ಭಾರತದ ಕಡಲ ಗಡಿಯನ್ನು ಮತ್ತಷ್ಟು ಭದ್ರಪಡಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ.

ವಾಯುಸೇನಾ ಮುಖ್ಯಸ್ಥರ ಸಮ್ಮುಖದಲ್ಲಿ ಸ್ವದೇಶಿ ನಿರ್ಮಿತ ಯುದ್ಧನೌಕೆ ಸೇವೆಗೆ ಸಮರ್ಪಣೆಕನ್ನಡಪ್ರಭ ವಾರ್ತೆ ಕಾರವಾರ

ಭಾರತದ ಕಡಲ ಗಡಿಯನ್ನು ಮತ್ತಷ್ಟು ಭದ್ರಪಡಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಭಾರತೀಯ ನೌಕಾಪಡೆಯ ಬಲವರ್ಧನೆಗೆ ಶಕ್ತಿ ತುಂಬಲು ‘ಐಎನ್‌ಎಸ್ ಮಾಲ್ವಾಣ್’ ಯುದ್ಧನೌಕೆಯನ್ನು ಅಧಿಕೃತವಾಗಿ ಸೇವೆಗೆ ಸಮರ್ಪಿಸಲಾಗಿದೆ. ವಿಶೇಷವೆಂದರೆ, ಕಾರವಾರದ ನೌಕಾನೆಲೆಯಲ್ಲಿಯೇ ಲೋಕಾರ್ಪಣೆಗೊಂಡ ಮೊದಲ ಭಾರತೀಯ ಯುದ್ಧನೌಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಾಯುಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ನೌಕೆಯನ್ನು ಲೋಕಾರ್ಪಣೆಗೊಳಿಸಿ, ಸಮುದ್ರ ಮಾರ್ಗದ ಸುರಕ್ಷತೆಯು ದೇಶದ ಆರ್ಥಿಕ ಪ್ರಗತಿ ಮತ್ತು ವ್ಯಾಪಾರ ವಹಿವಾಟಿಗೆ ಅತ್ಯಂತ ನಿರ್ಣಾಯಕವಾಗಿದೆ. ಕಾರವಾರದ ‘ಪ್ರಾಜೆಕ್ಟ್ ಸೀಬರ್ಡ್’ ನೌಕಾನೆಲೆಯು ವಿಶ್ವದಲ್ಲೇ ಒಂದು ಮಾದರಿ ನೌಕಾನೆಲೆಯಾಗಿ ಹೊರಹೊಮ್ಮಿದೆ ಎಂದು ಶ್ಲಾಘಿಸಿದರು.

ಅಲ್ಲದೇ ನೌಕಾಪಡೆಯು ಸ್ವದೇಶೀಕರಣದ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇದೇ ರೀತಿಯ ಸ್ವಾವಲಂಬನೆಯನ್ನು ವಾಯುಸೇನೆಯಲ್ಲೂ ಸಾಧಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಶೇ.80ರಷ್ಟು ದೇಶೀಯ ತಂತ್ರಜ್ಞಾನವನ್ನು ಬಳಸಿ ಈ ನೌಕೆಯನ್ನು ಸಿದ್ಧಪಡಿಸಲಾಗಿದ್ದು, ಇದು ಭಾರತೀಯ ರಕ್ಷಣಾ ಕ್ಷೇತ್ರದ ಶಕ್ತಿಯನ್ನು ಜಗತ್ತಿಗೆ ಸಾರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಿಯರ್ ಅಡ್ಮಿರಲ್, ಫ್ಲಾಗ್ ಆಫೀಸರ್ ಕರ್ನಾಟಕ ವಿಕ್ರಂ ಮೆನನ್, ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಈ ‘ಐಎನ್‌ಎಸ್ ಮಾಲ್ವಾಣ್’, 8 ಆಂಟಿ-ಸಬ್‌ಮರೀನ್ ವಾರ್‌ಫೇರ್ ಶಾಲೋ ವಾಟರ್‌ಕ್ರಾಫ್ಟ್ ಸರಣಿಯ ಎರಡನೇ ಯುದ್ಧನೌಕೆಯಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರ ವೀರ ಪರಂಪರೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಮಾಲ್ವಾಣ್ ಪಟ್ಟಣದ ಹೆಸರನ್ನು ಈ ನೌಕೆಗೆ ಇಡಲಾಗಿದೆ. ಈ ಹಿಂದೆ 1983ರಿಂದ 2003ರ ವರೆಗೆ ದೇಶ ಸೇವೆ ಸಲ್ಲಿಸಿದ್ದ ಹಳೆಯ ‘ಮಾಲ್ವಾಣ್’ ನೌಕೆಯ ಪರಂಪರೆಯನ್ನು ಇದು ಮುಂದುವರಿಸಲಿದೆ. ನೌಕೆಯ ಲಾಂಛನದಲ್ಲಿರುವ ಶಿವಾಜಿ ಮಹಾರಾಜರ ಶೌರ್ಯದ ಸಂಕೇತ ‘ಬಾಗ್ ನಖ’ (ಹುಲಿ ಉಗುರು) ಮತ್ತು "ನಿಶಬ್ದ ನಖಾ " ಎಂಬ ಧ್ಯೇಯವಾಕ್ಯವು, ಶತ್ರುಗಳ ಜಲಾಂತರ್ಗಾಮಿಗಳನ್ನು ಸದ್ದಿಲ್ಲದೆ ಬೇಟೆಯಾಡುವ ಈ ನೌಕೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಈ ವರ್ಷ ನೌಕಾಪಡೆಗೆ ಸೇರ್ಪಡೆಗೊಂಡ 7 ನೇ ನೌಕೆ ಇದಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ 12 ನೌಕೆಗಳು ಸೇರ್ಪಡೆಯಾಗಲಿವೆ ಎಂದು ತಿಳಿಸಿದರು.

ಆರಂಭದಲ್ಲಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜೋಶ್ ವಿಜೆ ಯುದ್ಧನೌಕೆ ಕುರಿತು ಮಾಹಿತಿ ನೀಡಿದರು. ಕೊಚ್ಚಿನ್ ಶಿಪ್‌ಯಾರ್ಡ್ ನಿರ್ಮಿಸಿದ ಅತಿದೊಡ್ಡ ಹಡಗು ಅಲ್ಲದಿದ್ದರೂ, ಇದರ ನಿರ್ಮಾಣದ ಆರಂಭಿಕ ಹಂತದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಯಿತು.

ಇದೀಗ ಸರಣಿಯ ಎರಡು ಹಡಗುಗಳನ್ನು ಯಶಸ್ವಿಯಾಗಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿರುವುದರಿಂದ ಆ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂಬ ವಿಶ್ವಾಸವಿದೆ. ಸರಣಿಯ ಮೂರನೇ ಹಡಗು ''''''''ಮಾಂಗ್ರೋಲ್'''''''' ಶೀಘ್ರದಲ್ಲೇ ಹಸ್ತಾಂತರಕ್ಕೆ ಸಿದ್ಧವಾಗಿದೆ. ಉಳಿದ ಹಡಗುಗಳ ನಿರ್ಮಾಣವೂ ಪ್ರಗತಿಯಲ್ಲಿದ್ದು, ಅವುಗಳನ್ನು ಕೂಡ ಹಂತ ಹಂತವಾಗಿ ಶೀಘ್ರದಲ್ಲೇ ನೌಕಾಪಡೆಗೆ ಒಪ್ಪಿಸಲಾಗುವುದು ಎಂದರು.

ಐಎನ್ಎಸ್‌ ಮಾಲ್ವಾಣ್‌ನ ಕಮಾಂಡರ್ ಜವಾಬ್ದಾರಿ ವಹಿಸಿಕೊಂಡ ಪ್ರವೀಣ್ ಕುಮಾರ್ ತಿವಾರಿ ಯುದ್ಧನೌಕೆಯ ಕಮಿಷನಿಂಗ್ ಆದೇಶ ಓದಿದರು.

ಪಶ್ಚಿಮ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್, ಯುದ್ಧನೌಕೆ ಉತ್ಪಾದನೆ ಮತ್ತು ಸ್ವಾಧೀನ ನಿಯಂತ್ರಕ ವೈಸ್ ಅಡ್ಮಿರಲ್ ಸಂಜಯ್ ಸಾಧು ಸೇರಿದಂತೆ ನೌಕಾಪಡೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿ ಹಾಗೂ ನೌಕಾನೆಲೆ ಅಧಿಕಾರಿಗಳ ಕುಟುಂಬಸ್ಥರು ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾದರು.ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಈಗಾಗಲೇ ಅತ್ಯಂತ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಈ ಜಂಟಿತನ ಮತ್ತು ಪರಸ್ಪರ ಸಹಕಾರ ಇನ್ನಷ್ಟು ವೃದ್ಧಿಯಾಗಲಿದೆ ಎಂಬ ವಿಶ್ವಾಸವಿದೆ. ಇತ್ತೀಚಿನ ಕಾರ್ಯಾಚರಣೆಗಳಲ್ಲಿ ಈ ಸಮನ್ವಯದ ಪರಿಣಾಮಕಾರಿತ್ವವನ್ನು ದೇಶ ಕಂಡಿದ್ದು, ಭವಿಷ್ಯದ ಯುದ್ಧಗಳ ಸ್ವರೂಪಕ್ಕೂ ಅದು ಮುನ್ನುಡಿಯಾಗಿದೆ. ಯಾವುದೇ ಭವಿಷ್ಯದ ಯುದ್ಧವನ್ನು ಒಂದೇ ಒಂದು ಸೇನಾ ವಿಭಾಗ ಗೆಲ್ಲಲು ಸಾಧ್ಯವಿಲ್ಲ. ವಾಯುಪಡೆ, ನೌಕಾಪಡೆ ಹಾಗೂ ಭೂಸೇನೆ ಸೇರಿದಂತೆ ಎಲ್ಲ ಸಶಸ್ತ್ರ ಪಡೆಗಳು ಒಂದೇ ರಾಷ್ಟ್ರದ ಶಕ್ತಿಯಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎನ್ನುತ್ತಾರೆ ಭಾರತೀಯ ವಾಯುಪಡೆಯ ಮುಖ್ಯಸ್ಥ ಎ.ಪಿ. ಸಿಂಗ್.