂರ ತಾಲೂಕಿನಲ್ಲಿ ಮಾತ್ರ ಅಲ್ಲಿನ ಶಾಸಕರ ಮುತುವರ್ಜಿಯಿಂದಾಗಿ ಎಲ್ಲ ವಿವಾಹ ಧನ ಸಹಾಯ ಹಾಗೂ ಇತರ ಸೌಲಭ್ಯಗಳ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಿಸಿ ಹಣ ಬಿಡುಗಡೆಯಾಗಿದೆ. ನಿರ್ಮಾಣ ಹಂತದ ಪ್ರತಿ ಕಟ್ಟಡದ ಮಾಲೀಕರು ಸರ್ಕಾರಕ್ಕೆ ಕಾರ್ಮಿಕರ ಕಲ್ಯಾಣ ನಿಧಿ ಸಲುವಾಗಿ ಸೆಸ್ ಭರಿಸುತ್ತಾರೆ. ಆ ಹಣವನ್ನಾದರೂ ಕಾರ್ಮಿಕರಿಗೆ ಕೊಡಬೇಕು. ಕಾರ್ಮಿಕರ ಮಕ್ಕಳಿಗೆ ನೀಡಬೇಕಾದ ಲ್ಯಾಪ್‌ಟ್ಯಾಪ್ ಕಳುವಾಗಿವೆ. ಜಿಲ್ಲೆಯಲ್ಲಿ ಅನೇಕ ಕಾರ್ಮಿಕರು ಕಾರ್ಡ ಡಿಲೀಟ್ ಮಾಡಲಾಗಿದೆ. ಇದರ ಬಗ್ಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅವರು ಮನೆಯ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಅಸ್ಲಾಂ ಪಣೆಬದ, ನಾರಾಯಣ ಅಂತರವಳ್ಳಿ, ರಾಜಪ್ಪ ಬಾರ್ಕಿ, ಸುನೀಲ ಬೆಟಗೇರಿ, ವಿಶ್ವನಾಥ ಕಮ್ಮಾರ ಸುದ್ದಿಗೋಷ್ಠಿಯಲ್ಲಿದ್ದರು.