ಧಾರವಾಡ:

ಮೂಲ ವಿಜ್ಞಾನದ ಅರಿವಿಲ್ಲದಿದ್ದರೆ ಹೊಸತನ್ನು ಶೋಧಿಸಲಾಗುವುದಿಲ್ಲ. ಮೂಲ ವಿಜ್ಞಾನವನ್ನು ಅನ್ವಯಿಕ ವಿಜ್ಞಾನವನ್ನಾಗಿ ಬಳಸಿಕೊಂಡು ನವನವೀನ ವೈಜ್ಞಾನಿಕ ಪರಿಕಲ್ಪನೆಗಳನ್ನು ತಂತ್ರಜ್ಞಾನದ ನೆರವಿನಿಂದ ಸಾಕಾರಗೊಳಿಸಬಹುದು ಎಂದು ರಸಾಯನಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಟಿ. ನಂದಿಬೇವೂರ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ವೈಜ್ಞಾನಿಕ ಉಪಕರಣಗಳ ಕೇಂದ್ರ ಆಯೋಜಿಸಿದ್ದ “ಅತ್ಯಾಧುನಿಕ ವಿಶ್ಲೇಷಣಾತ್ಮಕ ಉಪಕರಣಗಳು ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಇಂದು ಎಲ್ಲರೂ ಕೃತಕ ಬುದ್ಧಿಮತ್ತೆಯ ಕುರಿತು ಜಪಿಸುತ್ತಿರುವಾಗ ಅದಕ್ಕೆ ತಾಯಿಯಂತಿರುವ ಮೂಲ ವಿಜ್ಞಾನವನ್ನು ಮರೆಯದೇ ಅರಿತುಕೊಳ್ಳುವುದು ಅವಶ್ಯಕ. ಈ ವರೆಗಿನ ಹೆಚ್ಚಿನ ನೊಬೆಲ್‌ ಪ್ರಶಸ್ತಿಗಳು ಬಂದಿರುವುದು ಮೂಲ ವಿಜ್ಞಾನ ಕ್ಷೇತ್ರಕ್ಕೆ. ಹೀಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮೀಕರಿಸಿಕೊಂಡು ಮುನ್ನಡೆಯುತ್ತಾ ಮಾನವ ಸಮಾಜವನ್ನು ಉದ್ಧರಿಸುವುದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ. ಡೆವಿಡ್‌ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕೆ ಪೂರಕವಾಗಿ ನಾವು ಬೇಕಾದ ವೈಜ್ಞಾನಿಕ ಸಲಕರಣೆಗಳ ಕುರಿತು ಅರಿತುಕೊಳ್ಳುವುದು ಅನಿವಾರ್ಯ. ಈ ಕಾರ್ಯಾಗಾರದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವ ಸಂಶೋಧಕರು ಮಾನವ ಸಮಾಜದ ಹಿತ ಕಾಪಾಡುವ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಮ್ಮ ದೇಶದ ಎಷ್ಟೋ ಗಿಡಮೂಲಿಕೆಗಳ ಕುರಿತು ಸಂಶೋಧನೆ ಮಾಡದೇ ನಿರ್ಲಕ್ಷ್ಯವಹಿಸಿದ್ದಕ್ಕೆ ವಿದೇಶಿಗರು ಸಂಶೋಧನೆ ಮಾಡಿ ನಮ್ಮ ನೆಲದ ಗಿಡಮೂಲಿಕೆಗಳ ಔಷಧಿಗಳ ಉತ್ಪಾದನೆಗಾಗಿ ಪೆಟೆಂಟ್‌ ಪಡೆದು ಶ್ರೀಮಂತರಾಗುತ್ತಿದ್ದಾರೆ. ಈ ದಿಶೆಯಲ್ಲಿ ನಮ್ಮ ಯುವ ಸಂಶೋಧಕರು ಗಮನಹರಿಸಬೇಕೆಂದು ಹೇಳಿದರು.

ವಿಶ್ವವಿದ್ಯಾಲಯದ ವೈಜ್ಞಾನಿಕ ಉಪಕರಣಗಳ ಕೇಂದ್ರದ ನಿರ್ದೇಶಕ ಪ್ರೊ. ರವೀಂದ್ರ ಕಾಂಬಳೆ ಮಾತನಾಡಿದರು. ಭೌತಶಾಸ್ತ್ರ ವಿಭಾಗದ ಪ್ರೊ. ರಾಜಶೇಖರ ಭಜಂತ್ರಿ, ಡಾ. ಪ್ರವೀಣಕುಮಾರ ಎಸ್.ಕೆ. ಇದ್ದರು. ಡಾ. ವಿಶ್ವನಾಥ ಚಚಡಿ ನಿರೂಪಿಸಿದರು. ಡಾ. ರವೀಂದ್ರ ಚೌಗಲೆ, ಡಾ. ಲೋಕೇಶ ಶಾಸ್ತ್ರಿ, ಶಿವಕುಮಾರ ಮ್ಯಾಗೋಟಿ, ಗಣೇಶ ಕುಂದರಗಿ, ಸಿ.ಆರ್. ಭಾರತಿ, ಸಿದ್ಧರಾಮ ಹಿಪ್ಪರಗಿ ಮತ್ತಿತರರು ಇದ್ದರು.