ಸಾಹಿತ್ಯಕ್ಕೂ, ಸಂಸಾರಕ್ಕೂ ಅವಿನಾಭಾವ ಸಂಬಂಧ: ಕಥೆಗಾರ ಡಾ. ಶ್ರೀಧರ ಬಳಗಾರ

| Published : May 13 2025, 01:30 AM IST

ಸಾಹಿತ್ಯಕ್ಕೂ, ಸಂಸಾರಕ್ಕೂ ಅವಿನಾಭಾವ ಸಂಬಂಧ: ಕಥೆಗಾರ ಡಾ. ಶ್ರೀಧರ ಬಳಗಾರ
Share this Article
  • FB
  • TW
  • Linkdin
  • Email

ಸಾರಾಂಶ

ರೂಪಾಂತರವಾಗದೇ ಜೀವ ವಿಕಾಸ ಆಗದು.

ಯಲ್ಲಾಪುರ: ಸಾಹಿತ್ಯಕ್ಕೂ ಮತ್ತು ಸಂಸಾರಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಕಥೆಗಾರ ಡಾ. ಶ್ರೀಧರ ಬಳಗಾರ ಹೇಳಿದರು.

ಮೇ ೧೧ರಂದು ತಾಲೂಕಿನ ಬೀಗಾರಿನ ಶಿವರಾಮ ಗಾಂವ್ಕರರ ಕಲ್ಮನೆಯ ಮನೆಯಂಗಳದಲ್ಲಿ ಸಾಹಿತ್ಯ ಚಿಂತನದ ೩ನೇ ವರ್ಷದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮನೆಯೆಂದರೆ ಸಾಂಸ್ಕೃತಿಕ ದಸ್ತಾವೇಜು. ಆದರಲ್ಲಿ ಊರು ಭೌಗೋಳಿಕ ನಕ್ಷೆ. ಅಲ್ಲಿ ಮದುವೆ, ಮುಂಜಿ ಕಾರ್ಯಕ್ರಮ ಭೌತಿಕ ಮತ್ತು ಲೌಕಿಕ ಕೆಲಸ ನಡೆಯುತ್ತಿಬೇಕು. ಅನ್ನ ಮತ್ತು ಆನಂದ ರೂಪಾಂತರಗೊಳ್ಳಲು ಮೂರು ತಲೆಮಾರುಗಳಿಂದ ಸಾಂಸ್ಕೃತಿಕ ಚಿಂತನೆಯನ್ನು ಗಮನಿಸಬೇಕಾಗುತ್ತದೆ. ಸಾಹಿತ್ಯ ಮತ್ತು ಕೃಷಿ ಬೇರೆ ಅಲ್ಲ. ಬೀಗಾರೆಂದರೆ ಬೀಗರಿಂದ ಕೂಡಿದ ಊರು. ಒಬ್ಬರು ಮತ್ತೊಬ್ಬರಿಗೆ ಅವಲಂಬನೆ ಇಟ್ಟುಕೊಂಡಿರುವ ಸಾವಯವ ಸಂಪ್ರದಾಯದ ತಲೆಮಾರು ಒಂದು ಕಡೆಯಾದರೆ, ಈ ಕಾಲಘಟ್ಟದಲ್ಲಿಯೂ ಸಮುದಾಯದ ಸಹಕಾರ ತೋರುತ್ತಿದ್ದಾರೆ. ಮುಂದಿನ ತಲೆಮಾರಿನವರು ಮದುವೆ ಸಂಪ್ರದಾಯ ತೊರೆದು ಆಧುನಿಕ ಸಂಕಟದ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ಈ ಮೂರು ತಲೆಮಾರುಗಳ ತೀರ್ಮಾನವನ್ನು ವಾಸ್ತವ ಎಂದು ಒಪ್ಪಿಕೊಳ್ಳಬೇಕು ಎಂದರು.

ರೂಪಾಂತರವಾಗದೇ ಜೀವ ವಿಕಾಸ ಆಗದು. ಬದಲಾದ ಸಾಂಸ್ಕೃತಿಕ ಸಂದರ್ಭಕ್ಕೆ ನಮ್ಮನ್ನು ನಾವು ಹೊಂದಿಕೊಳ್ಳಲಾಗದಿದ್ದರೆ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಬದಲಾದ ಸಂದರ್ಭಕ್ಕೆ ಗ್ರಾಮ ಜಗತ್ತಿನ ಸಾಂಸ್ಕೃತಿಕ ಸಂವಿಧಾನವು ರೂಪಾಂತರಕ್ಕೆ ಒಳಗಾಗಿದೆ. ತೇರು ಕಟ್ಟುವ ಜಾಗದಲ್ಲಿ ಟವರ್ ಬಂದಿದೆ. ಸಂಬಂಧಗಳ ನಡುವೆ ಸಂಪರ್ಕ ನುಸುಳಿದೆ. ಸಾಂಸ್ಕೃತಿಕ ಭೂಮಿ ಹಳ್ಳಿಗಳಲ್ಲಿ ಫಲವತ್ತಾಗಿದೆ. ಅದು ನಮ್ಮ ಸಾಹಿತ್ಯದಲ್ಲಿ ರೂಪಾಂತರವನ್ನು ಸೂಕ್ಷ್ಮವಾಗಿ ಗಮನಿಸುವಂತಾಗಬೇಕು. ಅಂತಹ ಸತ್ವ, ಸ್ವಾದದ ಕಾಯ್ದುಕೊಳ್ಳುವ ರೂಪುರೇಖೆ ನಮ್ಮದಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅರ್ಥಧಾರಿ ಎಂ.ಎನ್ ಹೆಗಡೆ ಹಳವಳ್ಳಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ಸಾಹಿತ್ಯ ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಪುಸ್ತಕಗಳು ಬೇಕಾದಷ್ಟು ಇದೀಗ ಓದುಗ ವಲಯದಲ್ಲಿ ಲಭ್ಯವಾಗುತ್ತಿದೆ. ಬರೆಯುವವರು ಭಾಷೆಯ ಬಗೆಗೆ ಕಾಳಜಿ, ಎಚ್ಚರವಹಿಸಬೇಕು ಎಂದರು.

ಕೃತಿಯ ಅವಲೋಕನ ಮಾತುಗಳನಾಡಿದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಜೀವಂತವಾಗಿರಲು ಹೊಸ ಹೊಳಹು ನೀಡಬೇಕು. ನಾವು ಮಾಡುವ ಕಾಯಕದಲ್ಲಿ ಪರಿಣಾಮದ ಸಾಧ್ಯತೆ ಇರಬೇಕಾದರೆ ಘಟನೆಯನ್ನು ಅನುಭವಿಸಬೇಕು. ನಮ್ಮ ಸಾಮಾಜಿಕ ಚಿಂತನೆ ಭವಿಷ್ಯದ ಚಿಂತನೆಯಾಗಿ ನೆರವಾಗಬೇಕು ಎಂದರು.

ಹರಿಪ್ರಕಾಶ ಕೋಣೆಮನೆ ಅವರ ವಿಸ್ತಾರ ಕೃತಿ ಕುರಿತು ಪತ್ರಕರ್ತ ವಿ.ಜಿ ಗಾಂವ್ಕರ, ದತ್ತಾತ್ರೇಯ ಭಟ್ಟ ಕಣ್ಣಿಪಾಲ, ಗಣಪತಿ ಮೆಣಸುಮನೆ, ನಾರಾಯಣ ಹೆಗಡೆ, ಡಾ.ಡಿ.ಕೆ ಗಾಂವ್ಕರ ವಿಶ್ಲೇಷಿಸಿದರು.

ಉಪನ್ಯಾಸಕ ಜಿ.ಕೆ. ಗಾಂವ್ಕರ್ ಮಾತನಾಡಿ, ಒತ್ತಡಗಳನ್ನು ಮೀರಿ ನಿಲ್ಲುವ ಕೆಲಸ ಸಾಹಿತ್ಯ ಚಿಂತನ ಕಾರ್ಯಕ್ರಮ ನಿರಂತರವಾಗಿ ನಡೆಯಬಲ್ಲದು. ಹೊಸ ಗ್ರಹಿಕೆ ಸಾಹಿತ್ಯ ಸಂದರ್ಭದ ಮೂಲಕ ಚರ್ಚೆ ಆಗಬೇಕಿದೆ. ಜ್ಞಾನ ಸಾಹಿತ್ಯ, ಶಕ್ತಿ ಸಾಹಿತ್ಯ ಎರಡೂ ನಮ್ಮ ಮನೋಬಲ ಹೆಚ್ಚಿಸುತ್ತದೆ ಎಂದರು.

ಸಾಮಾಜಿಕ ಕಾರ್ಯಕರ್ತರಾದ ಎಸ್.ಎನ್ ಗಾಂವ್ಕರ್ ಬೆಳ್ಳಿಪಾಲ, ಗಣಪತಿ ಮಾನಿಗದ್ದೆ ಉಪಸ್ಥಿತರಿದ್ದರು. ಭೂಮಿಕಾ ಭಟ್ಟ ಪ್ರಾರ್ಥಿಸಿದರು. ವಿನಯಶ್ರೀ ಗಾಂವ್ಕರ್ ನಿರ್ವಹಿಸಿದರು. ಶಿವರಾಮ ಗಾಂವ್ಕರ ಸ್ವಾಗತಿಸಿದರು. ಡಾ.ಡಿ.ಕೆ ಗಾಂವ್ಕರ ವಂದಿಸಿದರು.