ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಚಿಕ್ಕ ವಯಸ್ಸಿನವರಲ್ಲಿ ಉಂಟಾಗುತ್ತಿರುವ ಹಠಾತ್ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕೊರೋನಾ ಸೋಂಕು ಅಥವಾ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಅಧ್ಯಕ್ಷತೆಯ ತಜ್ಞರ ಸಮಿತಿಯು ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದೆ.
ಕೋವಿಡ್-19 ಸಾಂಕ್ರಾಮಿಕ ನಂತರದಲ್ಲಿ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಯುವಜನರು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ಹಾಗೂ ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಡಾ.ಕೆ.ಎಸ್.ರವೀಂದ್ರನಾಥ್ ನೇತೃತ್ವದಲ್ಲಿ ಹತ್ತು ಮಂದಿ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿತ್ತು.
ಸಮಿತಿಯು ಏ.1 ರಿಂದ ಮೇ 31ರವರೆಗೆ ಜಯದೇವ ಆಸ್ಪತ್ರೆಗೆ ದಾಖಲಾದ 251 ಮಂದಿ ಹೃದ್ರೋಗಿಗಳ ಅಧ್ಯಯನ ನಡೆಸಿದ್ದು, ‘ಕೊರೋನಾ ಅಥವಾ ತಕ್ಷಣದ ಕಾಲಘಟ್ಟದಲ್ಲಿ ಉರಿಯೂತ ಸಮಸ್ಯೆಯಿಂದ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗಿರಬಹುದು. ಆದರೆ, ಸಾಂಕ್ರಾಮಿಕದ ತೀವ್ರತೆ ಕಡಿಮೆಯಾದ ಒಂದು ವರ್ಷದ ಬಳಿಕವೂ ಕೋವಿಡ್‌ನಿಂದ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗಿರುವುದಕ್ಕೆ ಪೂರಕ ಅಂಶಗಳು ಪತ್ತೆಯಾಗಿಲ್ಲ. ಪ್ಯಾಂಡಮಿಕ್ ಮುಗಿದು ಮೂರು ವರ್ಷ ಕಳೆದಿದೆ. ಕೊರೋನಾದಿಂದ ಹಠಾತ್ ಹೃದಯಾಘಾತಗಳು ಉಂಟಾಗುತ್ತಿವೆ ಎಂಬುದು ವಿಶ್ವದ ವಿವಿಧೆಡೆ ನಡೆಸಿರುವ ಯಾವ ಅಧ್ಯಯನಗಳಲ್ಲೂ ಸಾಬೀತಾಗಿಲ್ಲ’ ಎಂದು ಸಮಿತಿ ಸ್ಪಷ್ಟಪಡಿಸಿದೆ.
ಒಟ್ಟಾರೆ ಸಣ್ಣ ವಯಸ್ಸಿನವರಲ್ಲಿ ಹೃದಯಾಘಾತ ಸಮಸ್ಯೆ ಉಂಟಾಗುತ್ತಿರುವುದು ಕಂಡು ಬಂದಿದೆ. ಇದಕ್ಕೆ ಕೋವಿಡ್ ನಂತರ ಬದಲಾದ ಆರೋಗ್ಯ ಶೈಲಿ, ಜೀವನ ವಿಧಾನ ಕಾರಣವಾಗಿರಬಹುದು. ಇದು ಸಾರ್ವಜನಿಕ ಆರೋಗ್ಯದ ಬಗ್ಗೆ ಆತಂಕ ಹೆಚ್ಚಿಸಿದೆ. ಈ ಬಗ್ಗೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ.
ವರದಿಯಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತಿರುವ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜಿನಂಥ ಅಪಾಯಗಳು ಕೋವಿಡ್ ನಂತರದಲ್ಲಿ ಏರಿಕೆಯಾಗಿರುವುದಾಗಿ ತಿಳಿಸಿದೆ. ಉದಾಹರಣೆಗೆ 2019 ಹಾಗೂ 2025ರ 40 ವರ್ಷದ ವಯಸ್ಸಿನ ಹೃದ್ರೋಗಿಗಳ ಅಧ್ಯಯನ ನಡೆಸಿದ್ದು, ಈ ಪೈಕಿ ಮಧುಮೇಹಿಗಳ ಪ್ರಮಾಣ ಶೇ.13.9 ರಿಂದ ಶೇ.20.5ಕ್ಕೆ, ಅಧಿಕರಕ್ತದೊತ್ತಡ ಶೇ.13.9 ರಿಂದ ಶೇ.17.6, ಕೊಬ್ಬಿನಾಂಶ ಸಮಸ್ಯೆ ಶೇ.34.8 ರಿಂದ ಶೇ.44.1 ರಷ್ಟು, ಧೂಮಪಾನಿಗಳ ಪ್ರಮಾಣ ಶೇ.48.8 ರಿಂದ ಶೇ.51ಕ್ಕೆ, ಅನುವಂಶಿಕ ಇತಿಹಾಸ ಶೇ.11.6 ರಿಂದ ಶೇ.14.7, ಬೊಜ್ಜು ಶೇ.9.3 ರಿಂದ ಶೇ.11.7 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಆತಂಕಕಾರಿ ಅಂಶ ಬಯಲು ಮಾಡಿದೆ.
ಶಾಲಾ ಮಟ್ಟದಲ್ಲೇ ಹೃದಯ ತಪಾಸಣೆ:
ಶಾಲಾ ಮಟ್ಟದಲ್ಲೇ ಹೃದಯ ತಪಾಸಣೆ ಶುರು ಮಾಡಬೇಕು. 10ನೇ ತರಗತಿ ಅಥವಾ 15 ವರ್ಷದ ವಯಸ್ಸಿನವರಲ್ಲಿ ವೈದ್ಯಕೀಯ ತಪಾಸಣೆ ನಡೆಸಬೇಕು. ಹೃದಯ ಸಂಬಂಧಿ ಸಮಸ್ಯೆ, ಅಧಿಕ ರಕ್ತದೊತ್ತಡ, ಬೊಜ್ಜು, ಇನ್ಸುಲಿನ್ ಸಮಸ್ಯೆ, ಅನುವಂಶಿಕ ಕಾಯಿಲೆ ಕುರಿತು ಚಿಕ್ಕ ವಯಸ್ಸಿನಲ್ಲೇ ತಪಾಸಣೆ ನಡೆಸಬೇಕು. ಈ ಕುರಿತು ಸಾರ್ವಜನಿಕ ಆರೋಗ್ಯ ಅಭಿಯಾನ ನಡೆಸಬೇಕು. ಹೃದಯ ಸಂಬಂಧಿ ಸಮಸ್ಯೆ, ಉತ್ತಮ ಆಹಾರ ಕ್ರಮ, ಜೀವನಶೈಲಿ ರೂಢಿಸಿಕೊಳ್ಳಲು ಉತ್ತೇಜಿಸಬೇಕು ಎಂದು ಸಲಹೆ ನೀಡಿದೆ.
ಧೂಮಪಾನಿಗಳಲ್ಲೇ ಅಪಾಯ ಹೆಚ್ಚು:
ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗಿರುವ ಅಪಾಯಕಾರಿ ಅಂಶಗಳ ಪರಿಶೀಲನೆ ವೇಳೆ ಧೂಮಪಾನ ಮಾಡುವವರಿಗೇ ಹೆಚ್ಚು ಜನರಿಗೆ (ಶೇ.42.10) ಹೃದಯ ಸಮಸ್ಯೆ (ಸಿಎಡಿ) ಉಂಟಾಗಿದೆ. ನಂತರದ ಸ್ಥಾನದಲ್ಲಿ ಅಧಿಕ ರಕ್ತದೊತ್ತಡ (ಶೇ.36.84) ಹಾಗೂ ಕೊಬ್ಬಿನಾಂಶ ಸಮಸ್ಯೆ (ಶೇ.36.84) ಹೊಂದಿರುವವರು ಇದ್ದಾರೆ.
ಸಮಿತಿಯು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದವರಲ್ಲಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ 32 ಮಹಿಳೆಯರು ಸೇರಿ 251 ರೋಗಿಗಳನ್ನು ಸಮೀಕ್ಷೆಗೆ ಒಳಪಡಿಸಿತ್ತು.
ವರದಿ ಪ್ರಕಾರ ಅಧ್ಯಯನಕ್ಕೆ ಒಳಪಟ್ಟ 251 ರೋಗಿಗಳಲ್ಲಿ 87 ರೋಗಿಗಳು ಮಧುಮೇಹಿಗಳಾಗಿದ್ದರೆ, 102 ಮಂದಿ ಅಧಿಕ ರಕ್ತದೊತ್ತಡ ಹೊಂದಿದ್ದಾರೆ. 35 ಜನ ಕೊಬ್ಬಿನಾಂಶದ ಸಮಸ್ಯೆ ಎದುರಿಸುತ್ತಿದ್ದಾರೆ. 40 ಜನರಲ್ಲಿ ಅನುವಂಶಿಕವಾಗಿ ಹೃದಯ ಕಾಯಿಲೆಗಳ ಇತಿಹಾಸ ಹೊಂದಿದ್ದಾರೆ.
111 ಮಂದಿ ಧೂಮಪಾನಿಗಳಾಗಿದ್ದು, 77 ಮಂದಿ ಮಂದಿಗೆ ಯಾವುದೇ ಅಪಾಯಕಾರಿ ಅಂಶಗಳು ಇರಲಿಲ್ಲ. ಅಧ್ಯಯನಕ್ಕೆ ಒಳಪಟ್ಟ 251 ರೋಗಿಗಳಲ್ಲಿ 19 ಮಂದಿಗೆ ಕೊರೋನಾ ಸೋಂಕಿನ ಇತಿಹಾಸವಿತ್ತು. ಈ ಪೈಕಿ 7 ಮಂದಿ ಮಧುಮೇಹ ಮತ್ತು 7 ಮಂದಿ ಅಧಿಕ ರಕ್ತದೊತ್ತಡ ಹೊಂದಿದ್ದು, ಇಬ್ಬರು ಕೌಟುಂಬಿಕವಾಗಿ ಹೃದಯ ಕಾಯಿಲೆಗಳ ಇತಿಹಾಸ ಹೊಂದಿದ್ದರು, ಎಂಟು ಜನರಲ್ಲಿ ಯಾವುದೇ ಅಪಾಯಕಾರಿ ಅಂಶಗಳು ಪತ್ತೆಯಾಗಿರಲಿಲ್ಲ ಎಂದು ವರದಿ ತಿಳಿಸಿದೆ.
249 ಮಂದಿ ಕೋವಿಡ್ ಲಸಿಕೆ ಪಡೆದಿದ್ದರು:
251 ರೋಗಿಗಳಲ್ಲಿ ಬಹುತೇಕ ಎಲ್ಲಾ 249 ಜನರು ಕೋವಿಡ್-19 ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 53 ಜನರು ಕೇವಲ ಒಂದು ಡೋಸ್ ಪಡೆದಿದ್ದರೆ, 180 ಜನ ಎರಡು ಡೋಸ್‌ಗಳನ್ನು ಮತ್ತು 17 ಜನ ಲಸಿಕೆಯ ಮೂರು ಡೋಸ್‌ಗಳನ್ನು ಪಡೆದಿದ್ದಾರೆ. 144 ಜನರು ಕೋವಿಶೀಲ್ಡ್ ಲಸಿಕೆ ಹಾಗೂ 64 ಜನ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ 52 ಮಂದಿಗೆ ತಾವು ಯಾವ ಲಸಿಕೆ ಪಡೆದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಲಸಿಕೆಯಿಂದ ಹೃದಯಕ್ಕೆ ರಕ್ಷಣೆ
ಕೊರೋನಾ ಸೋಂಕು ಮತ್ತು ಲಸಿಕೆ ಹಿಂದಿನ ಇತಿಹಾಸದೊಂದಿಗೆ ಹಠಾತ್ ಹೃದಯ ಸಂಬಂಧಿ ಘಟನೆಗಳ ನಡುವಿನ ಸಂಬಂಧ ಕುರಿತು ಅಧ್ಯಯನ ಮಾಡಲು ಎಲ್ಲಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಲೇಖನ, ಕ್ಲಿನಿಕಲ್ ಅಧ್ಯಯನ, ಕ್ಲಿನಿಕಲ್ ರಿಜಿಸ್ಟ್ರಿಗಳನ್ನು ತಜ್ಞರ ಸಮಿತಿ ವಿಶ್ಲೇಷಿಸಿದೆ. ಜಾಗತಿಕವಾಗಿ ಪ್ರಕಟವಾದ ಹೆಚ್ಚಿನ ಅಧ್ಯಯನಗಳು ಮತ್ತು ವರದಿಗಳು ಸಹ ಕೋವಿಡ್ ಲಸಿಕೆ ಮತ್ತು ಹಠಾತ್ ಹೃದಯ ಸಂಬಂಧಿ ಸಮಸ್ಯೆಗಳ ನಡುವೆ ಯಾವುದೇ ಸಂಬಂಧವನ್ನು ಸಾಬೀತುಪಡಿಸಿಲ್ಲ. ಬದಲಿಗೆ ಕೋವಿಡ್ ಲಸಿಕೆ ದೀರ್ಘಾವಧಿಯಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ವಿರುದ್ಧ ರಕ್ಷಣಾತ್ಮಕವಾಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ತಜ್ಞರ ಶಿಫಾರಸುಗಳೇನು?:
ಯುವ ಜನರಲ್ಲಿ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಹಠಾತ್ ಸಾವುಗಳಿಗೆ ಸಂಬಂಧಿಸಿದಂತೆ ಹೃದ್ರೋಗ ಸರ್ವೇಕ್ಷಣಾ ಕಾರ್ಯಕ್ರಮ ಜಾರಿಗೊಳಿಸಬೇಕು. ರಾಷ್ಟ್ರೀಯ ಮಟ್ಟದಲ್ಲಿ ನೋಂದಣಿ ಶುರು ಮಾಡಬೇಕು.
- ಶಾಲಾ ಹಂತದಲ್ಲಿಯೇ 10ನೇ ತರಗತಿ ಅಥವಾ 15ನೇ ವರ್ಷದ ವಯಸ್ಸಿನ ಮಕ್ಕಳಿಂದಲೇ ಹೃದಯ ಸೇರಿ ವಿವಿಧ ಅನಾರೋಗ್ಯಗಳ ಬಗ್ಗೆ ತಪಾಸಣೆ ನಡೆಸಬೇಕು.
- ಹೃದಯ ಸಂಬಂಧಿ ಕಾಯಿಲೆಗಳು, ಅವುಗಳ ಕಾರಣಗಳು, ಅಪಾಯದ ಅಂಶಗಳು, ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಆಹಾರ ಮತ್ತು ಜೀವನಶೈಲಿ ಬದಲಾವಣೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಅಭಿಯಾನ ಕೈಗೊಳ್ಳಬೇಕು.
- ದೈಹಿಕ ಚಟುವಟಿಕೆ ಉತ್ತೇಜಿಸುವುದು, ಧೂಮಪಾನ ತ್ಯಜಿಸುವುದು, ಡಿಜಿಟಲ್ ಸಾಧನಗಳ ವೀಕ್ಷಣೆ ಸಮಯ ಕಡಿಮೆ ಮಾಡಿ ಸಾಕಷ್ಟು ನಿದ್ರೆಗೆ ಆದ್ಯತೆ ನೀಡುವುದು.
- ಸಕ್ಕರೆ ಮತ್ತು ಉಪ್ಪು ಸೇವನೆ ಕಡಿಮೆ ಮಾಡುವುದು, ಒತ್ತಡ ನಿಭಾಯಿಸುವುದು.
ವಿಸ್ತೃತ ಹಾಗೂ ದೊಡ್ಡ ಮಟ್ಟದ ಅಧ್ಯಯನ ಅಗತ್ಯ
ಹಠಾತ್ ಹೃದಯಾಘಾತದ ಸಾವುಗಳ ಹೆಚ್ಚಳಕ್ಕೆ ನಿರ್ದಿಷ್ಟವಾಗಿ ಒಂದೇ ಕಾರಣವಿಲ್ಲ. ಕೋವಿಡ್ ನಂತರದ ಅವಧಿಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳವಿದ್ದರೂ, ದೀರ್ಘಾವಧಿಯಲ್ಲಿ ಕೋವಿಡ್ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಕೋವಿಡ್ ಸೋಂಕು ಮತ್ತು ಲಸಿಕೆಯ ದೀರ್ಘಕಾಲಿನ ಅಡ್ಡ ಪರಿಣಾಮಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಅಧ್ಯಯನ ಹಾಗೂ ಸಂಶೋಧನೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನಂತಹ (ಐಸಿಎಂಆರ್) ಸಂಸ್ಥೆಗಳು ಅಧ್ಯಯನ ನಡೆಸಬೇಕಿದೆ ಎಂದು ತಜ್ಞರ ಸಮಿತಿಯು ವರದಿಯಲ್ಲಿ ತಿಳಿಸಿದೆ.
ಹಠಾತ್ ಹೃದಯಾಘಾತದ ಸಾವುಗಳ ಹೆಚ್ಚಳಕ್ಕೆ ನಿರ್ದಿಷ್ಟವಾಗಿ ಒಂದೇ ಕಾರಣವಿಲ್ಲ. ಕೋವಿಡ್ ನಂತರದ ಅವಧಿಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳವಿದ್ದರೂ, ದೀರ್ಘಾವಧಿಯಲ್ಲಿ ಕೋವಿಡ್ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಕೋವಿಡ್ ಸೋಂಕು ಮತ್ತು ಲಸಿಕೆಯ ದೀರ್ಘಕಾಲಿನ ಅಡ್ಡ ಪರಿಣಾಮಗಳ ಬಗ್ಗೆ ದೊಡ್ಡಮಟ್ಟಡದಲ್ಲಿ ಅಧ್ಯಯನ ಹಾಗೂ ಸಂಶೋಧನೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನಂತಹ (ಐಸಿಎಂಆರ್) ಸಂಸ್ಥೆಗಳು ಅಧ್ಯಯನ ನಡೆಸಬೇಕಿದೆ ಎಂದು ತಜ್ಞರ ಸಮಿತಿ ವರದಿಯಲ್ಲಿ ತಿಳಿಸಿದೆ.
ಧೂಮಪಾನಿಗಳಿಗೇ ಅಪಾಯ ಹೆಚ್ಚು
ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗಿರುವ ಅಪಾಯಕಾರಿ ಅಂಶಗಳ ಪರಿಶೀಲನೆ ವೇಳೆ ಧೂಮಪಾನ ಮಾಡುವವರಿಗೇ ಹೆಚ್ಚು ಜನರಿಗೆ (ಶೇ.42.10) ಹೃದಯ ಸಮಸ್ಯೆ (ಸಿಎಡಿ) ಉಂಟಾಗಿದೆ. ನಂತರದ ಸ್ಥಾನದಲ್ಲಿ ಅಧಿಕ ರಕ್ತದೊತ್ತಡ (ಶೇ.36.84) ಹಾಗೂ ಕೊಬ್ಬಿನಾಂಶ ಸಮಸ್ಯೆ (ಶೇ.36.84) ಹೊಂದಿರುವವರು ಇದ್ದಾರೆ ಎಂದು ಸಮಿತಿ ತಿಳಿಸಿದೆ.
ಹೃದಯಾಘಾತಕ್ಕೆ ನಿರ್ದಿಷ್ಟ ಕಾರಣವಿಲ್ಲ
ಹಠಾತ್ ಹೃದಯಾಘಾತದ ಸಾವುಗಳ ಹೆಚ್ಚಳಕ್ಕೆ ನಿರ್ದಿಷ್ಟವಾಗಿ ಒಂದೇ ಕಾರಣವಿಲ್ಲ. ಕೋವಿಡ್ ನಂತರದ ಅವಧಿಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳವಿದ್ದರೂ, ದೀರ್ಘಾವಧಿಯಲ್ಲಿ ಕೋವಿಡ್ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಕೋವಿಡ್ ಸೋಂಕು ಮತ್ತು ಲಸಿಕೆಯ ದೀರ್ಘಕಾಲಿನ ಅಡ್ಡ ಪರಿಣಾಮಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಅಧ್ಯಯನ ಹಾಗೂ ಸಂಶೋಧನೆಗಳ ಅಗತ್ಯವಿದೆ ಎಂದು ಸಮಿತಿ ಹೇಳಿದೆ.