ಸಾರಾಂಶ
ಭಾರತೀಯ ಕೃಷಿ ಸಂಶೋಧನಾ ಮಂಡಳಿ ನೀಡುವ ರಾಷ್ಟ್ರೀಯ ಮಟ್ಟದ ಇನ್ನೋವೇಟಿವ್ ಫಾರ್ಮರ್ ಕೃಷಿ ಪ್ರಶಸ್ತಿಗೆ ತಾಲೂಕಿನ ಕಾಗಾಲದ ಪ್ರಗತಿಪರ ಕೃಷಿಕ ಮತ್ತು ೬೦೦ಕ್ಕೂ ಹೆಚ್ಚು ಭತ್ತ ತಳಿಗಳ ಸಂರಕ್ಷಕ ನಾಗರಾಜ ಮೋಹನ ನಾಯ್ಕ ಆಯ್ಕೆಯಾಗಿದ್ದು, ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.
ಕುಮಟಾ: ಭಾರತೀಯ ಕೃಷಿ ಸಂಶೋಧನಾ ಮಂಡಳಿ ನೀಡುವ ರಾಷ್ಟ್ರೀಯ ಮಟ್ಟದ ಇನ್ನೋವೇಟಿವ್ ಫಾರ್ಮರ್ ಕೃಷಿ ಪ್ರಶಸ್ತಿಗೆ ತಾಲೂಕಿನ ಕಾಗಾಲದ ಪ್ರಗತಿಪರ ಕೃಷಿಕ ಮತ್ತು ೬೦೦ಕ್ಕೂ ಹೆಚ್ಚು ಭತ್ತ ತಳಿಗಳ ಸಂರಕ್ಷಕ ನಾಗರಾಜ ಮೋಹನ ನಾಯ್ಕ ಆಯ್ಕೆಯಾಗಿದ್ದು, ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಸುಭಾಷಚಂದ್ರನ್, ಸುಸ್ಥಿರ, ಪಾರಂಪರಿಕ ಹಾಗೂ ಸಾವಯವ ಕೃಷಿ ಇಂದಿನ ಅತ್ಯಗತ್ಯತೆಯಾಗಿದೆ. ನಮ್ಮ ದೇಸಿ ತಳಿಗಳ ಸಂರಕ್ಷಣೆಯ ಜತೆಗೆ ಕೃಷಿ ಸಾಧ್ಯತೆಗಳ ವಿನೂತನ ಯೋಜನೆಗಳು ಹೆಚ್ಚು ಪರಿಣಾಮಕಾರಿಯಾಗಿ ಪಸರಿಸುತ್ತಿವೆ. ಕಾಗಾಲದ ಯುವ ಕೃಷಿಕ ನಾಗರಾಜ ನಾಯ್ಕ ಕೇವಲ ೨ ಎಕರೆ ಗದ್ದೆಯನ್ನೇ ತಳಿಗಳ ಪ್ರಯೋಗಶಾಲೆಯಾಗಿ ಪರಿವರ್ತಿಸಿ ಕೃಷಿಯಲ್ಲಿ ದೇಶದ ಪರಮೋಚ್ಚ ಸಂಶೋಧನಾ ಸಂಸ್ಥೆ ಐಸಿಎಆರ್ ಗಮನ ಸೆಳೆದು, ರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗುತ್ತಿರುವುದು ಹೆಮ್ಮೆಯ ಸಂಗತಿ. ಕರ್ನಾಟಕದಿಂದ ಈ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕೃಷಿಕ ಇವರು ಎಂದರು.ನಾಗರಾಜ ನಾಯ್ಕ ಅವರ ಸಾಧನೆಯನ್ನು ನೆರೆಯ ಗೋವಾದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಮೂಲಕ ಐಸಿಎಆರ್ ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಿದೆ. ಫೆ. ೨೨ರಿಂದ ೨೪ರ ವರೆಗೆ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಅವರ ಪರಿಶ್ರಮ ಯುವ ಪೀಳಿಗೆಗೆ ಮಾದರಿಯಾಗಿದೆ. ಇನ್ನೂ ಹೆಚ್ಚಿನ ಸಾಧನೆಗಳು ಅವರಿಂದಾಗಲಿ. ಕೃಷಿಯಲ್ಲಿ ಇಂಥ ವಿನೂತನ ಚಿಂತನೆಗಳುಳ್ಳ ಸಮಾನ ಮನಸ್ಕರೊಂದಿಗೆ ನಾಗರಾಜ ನಾಯ್ಕ ಸಂಘಟಿತವಾಗಿ ಕೆಲಸ ಮಾಡಿದಲ್ಲಿ ತಳಿ ಸಂರಕ್ಷಣೆಯಲ್ಲಿ ಇನ್ನೂ ಹೆಚ್ಚಿನ ಕೆಲಸವಾಗಬಹುದು ಎಂದರು.
ಐಕ್ಯ ಸರ್ಕಾರೇತರ ಸಂಸ್ಥೆ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ, ಚಿಕ್ಕ ಹಳ್ಳಿಯಲ್ಲಿ ತಮಗಿರುವ ಸೀಮಿತ ಕೃಷಿ ಪರಿಸರದಲ್ಲಿ ಕಗ್ಗದಂತಹ ನೂರಾರು ಅಪರೂಪದ ತಳಿಗಳ ಸಂರಕ್ಷಣೆಯಲ್ಲಿ ತೊಡಗಿರುವ ನಾಗರಾಜ ನಾಯ್ಕ ಸಾಧನೆ ವಿಶೇಷವಾದದ್ದು. ಭತ್ತ ಕೃಷಿ ಮಾತ್ರವಲ್ಲದೇ ಶುದ್ಧ ಎಣ್ಣೆ, ಜೇನುತುಪ್ಪ ಮುಂತಾದವುಗಳನ್ನೂ ತಯಾರಿಸುತ್ತಾರೆ. ಅವರ ಕೃಷಿ ಪರಿಶ್ರಮದಲ್ಲಿ ಬೆಳೆದ ಕಗ್ಗ ಅಕ್ಕಿಯನ್ನು ಇಂದಿನ ಮಾರುಕಟ್ಟೆ ಸ್ವರೂಪಕ್ಕೆ ತಕ್ಕಂತೆ ಸುವ್ಯವಸ್ಥಿತ ರೂಪಕೊಟ್ಟು ಆಸಕ್ತರಿಗೆ ತಲುಪಿಸುವಲ್ಲಿ ಐಕ್ಯ ಸಂಸ್ಥೆಯೂ ಸಹಯೋಗ ನೀಡಿದೆ. ನಾಗರಾಜ ನಾಯ್ಕ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗುತ್ತಿರುವುದು ಸಂತಸದ ವಿಷಯ ಎಂದರು. ರೈತ ಹಿತ ರಕ್ಷಣೆಯ ಸವಾಲಿದೆ: ಇಂದಿನ ಕಾಲಘಟ್ಟದಲ್ಲಿ ಸಾಮಾನ್ಯ ರೈತನ ಪಾಲಿಗೆ ಭತ್ತ ಕೃಷಿ ಲಾಭದಾಯಕವಾಗಿಲ್ಲ. ಹೀಗಾಗಿ ರೈತ ಸಮುದಾಯದಲ್ಲಿ ತಳಿ ಸಂರಕ್ಷಣೆ ಮಾಡುವವರೇ ಇಲ್ಲ ಎಂಬಂತಾಗಿದೆ. ರೈತ ಪ್ರತಿವರ್ಷ ಬೆಳೆದು, ಪುನಃ ಬಿತ್ತಿದರೆ ಮಾತ್ರ ಈ ತಳಿ ಮುಂದುವರಿಯುತ್ತದೆ. ಇಂದಿನ ಸ್ಥಿತಿಯಲ್ಲಿ ಭತ್ತ ತಳಿಯಂತೆಯೇ ರೈತನ ಹಿತ ರಕ್ಷಣೆಯೂ ಸವಾಲಾಗಿದೆ. ತಳಿ ಸಂರಕ್ಷಣೆ ಹಾಗೂ ಕೃಷಿಯ ಮಹತ್ವದ ಬಗ್ಗೆ ಮಕ್ಕಳನ್ನು ಆರಂಭದಿಂದಲೇ ಶೈಕ್ಷಣಿಕವಾಗಿ ಪ್ರೇರೇಪಿಸಿದರೆ ಮಾತ್ರ ಪ್ರಯೋಜನವಾಗಬಹುದು. ಐಸಿಎಆರ್‌ನವರು ನನ್ನನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿಯಾಗಿದೆ ಎಂದು ನಾಗರಾಜ ಮೋಹನ ನಾಯ್ಕ, ಕಾಗಾಲ ಹೇಳುತ್ತಾರೆ.;Resize=(128,128))
;Resize=(128,128))
;Resize=(128,128))
;Resize=(128,128))