ಒಂದು ಲಕ್ಷ ಬಾಲಕಿಯರಿಗೆ ಕ್ಯಾನ್ಸರ್ ಲಸಿಕೆ ಗುರಿ

| N/A | Published : Jul 13 2025, 01:18 AM IST / Updated: Jul 13 2025, 12:11 PM IST

ಸಾರಾಂಶ

ಒಂದು ಲಕ್ಷಕ್ಕೂ ಹೆಚ್ಚು ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್ (ಸರ್ವೈಕಲ್ ಕ್ಯಾನ್ಸರ್) ಲಸಿಕೆಯನ್ನು ಉಚಿತವಾಗಿ ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಇನ್ನರ್ ವೀಲ್ ಸಂಸ್ಥೆ 2025-26ನೇ ಸಾಲಿನಲ್ಲಿ ಗುರಿ ಹೊಂದಿದೆ ಎಂದು ಹೊಸಪೇಟೆ ಇನ್ನರ್‌ವೀಲ್ 316ರ ಜಿಲ್ಲಾಧ್ಯಕ್ಷೆ ಜಯಶ್ರೀ ರಾಜಗೋಪಾಲ್ ತಿಳಿಸಿದರು.

ಹೊಸಪೇಟೆ: ಒಂದು ಲಕ್ಷಕ್ಕೂ ಹೆಚ್ಚು ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್ (ಸರ್ವೈಕಲ್ ಕ್ಯಾನ್ಸರ್) ಲಸಿಕೆಯನ್ನು ಉಚಿತವಾಗಿ ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಇನ್ನರ್ ವೀಲ್ ಸಂಸ್ಥೆ 2025-26ನೇ ಸಾಲಿನಲ್ಲಿ ಗುರಿ ಹೊಂದಿದೆ ಎಂದು ಇನ್ನರ್‌ವೀಲ್ 316ರ ಜಿಲ್ಲಾಧ್ಯಕ್ಷೆ ಜಯಶ್ರೀ ರಾಜಗೋಪಾಲ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೋಲಿಯೋ ನಿರ್ಮೂಲನೆಗೆ ರೋಟರಿ ಶ್ರಮಿಸಿದಂತೆ ಸರ್ವೈಕಲ್ ಕ್ಯಾನ್ಸರ್ ನಿರ್ಮೂಲನೆಗೆ ಇನ್ನರ್‌ವೀಲ್ ಪಣ ತೊಟ್ಟಿದೆ. ಸಂಸ್ಥೆಯಿಂದ ಈಗಾಗಲೇ ಸಾವಿರಾರು ಮಕ್ಕಳಿಗೆ ಲಸಿಕೆ ನೀಡಿದೆ. ಮುಂದಿನ ದಿನಗಳಲ್ಲಿ 10ರಿಂದ 18 ವರ್ಷದೊಳಗಿನ ಬಾಲಕಿಯರಿಗೆ ಪೋಷಕರ ಒಪ್ಪಿಗೆ ಮೇರೆಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. ಪ್ರತಿ ಲಸಿಕೆಗೆ ₹1200 ಬೆಲೆ ಇದ್ದು, ಎರಡು ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ಹಾಕಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯಲಾಗಿದೆ ಎಂದರು.

ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ ಮೇಲೆ ಕೇಂದ್ರೀಕೃತ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಂಗವಾಗಿ ಶಾಲೆಗಳಲ್ಲಿ ಸ್ವಚ್ಛ ಶೌಚಾಲಯಗಳ ನಿರ್ಮಾಣ ಹಾಗೂ ನಿರ್ವಹಣೆ, ಉತ್ತಮ, ಕೆಟ್ಟ ಸ್ಪರ್ಶದ ಅರಿವು ಮೂಡಿಸುವ ಜಾಗೃತಿ, ಪ್ಲಾಸ್ಟಿಕ್ ನಿರ್ಮೂಲನೆ, ಪರಿಸರ ಸಂರಕ್ಷಣೆ, ಯುವ ಸಮೂಹದ ಬೌದ್ಧಿಕ ಬೆಳವಣಿಗೆ, ಮಾರ್ಗದರ್ಶನ ಕಾರ್ಯಕ್ರಮಗಳ ಮೂಲಕ ಸಮಗ್ರ ಅಭಿವೃದ್ಧಿಗೆ ನಾವು ಕಟಿಬದ್ಧರಾಗಿದ್ದೇವೆ ಎಂದರು.

ಜು. 16ರಂದು ಅಧಿಕಾರ ಸ್ವೀಕಾರ ಸಮಾರಂಭ:  ಇನ್ನರ್ ವೀಲ್ 316ನೇ ಜಿಲ್ಲಾಧ್ಯಕ್ಷೆಯಾಗಿ ಜಯಶ್ರೀ ರಾಜಗೋಪಾಲ್ ಜು. 16ರಂದು ಹೊಸಪೇಟೆಯ ಪ್ರಿಯದರ್ಶಿನಿ ಪ್ರೈಡ್ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಅಸೋಸಿಯೇಷನ್ ಅಧ್ಯಕ್ಷೆ ಜ್ಯೋತಿ ಮಹಿಪಾಲ್ (ಕೋಲ್ಕತ್ತಾ), ನಿಕಟಪೂರ್ವ ಜಿಲ್ಲಾಧ್ಯಕ್ಷೆ ಸುಷ್ಮಾ ಪತಂಗೆ, ಹಿರಿಯ ಸದಸ್ಯರು ಹಾಗೂ ಕಾರ್ಯಕಾರಿ ಸಮಿತಿಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಪದಗ್ರಹಣ ಸಮಾರಂಭದ ಅಧ್ಯಕ್ಷೆ ಮೇಘನಾ ಹಿರೇಮಠ, ಉಪಾಧ್ಯಕ್ಷೆ ರಜನಿ ಮಾನೆ, ಕ್ಲಬ್ ಅಧ್ಯಕ್ಷೆ ನೈಮಿಷಾ, ಕಾರ್ಯದರ್ಶಿ ಆರತಿ ರಾಜಾಪುರ ಮತ್ತು ಸದಸ್ಯೆ ರೇಖಾ ಪ್ರಕಾಶ್ ಇದ್ದರು.

Read more Articles on