ದೇಶದ ಉತ್ತಮ ಭವಿಷ್ಯಕ್ಕೆ ಆವಿಷ್ಕಾರಗಳು ಸಹಕಾರಿ

| Published : Dec 03 2024, 12:33 AM IST

ಸಾರಾಂಶ

ಅವಿನ್ಯ ಹ್ಯಾಕತಾನ್ ಒಂದು ರಾಷ್ಟ್ರ ಮಟ್ಟದ ತಾಂತ್ರಿಕ ಹಬ್ಬವಾಗಿದ್ದು, ನಮ್ಮ ರಾಜ್ಯದ ಹಾಗೂ ಹೊರರಾಜ್ಯಗಳ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ತಮ್ಮ ತಾಂತ್ರಿಕ ಉತ್ಕ್ರುಷ್ಟತೆಯನ್ನು ಅನೇಕ ವಿಷಯಗಳಲ್ಲಿ ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜೀವನದಲ್ಲಿ ಎದುರಾಗುವ ಆತಂಕಗಳನ್ನು ನಿವಾರಿಸಿಕೊಂಡು ಹೊಸ ಆವಿಷ್ಕಾರಗಳನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸದಿದ್ದರೆ, ಬೇರೊಬ್ಬರಿಗೆ ಅನುಕೂಲ ಆಗಲಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.

ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯ, ಐಇಇಇ ಸಹಯೋಗದೊಂದಿಗೆ ಅವಿನ್ಯ ಹ್ಯಾಕತಾನ್- ನಾವಿನ್ಯತೆ ಮತ್ತು ಸೃಜನಶೀಲ ಪರಿಹಾರಗಳ ಕಲ್ಪನೆ ಎಂಬ ರಾಷ್ಟ್ರ ಮಟ್ಟದ ಹ್ಯಾಕತಾನ್ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರ ಮಟ್ಟದ ತಾಂತ್ರಿಕ ಹಬ್ಬ

ಅವಿನ್ಯ ಹ್ಯಾಕತಾನ್ ಒಂದು ರಾಷ್ಟ್ರ ಮಟ್ಟದ ತಾಂತ್ರಿಕ ಹಬ್ಬವಾಗಿದ್ದು, ನಮ್ಮ ರಾಜ್ಯದ ಹಾಗೂ ಹೊರರಾಜ್ಯಗಳ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ತಮ್ಮ ತಾಂತ್ರಿಕ ಉತ್ಕ್ರುಷ್ಟತೆಯನ್ನು ಅನೇಕ ವಿಷಯಗಳಲ್ಲಿ ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದರು. ಆರೋಗ್ಯ, ನಾವಿನ್ಯತೆ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೀನ್ ಮತ್ತು ನ್ಯೂಟನ್ ರವರ ಅನ್ವೇಷಣೆಗಳು ಪರಿಕಲ್ಪನೆಗಳ ವಿವರಣೆಯನ್ನು ನೀಡಿ, ಆಧ್ಯಾತ್ಮಿಕ ಚಿಂತನೆಯಲ್ಲಿ ಧ್ಯಾನದ ಮಹತ್ವ, ತಂತ್ರಜ್ಞಾನದ ವಿಶ್ಲೇಷಣೆ ದೇಶದ ಜಿ.ಡಿ.ಪಿ ಯಲ್ಲಿ ವಿವಿಧ ಕ್ಷೇತ್ರಗಳ ಪಾತ್ರ ಹೇಗಿರಬೇಕು ಎಂದು ತಿಳಿಸಿದರಲ್ಲದೇ, ದೇಶದ ಉತ್ತಮ ಭವಿಷ್ಯಕ್ಕೆ ಯುವ ವಿದ್ಯಾರ್ಥಿಗಳ ಅನ್ವೇಷಣೆಗಳು ಹೇಗೆ ಸಹಾಯವಾಗುತ್ತವೆ ಎಂದು ಮಾರ್ಗದರ್ಶನ ನೀಡಿದರು.

ಆಧ್ಯಾತ್ಮಿಕ- ವೈಜ್ಞಾನಿಕ ಚಿಂತನೆ

ಬೆಂಗಳೂರಿನ ಐಇಇಇ ವಿಭಾಗದ ಮುಖ್ಯಸ್ಥ ವೀರೇಂದ್ರಶೆಟ್ಟಿ ಮಾತನಾಡಿ, ವಿಶಾಲವಾದ ಎಸ್.ಜೆ.ಸಿ.ಐ.ಟಿ ಆವರಣ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಚಿಂತನೆಗಳ ತಾಣ ಎಂದು, ಅನ್ವೇಷಣೆಗೆ ನಿಜವಾದ ಅರ್ಥ ಸಿಗುವುದು ಸಾಮಾಜಿಕ ಸಮಸ್ಯೆಗಳ ಪರಿಹಾರ ನೀಡಿದಾಗ ಮಾತ್ರ ಎಂದರು.

ಬೆಂಗಳೂರು ವಿಭಾಗದ ಆರ್.ವಿ.ಸಿ.ಇ ಹಾಗೂ ಐಇಇಇ ಮಹಿಳಾ ಚಾಪ್ಟರ್ ನ ಪ್ರೋಫೇಸರ್ ಡಾ.ಕೆ.ಆರ್.ಉಷಾರಾಣಿ ಮಾತನಾಡಿ, ಮಹಿಳೆಯರ ಸಾಮಾಜಿಕ ಸಮಸ್ಯೆಗಳನ್ನು ವೈಜ್ಞಾನಿಕ ತಂತ್ರಜ್ಞಾನದಿಂದ ಬಗೆಹರಿಸುವ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಅನ್ವೇಷಣೆಗಳನ್ನು ಮಾಡಬೇಕು ಎಂದರು.

ಅನ್ವೇಷಣೆ ಮಾಡಬೇಕು

ಪ್ರಾಂಶುಪಾಲ ಡಾ.ಜಿ.ಟಿ ರಾಜು ಮಾತನಾಡಿ, ಪ್ರಸ್ತುತ ವಿದ್ಯಮಾನಗಳ ಅನುಕೂಲಕ್ಕೆ ತಕ್ಕಂತೆ ವಿಭಿನ್ನ ಚಿಂತನೆಯಿಂದ ಕಲ್ಪನೆಗಳನ್ನು ಉತ್ಪನ್ನಗಳಾಗಿ ಬದಲಾಯಿಸುವ ನವೀನ ಅನ್ವೇಷಣೆಗಳನ್ನು ಮಾಡಬೇಕು. ನಮ್ಮ ಬಿ.ಜಿ.ಎಸ್ ಸಂಸ್ಥೆಯ ವಿದ್ಯಾರ್ಥಿಗಳು ಜಾಗತಿಕ ಸವಾಲು ಸ್ಪರ್ಧೆಯಲ್ಲಿ ಆಯ್ಕೆಯಾಗಿ ನಮ್ಮ ದೇಶದವನ್ನು ಪ್ರತಿನಿಧಿಸಿದ್ದಾರೆ. ನಮ್ಮ ಭವಿಷ್ಯವನ್ನು ಬರೆಯಲಾಗಿಲ್ಲ ಅದನ್ನು ಕೋಡ್ ಮಾಡಲಾಗಿದೆ ಎಂದರು.

ವಿವಿಧ ಭಾಗಗಳ ತಾಂತ್ರಿಕ ಸಂಸ್ಥೆಗಳಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ನವೀನ ಅನ್ವೇಷಣೆಗಳ ಪ್ರದರ್ಶನವನ್ನು ಏರ್ಪಡಿಸಿ ಜ್ಞಾನ ವಿನಿಮಯ ಮಾಡಿಕೊಂಡರು.

ಸಮಾರಂಭದಲ್ಲಿ ಐಇಇಇ ಉಪಾಧ್ಯಕ್ಷ ಡಾ.ಎಂ.ಆರ್.ಚಂಗಪ್ಪ, ಆಂಧ್ರಪ್ರದೇಶ ಐ.ಎ.ಎಸ್ ಅಧಿಕಾರಿ ಗಿರೀಶ್,ಕೆ.ಎ.ಎಸ್ ಅಧಿಕಾರಿ ಸತೀಶ್, ರೂರ್ಕಿಯ ಐ.ಐ.ಟಿ ಪ್ರೋಫೇಸರ್ ಡಾ. ಪ್ರಾಂಜಲ ತಿವಾರಿ, ವಿದ್ಯುನ್ಮಾನ ವಿಭಾಗದ ಪ್ರೊಫೇಸರ್ ಆರ್.ರವಿಕಿರಣ್ ,ಕುಲಸಚಿವ ಜೆ.ಸುರೇಶ, ಡೀನ್ ಅಕಾಡೆಮಿಕ್ಸ್ ನ ಡಾ.ಬಿ.ಹೆಚ್.ಮಂಜುನಾಥ್ ಕುಮಾರ್ ವಿಭಾಗಗ ಮುಖ್ಯಸ್ಥರಾದ ಡಾ.ಸಿ.ರಂಗಸ್ವಾಮಿ,ಡಾ.ದೀಪ,ಡಾ.ಜಿ.ನಾರಾಯಣ್, ಡಾ.ಭಾರತಿ, ಡಾ.ಭಾರ್ಗವಿ, ಡಾ.ಭಾಸ್ಕರ್, ಪ್ರಾಧ್ಯಾಪಕರು, ಸಂಶೋಧಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಉದ್ಯಮ ವೃತ್ತಿಪರರು,ಗಣ್ಯರು ಇದ್ದರು.