ರೈತರಿಗೆ ಸರ್ಕಾರ ಇನ್‍ಪುಟ್ ₹ 2500 ಸಬ್ಸಿಡಿ ನೀಡಿರುವುದನ್ನು ಖಂಡಿಸಿ ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಸಮಿತಿಯಿಂದ ರೈತರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ₹ 2600 ಡಿಡಿ ಕಳುಹಿಸಿದರು.
ನವಲಗುಂದ:
ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಹಾನಿಗೊಳಗಾದ ರೈತರಿಗೆ ಸರ್ಕಾರ ಇನ್‍ಪುಟ್ ₹ 2500 ಸಬ್ಸಿಡಿ ನೀಡಿರುವುದನ್ನು ಖಂಡಿಸಿ ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಸಮಿತಿಯಿಂದ ರೈತರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ₹ 2600 ಡಿಡಿ ಹಾಗೂ ಮನವಿ ಪತ್ರವನ್ನು ತಹಸೀಲ್ದಾರ್ ಸುಧೀರ ಸಾಹುಕಾರ ಮೂಲಕ ಸಿಎಂ ಡಿ.ಕೆ. ಶಿವಕುಮಾರಗೆ ಸಲ್ಲಿಸಿದರು.ರೈತ ಮುಖಂಡ ಲೋಕನಾಥ ಹೆಬಸೂರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯಾಗದೆ ರೈತ ಸಮುದಾಯ ಭೀಕರ ಬರಗಾಲ ಎದುರಿಸುತ್ತಿದ್ದರೂ ಸರ್ಕಾರ ಇನ್‍ಪುಟ್ ಸಬ್ಸಿಡಿ ನೆಪದಲ್ಲಿ ಕೇವಲ ₹ 2500 ರೈತರಿಗೆ ನೀಡುವುದಾಗಿ ಹೇಳುವ ಮೂಲಕ ನೊಂದ ರೈತರನ್ನು ಅವಮಾನಿಸಿದೆ. ಸರ್ಕಾರ ಕೂಡಲೇ ಇನ್‍ಪುಟ್ ಸಬ್ಸಿಡಿ ಮರುಶೀಲಿಸಿ ಮಧ್ಯಂತರ ಪರಿಹಾರವಾಗಿ ತಲಾ ರೈತರಿಗೆ ₹ 25000 ನೀಡಬೇಕೆಂದು ಆಗ್ರಹಿಸಿದರು.
ಸರ್ಕಾರದಲ್ಲಿ ರೈತರಿಗೆ ಪರಿಹಾರ ನೀಡಲು ಹಣ ವಿಲ್ಲದಿದ್ದರೆ ಸ್ವತಃ ರೈತರೇ ಭಿಕ್ಷೆ ಬೇಡಿಯಾದರೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಜಮೆ ಮಾಡುತ್ತೇವೆ ಎಂದರಲ್ಲದೇ ಅ. 7ರೊಳಗಾಗಿ ಪೂರ್ಣ ಪ್ರಮಾಣದಲ್ಲಿ ರೈತರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ನವಲಗುಂದ ಬಂದ್ ಮಾಡುವ ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡ ಜೆನ್ ಜಿ ಮಾದರಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ವೇಳೆ ಕಾನೂನು ಸುವ್ಯವಸ್ಥೆ ಹದಗೆಟ್ಟು ಅವಘಡಗಳು ನಡೆದಲ್ಲಿ ಸರ್ಕಾರವೇ ಹೊಣೆಗಾರವಾಗಲಿದೆ ಎಂದು ಹೆಬಸೂರ ಎಚ್ಚರಿಸಿದರು.ರಘುನಾಥ ನಡುವಿನಮನಿ ಮಾತನಾಡಿ, ಬಿಡದಿ ರೈತರ ಜಮೀನು ಕಬಳಿಸುವ ಕುರಿತು ಚರ್ಚೆ ಮಾಡಲಾಗುತ್ತಿದೆ ಹೊರತು ಕಷ್ಟದಲ್ಲಿರುವ ರೈತರ ಕುರಿತು ಚಿಂತನೆ ಮಾಡುತ್ತಿಲ್ಲ. ರೈತರ ಕಷ್ಟದಲ್ಲಿರುವ ಕುರಿತು ಚಿಂತನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಸುಧೀರ ಸಾಹುಕಾರ ಅವರು ರೈತರ ಮನವಿ ಸ್ವೀಕರಿಸಿದರು.ಪ್ರತಿಭಟನೆಯಲ್ಲಿ ಮಹಬೂಬಸಾಬ್ ನವಲಗುಂದ, ಮಹಾದೇವಿ ಹುಯಿಲಗೋಳ, ದೇವಪ್ಪ ಗುಡಿಸಾಗರ, ಗೌಡಪ್ಪಗೌಡ ದೊಡಮನಿ, ಮೈಲಾರಪ್ಪ ವೈದ್ಯ, ಭರಮಪ್ಪ ಕಾತರಕಿ, ಮಲ್ಲಿಕಾರ್ಜುನಗೌಡ ಪಾಟೀಲ, ಕಿರಣಕುಮಾರ ಕಟ್ಟಿ, ಈರಣ್ಣ ಕೇಸರಪ್ಪನವರ, ಶಿವಾನಂದ ಚಿಕ್ಕನರಗುಂದ, ಶಂಕರಗೌಡ ಮಳ್ಳಪ್ಪಗೌಡರ, ವೀರನಗೌಡ ಮುದಿಗೌಡರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.