ಪೊಲೀಸರ ನಿರ್ಲಕ್ಷ್ಯಕ್ಕೆ ಅಮಾಯಕ ಬಲಿ: ದಸಂಸ ಆರೋಪ

| Published : May 24 2025, 12:06 AM IST

ಸಾರಾಂಶ

ಜಯಕುಮಾರ್ ಹತ್ಯೆ ಪ್ರಕರಣದಲ್ಲಿ ಕಾಣದ ಕೈಗಳ ಹಸ್ತಕ್ಷೇಪವಿದೆ. ಪೊಲೀಸ್ ಅಧಿಕಾರಿಗಳೂ ಸೇರಿ ಜಿಲ್ಲಾಡಳಿತ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಈ ಪ್ರಕರಣವನ್ನು ತ್ವರಿತ ನ್ಯಾಯಾಂಗ ಇಲಾಖೆ ಅಥವಾ ನ್ಯಾಯಾಲಯದ ಕಣ್ಗಾವಲಿನಲ್ಲಿ ತನಿಖೆ ನಡೆಸಿ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೆ.ಆರ್.ಪೇಟೆ ತಾಲೂಕು ಕತ್ತರಘಟ್ಟ ಗ್ರಾಮದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ಬೆಂಕಿಗೆಸೆದು ಸುಟ್ಟುಹಾಕಿದ ಅಮಾನುಷ ಪ್ರಕರಣ ನಡೆದಿದೆ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆರೋಪಿಸಿದರು.

ಗ್ರಾಮದ ಸರ್ವೇ ನಂ. ೬ರಲ್ಲಿ ಭೂ ಮಂಜೂರಾತಿಯಾದ ೧.೨೦ ಎಕರೆ ಸೇರಿದಂತೆ ಸರ್ಕಾರಿ ಗೋಮಾಳ ೨.೨೦ ಎಕರೆ ಬಗರ್‌ಹುಕುಂ ಸಾಗುವಳಿ ಜಮೀನನ್ನು ವಶಪಡಿಸಿಕೊಳ್ಳುವ ಸಲುವಾಗಿ ಅನಿಲ್‌ಕುಮಾರ್ ಎಂಬಾತ ಜಯಕುಮಾರ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಬೆಂಕಿಗೆಸೆದಿರುವ ಪ್ರಕರಣವನ್ನು ದಸಂಸ ಉಗ್ರವಾಗಿ ಖಂಡಿಸುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಯಕುಮಾರ್‌ಗೆ ಸೇರಿದ ಜಮೀನಿನಲ್ಲಿ ಅನಿಲ್‌ಕುಮಾರ್ ಹುಲ್ಲಿನ ಮೆದೆಯನ್ನು ಹಾಕಿಕೊಂಡಿದ್ದು, ಅದನ್ನು ಖಾಲಿ ಮಾಡಿಕೊಡುವಂತೆ ಜಯಕುಮಾರ್ ಕೇಳಿದಾಗ ಅದು ನನ್ನ ಜಮೀನು ಎಂದು ವಾದಿಸಿದ್ದಾನೆ. ಈ ಸಂಬಂಧ ಮೇ ೧೫ರಂದು ಜಯಕುಮಾರ್ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲು ಹೋದಾಗ ದೂರನ್ನು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ್ದಾರೆ. ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿ ಜಯಕುಮಾರ್‌ಗೆ ರಕ್ಷಣೆ ಒದಗಿಸುವಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ. ಅದರ ಮರುದಿನವೇ ಜಯಕುಮಾರ್‌ನನ್ನು ಕೊಲೆ ಮಾಡಿ ಹುಲ್ಲಿನಮೆದೆಗೆ ಬೆಂಕಿ ಹಚ್ಚಿ ಶವವನ್ನು ಎಸೆಯಲಾಗಿದೆ. ಇದಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆಯೇ ನೇರ ಹೊಣೆಗಾರರು ಎಂದು ಆರೋಪಿಸಿದರು.

ಜಯಕುಮಾರ್ ಹತ್ಯೆ ಪ್ರಕರಣದಲ್ಲಿ ಕಾಣದ ಕೈಗಳ ಹಸ್ತಕ್ಷೇಪವಿದೆ. ಪೊಲೀಸ್ ಅಧಿಕಾರಿಗಳೂ ಸೇರಿ ಜಿಲ್ಲಾಡಳಿತ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಈ ಪ್ರಕರಣವನ್ನು ತ್ವರಿತ ನ್ಯಾಯಾಂಗ ಇಲಾಖೆ ಅಥವಾ ನ್ಯಾಯಾಲಯದ ಕಣ್ಗಾವಲಿನಲ್ಲಿ ತನಿಖೆ ನಡೆಸಿ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಪಡಿಸಿದರು.

ಗೋಷ್ಠಿಯಲ್ಲಿ ಕೆ.ಎಂ.ಅನಿಲ್‌ಕುಮಾರ್, ಬಿ.ಆನಂದ್, ಸುಶ್ಮಿತಾ ಆನಂದ್, ಶರಾವತಿ, ಮಹದೇವ, ಎನ್.ಟಿ.ಮುತ್ತುರಾಜು ಇತರರಿದ್ದರು.

----------------------------

ಶವ ಪರೀಕ್ಷೆ ವರದಿಯಿಂದ ಸತ್ಯ ಬಹಿರಂಗ: ಎಸ್‌ಪಿ

ಕನ್ನಡಪ್ರಭ ವಾರ್ತೆ ಮಂಡ್ಯ

ಕೆ.ಆರ್.ಪೇಟೆ ತಾಲೂಕು ಕತ್ತರಘಟ್ಟ ಗ್ರಾಮದ ಜಯಕುಮಾರ್ ಸಾವಿನ ಬಗ್ಗೆ ಆತನ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಶವ ಪರೀಕ್ಷೆ ವರದಿಯಿಂದ ಸತ್ಯಾಂಶ ಹೊರಬರಲಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಜಯಕುಮಾರ್ ಸಾವಿನ ಪ್ರಕರಣ ಕುರಿತು ಗ್ರಾಮದ ಅನಿಲ್‌ಕುಮಾರ್ ಅವರ ಮೇಲೆ ಶಂಕೆ ವ್ಯಕ್ತಪಡಿಸಿರುವುದರಿಂದ ಅನಿಲ್‌ಕುಮಾರ್‌ನನ್ನು ಬಂಧಿಸಲಾಗಿದೆ. ಜಯಕುಮಾರ್‌ಗೆ ಸೇರಿದ ಜಮೀನು ರಸ್ತೆ ಪಕ್ಕದಲ್ಲಿದ್ದು, ಹಲವಾರು ವರ್ಷಗಳಿಂದ ಅನಿಲ್‌ಕುಮಾರ್ ಹುಲ್ಲಿನ ಮೆದೆ ಹಾಕಿಕೊಂಡು ಬರುತ್ತಿದ್ದನೆಂದೂ ಹೇಳಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಈ ವಿಚಾರವಾಗಿ ಮೇ ೧೫ರಂದು ಇಬ್ಬರ ನಡುವೆ ಗಲಾಟೆ ನಡೆದಿರುವುದಾಗಿ ತಿಳಿದುಬಂದಿದೆ. ಆನಂತರದಲ್ಲಿ ಜಯಕುಮಾರ್ ಸಾವು ಹೇಗಾಯಿತು ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಸಾವಿಗೀಡಾದ ಸ್ಥಳದಲ್ಲಿ ಡೀಸೆಲ್ ಡಬ್ಬ ದೊರಕಿದೆ. ಅದು ಯಾರದ್ದು, ಅಲ್ಲಿಗೆ ತಂದವರು ಯಾರು ಎನ್ನುವ ಸತ್ಯವೂ ತಿಳಿಯಬೇಕಿದೆ. ಜಯಕುಮಾರ್ ಸಾವಿನ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಜಾಂಶ ಏನೆಂಬುದು ಗೊತ್ತಾಗಲಿದೆ ಎಂದು ಹೇಳಿದರು.