ನ. 3ರಂದು ಬೆಳಗ್ಗೆ 10 ಗಂಟೆಗೆ ದಿವೇಕರ ಕಾಲೇಜಿನ ಆವರಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರವಾರ- ಅಂಕೋಲಾ ಶಾಸಕ ಸತೀಶ ಕೃಷ್ಣ ಸೈಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಾರವಾರ: ವಿದ್ಯಾರ್ಥಿಗಳಲ್ಲಿ ವಾಣಿಜ್ಯ, ತಾಂತ್ರಿಕ ಹಾಗೂ ನಾಯಕತ್ವ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕೆನರಾ ವೆಲ್ಫೇರ್ ಟ್ರಸ್ಟ್ನ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ನ. 3ರಂದು ‘ಇನ್ನೋವೆಕ್ಸ್- 2026’ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ ಸ್ಪರ್ಧಾತ್ಮಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಆರ್. ತೋಳೆ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರ, ಅಂಕೋಲಾ, ಧಾರವಾಡ ಹಾಗೂ ಗೋವಾ ಗಡಿ ಭಾಗದ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.ನ. 3ರಂದು ಬೆಳಗ್ಗೆ 10 ಗಂಟೆಗೆ ದಿವೇಕರ ಕಾಲೇಜಿನ ಆವರಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರವಾರ- ಅಂಕೋಲಾ ಶಾಸಕ ಸತೀಶ ಕೃಷ್ಣ ಸೈಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಕೀರ್ತಿ ನಾಯಕ್, ನ್ಯಾಯವಾದಿ ರಾಮನಾಥ್ ವಿ. ಭಟ್ ಹಾಗೂ ಬ್ಯಾಂಕ್ ಮ್ಯಾನೇಜರ್ ನಿತಿನ್ ನಾಯಕ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಆರ್. ತೋಳೆ ಅಧ್ಯಕ್ಷತೆ ವಹಿಸಲಿದ್ದಾರೆ.ಅಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸೇಂಟ್ ಮಿಲಾಗ್ರಿಸ್ ಕೋ- ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಎಸ್. ಫರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ದಿವೇಕರ ಮಹಾವಿದ್ಯಾಲಯದ ಪಿಯು ಕಾಮರ್ಸ್, ಬಿಕಾಂ, ಬಿಸಿಎ ಹಾಗೂ ಎಂಕಾಂ ವಿಭಾಗಗಳು ಜಂಟಿಯಾಗಿ ಒಟ್ಟು 11 ನೂತನ ಸ್ಪರ್ಧೆಗಳನ್ನು ಆಯೋಜಿಸಿವೆ. ಪಿಯು ವಿಭಾಗದಿಂದ ಸಮೂಹ ನೃತ್ಯ, ಗಾಯನ ಹಾಗೂ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ. ಬಿಕಾಂ ವಿಭಾಗದಿಂದ ಬೆಸ್ಟ್ ಮ್ಯಾನೇಜರ್, ಚರ್ಚಾ ಸ್ಪರ್ಧೆ ಹಾಗೂ ಕಾಮರ್ಸ್ ಮಾಡೆಲ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಬಿಸಿಎ ವಿಭಾಗದಿಂದ ಡ್ರಾಯಿಂಗ್, ‘ನೋ- ಡಾಕ್ಸ್’ ಹಾಗೂ ‘ಟೆಕ್- ಟೆಕ್’ ತಾಂತ್ರಿಕ ಸ್ಪರ್ಧೆಗಳು ನಡೆಯಲಿವೆ. ಎಂಕಾಂ ವಿಭಾಗದಿಂದ ಉದ್ಯಮಶೀಲತೆಯನ್ನು ಉತ್ತೇಜಿಸುವ ‘ಶಾರ್ಕ್ ಟ್ಯಾಂಕ್’ ಸ್ಪರ್ಧೆ ಇರಲಿದೆ. ಇದರೊಂದಿಗೆ ವಿದ್ಯಾರ್ಥಿಗಳಿಂದ ರಂಗೋಲಿ, ಪೇಂಟಿಂಗ್, ಆಹಾರ ಮಳಿಗೆ ಹಾಗೂ ಆಟದ ಮಳಿಗೆಗಳ ಪ್ರದರ್ಶನವೂ ನಡೆಯಲಿದೆ.ಪಿಯು ಕಾಲೇಜಿನ ಪ್ರಾಂಶುಪಾಲೆ ಲಲಿತಾ ಶೆಟ್ಟಿ, ಬಿಸಿಎ ವಿಭಾಗದ ಮುಖ್ಯಸ್ಥ ಹರೀಶ ಕಾಮತ್, ಕಾರ್ಯಕ್ರಮದ ಸಂಘಟಕ ಶುಭಂ ತಳೇಕರ್ ಹಾಗೂ ಉಪನ್ಯಾಸಕ ರಾಜೇಶ ಮರಾಠೆ ಇದ್ದರು.