ಧರ್ಮ ಪರಿಪಾಲನೆಯಾಗದೇ ಅಂತರಂಗ ಶುದ್ಧಿಯಾಗದು: ರಂಭಾಪುರಿ ಶ್ರೀ

| Published : Mar 10 2025, 12:19 AM IST

ಧರ್ಮ ಪರಿಪಾಲನೆಯಾಗದೇ ಅಂತರಂಗ ಶುದ್ಧಿಯಾಗದು: ರಂಭಾಪುರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವ ಧರ್ಮ ಉಳಿದು ಬೆಳೆದರೆ ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಗೊಳ್ಳಲು ಸಾಧ್ಯ. ಸರ್ವಧರ್ಮಗಳ ರಕ್ಷಾ ಕವಚ ಮಾನವ ಧರ್ಮ ಎಂಬುದನ್ನು ಮರೆಯಬಾರದು.

ಬ್ಯಾಡಗಿ: ಧರ್ಮ ಪರಿಪಾಲನೆಯಾಗದೇ ಅಂತರಂಗ ಶುದ್ಧಿಯಾಗದು. ಭಕ್ತಿ ತೋರದೇ ಭಾವ ಶುದ್ಧಿಯಾಗದು. ಇವೆರಡೂ ಇಲ್ಲದಿದ್ದರೇ ಮನುಷ್ಯನ ಬದುಕು ಪರಿಪೂರ್ಣವಾಗಲು ಸಾಧ್ಯವಿಲ್ಲ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ತಾಲೂಕಿನ ಗುಡ್ಡದಮಲ್ಲಾಪುರ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಮತ್ತು ಮೂಕಪ್ಪ ಶ್ರೀಗಳ ತುಲಾಭಾರದ ಅಂಗವಾಗಿ ಜರುಗಿದ ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಾನವನ ಬುದ್ಧಿಶಕ್ತಿ ಬೆಳೆದಷ್ಟು ಭಾವನೆಗಳು ಬೆಳೆಯುತ್ತಿಲ್ಲ. ಹೀಗಾಗಿ ಸಮಾಜದಲ್ಲಿ ಸಂಘರ್ಷಗಳು ಹೆಚ್ಚಾಗುತ್ತಿವೆ. ಧರ್ಮದ ಆದರ್ಶಗಳ ಪರಿಪಾಲನೆ ಮಾಡುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಸಂಸ್ಕಾರ, ಸದ್ವಿಚಾರಗಳ ಕೊರತೆ ಹೆಚ್ಚಾಗಿದೆ. ಎಲ್ಲೆಡೆ ಅಶಾಂತಿ, ಅತೃಪ್ತಿ ಮನೋಭಾವ ಹೆಚ್ಚುತ್ತಿರುವುದು ನೋವಿನ ಸಂಗತಿ ಎಂದರು.

ಮಾನವ ಧರ್ಮ ಉಳಿದು ಬೆಳೆದರೆ ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಗೊಳ್ಳಲು ಸಾಧ್ಯ. ಸರ್ವಧರ್ಮಗಳ ರಕ್ಷಾ ಕವಚ ಮಾನವ ಧರ್ಮ ಎಂಬುದನ್ನು ಮರೆಯಬಾರದು. ವೀರಶೈವ ಧರ್ಮ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾ ಬಂದಿದೆ. ರೇಣುಕಾಚಾರ್ಯರ ವಿಶ್ವ ಬಂಧುತ್ವದ ಸಂದೇಶಗಳು ಜಗತ್ತಿಗೆ ಸಂಜೀವಿನಿಯಾಗಿವೆ ಎಂದರು.ಗುಡ್ಡದ ಮಲ್ಲಾಪುರ ಕ್ಷೇತ್ರ ಜಾಗೃತ ಸ್ಥಳವಾಗಿದ್ದು, ಲಿಂ. ಹುಚ್ಚೇಶ್ವರ ಶ್ರೀಗಳ ತಪಸ್ಸಿನ ಶಕ್ತಿ ಅದ್ಭುತವಾಗಿದೆ. ವೃಷಭರೂಪಿ ಮೂಕಪ್ಪಶ್ರೀಗಳಿಗೆ ತಮ್ಮ ಧರ್ಮದ ಅಧಿಕಾರ ಹಸ್ತಾಂತರಿಸಿ ಆಶೀರ್ವದಿಸಿದ್ದು, ಪರಂಪರಾಗತ ಉಭಯ ಮೂಕಪ್ಪ ಶಿವಾಚಾರ್ಯ ಸ್ವಾಮಿಗಳು ಧರ್ಮಮಾರ್ಗದಲ್ಲಿ ನಡೆದು ಸಕಲ ಸದ್ಭಕ್ತರಿಗೆ ಒಳಿತನ್ನು ಉಂಟು ಮಾಡುತ್ತಿದ್ದಾರೆ ಎಂದರು.ರಾಣಿಬೆನ್ನೂರು ಶನೈಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಶ್ರೀ ಮಾತನಾಡಿ, ಕಳೆದ 51 ವರ್ಷದ ಹಿಂದೆ ಲಿಂ. ವೀರಗಂಗಾಧರ ಜಗದ್ಗುರುಗಳು ಆಗಮಿಸಿ ಆಶೀರ್ವಾದ ಮಾಡಿದ ಸಂದರ್ಭ ಮರೆಯಲಾಗದು. ಇದೀಗ ಶ್ರೀಮಠದ ಕಾರ್ಯಕ್ರಮಕ್ಕೆ ರಂಭಾಪುರಿ ಪೀಠದ ಜಗದ್ಗುರುಗಳವರನ್ನು ಬರಮಾಡಿಕೊಂಡು ಬೃಹತ್ ಸಮಾರಂಭ ಹಮ್ಮಿಕೊಂಡಿದ್ದು ಅತ್ಯಂತ ಹರುಷ ತಂದಿದೆ ಎಂದರು.

ಇದಕ್ಕೂ ಮುನ್ನ ಬಾಳೆಹೊನ್ನೂರು ರಂಭಾಪುರಿ ಶ್ರೀಗಳು ಮಹಾರಥೋತ್ಸವದಲ್ಲಿ ಪಾಲ್ಗೊಂಡು, ಮಲ್ಲಿಕಾರ್ಜುನ ಸ್ವಾಮಿ-ಭ್ರಮರಾಂಬಿಕಾ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು.ಸಭೆಯಲ್ಲಿ ಮಡ್ಲೂರಿನ ಮುರುಘರಾಜೇಂದ್ರ ಶ್ರೀ, ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶ್ರೀ, ದಾಸೋಹಮಠದ ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿ ದಾಸೋಹಮಠ, ಮಂಜಯ್ಯಸ್ವಾಮಿ ಹಿರೇಮಠ, ಮಂಜನಗೌಡ ಲಿಂಗನಗೌಡ್ರ, ರವೀಂದ್ರ ಹೊನ್ನಾ ಳಿ, ಪ್ರಭುಗೌಡ ಪಾಟೀಲ ಹಾಗೂ ಭಕ್ತರು ಮುಖಂಡರು ಉಪಸ್ಥಿತರಿದ್ದರು.ಡಾ. ಗುರುಪಾದಯ್ಯ ಸಾಲಿಮಠ, ಗಂಗಾಧರಸ್ವಾಮಿ ಹಿರೇಮಠ ಮತ್ತು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದ ಘೋಷ ಕಾರ್ಯಕ್ರಮ ಜರುಗಿದವು.ನಾಳೆ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಸಭೆ

ರಾಣಿಬೆನ್ನೂರು: ನಗರದ ಹಳೆ ಪಿ.ಬಿ. ರಸ್ತೆ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಮಾ. 11ರಂದು ಸಂಜೆ 4.30ಕ್ಕೆ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಸಭೆಯನ್ನು ಕರೆಯಲಾಗಿದೆ. ನೇಕಾರ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಜಿಲ್ಲಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.