15 ರಿಂದ ದಾವಣಗೆರೆಯಲ್ಲಿ ಇನ್‌ಸೈಟ್ಸ್‌ ಅಕಾಡೆಮಿ ಕಾರ್ಯಾರಂಭ

| Published : Sep 13 2024, 01:34 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ ಸ್ಥಾಪಕ ಜಿ.ಬಿ.ವಿನಯಕುಮಾರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಪರಿಕ್ಷಾರ್ಥಿಗಳಿಗೆ ಸೆ.15 ರಿಂದ ಇನ್‌ಸೈಟ್ಸ್‌ ಸಂಸ್ಥೆಯಿಂದ ತರಬೇತಿ ನೀಡುವುದಾಗಿ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಪೂಜೆಯೊಂದಿಗೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ತಮ್ಮ ಸಂಸ್ಥೆಯಿಂದ ತರಬೇತಿ ಕೇಂದ್ರವನ್ನು ವಿದ್ಯುಕ್ತವಾಗಿ ಆರಂಭ ಮಾಡುತ್ತಿದ್ದು, ಸಂಸ್ಥೆಯಲ್ಲಿ ತರಬೇತಿ ಪಡೆದು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ದಾವಣಗೆರೆ ಜಿಲ್ಲಾಧಿಕಾರಿಗಳ ನಿವಾಸದ ಬಳಿಯ ವಿಶಾಲ ಕಟ್ಟಡದಲ್ಲಿರುವ ಇನ್‌ಸೈಟ್ಸ್‌ ತರಬೇತಿ ಕೇಂದ್ರದಲ್ಲಿ ಈಗಾಗಲೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ತಮ್ಮ ಸಂಸ್ಥೆಯ ಬೆಂಗಳೂರು, ದಾವಣಗೆರೆ ಕೇಂದ್ರಗಳ ಬೋಧಕರು ಒಂದೇ ಆಗಿದ್ದು, ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಬೋಧನೆ ಮಾಡಲಾಗುವುದು. ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳಿಗೆ ಸಂಯೋಜಿತ ತರಗತಿ ನಡೆಯುತ್ತಿವೆ. ಮುಖ್ಯ ಪರೀಕ್ಷೆಗೆ ಉತ್ತರ ಬರೆಯುವ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.

ಕೆಎಎಸ್‌ ಪರೀಕ್ಷೆಗೆ ಆಫ್‌ಲೈನ್ ತರಬೇತಿ ತಕ್ಷಣ ಶುರುವಾಗಲಿದೆ. ಬೆಂಗಳೂರಿನ ತಮ್ಮ ಸಂಸ್ಥೆಯ ಬೋಧಕರೊಂದಿಗೆ ತರಗತಿ ನಡೆಸಲಿದ್ದೇವೆ ಎಂದು ತಿಳಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳ ತಲಾ 10 ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದೇವೆ. ಆ ಎಲ್ಲಾ 80 ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ತರಬೇತಿ ನೀಡಲಿದ್ದು, ಕಡು ಬಡವರು, ಪ್ರತಿಭಾವಂತರು ಹೀಗೆ ಯುವಕರಿಗೆ, ಯುವತಿಯರಿಗೆ ಶೇ.50ರಂತೆ ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಐಎಎಸ್‌ ತರಬೇತಿ ಪಡೆದರೆ, 3-4 ವರ್ಷದಲ್ಲಿ ಸರ್ಕಾರಿ ನೌಕರಿ ನಿಶ್ಚಿತ. ಹಾಗಾಗಿ ಪರೀಕ್ಷಾರ್ಥಿಗಳನ್ನು ಸನ್ನದ್ಧಗೊಳಿಸುತ್ತೇವೆ. ಬಡವರು, ಕೂಲಿ ಕಾರ್ಮಿಕರು, ಆಟೋ ಚಾಲಕರ ಮಕ್ಕಳು, ಶ್ರಮಿಕರ ಮಕ್ಕಳು ಹೀಗೆ ಎಲ್ಲಾ ಜಾತಿ, ವರ್ಗದ ಮಕ್ಕಳಿಗೂ ಅವಕಾಶ ನೀಡಲಾಗುತ್ತದೆ. ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಬಡವರು, ನಿರ್ಗತಿಕರ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತೇವೆ.

ದಾವಣಗೆರೆ ಕೇಂದ್ರ ಸ್ಥಾಪಿಸಿರುವುದರ ಮೂಲಕ ಬಡವರ ಮಕ್ಕಳಿಗೆ ಅವಕಾಶ ಕಲ್ಪಿಸಲು ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಅಕ್ಟೋಬರ್ ನಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ತರಬೇತಿ, ನವೋದಯ ಶಾಲೆಗೆ ಪ್ರವೇಶ ಪಡೆಯಲಿಚ್ಛಿಸುವ ಮಕ್ಕಳಿಗೂ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಅಗತ್ಯ ಶಿಕ್ಷಕರನ್ನು ನೇಮಿಸಿಕೊಂಡು, ಪ್ರತಿ ದಿನ ಸಂಜೆ 2-3 ತಾಸು ತರಗತಿ ನಡೆಸಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದು, ಐಎಎಸ್, ಐಪಿಎಸ್ ಅಧಿಕಾರಿಗಳಾದವರೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಧಾರವಾಡವನ್ನು ಬಿಟ್ಟರೆ ದಾವಣಗೆರೆಯನ್ನು ಹಬ್ ಮಾಡುವ ಗುರಿ ಇದೆ. ಈವರೆಗೆ ತಮ್ಮ ಸಂಸ್ಥೆಯಿಂದ ಸುಮಾರು 150-200 ಜನ ಐಎಎಸ್, ಐಪಿಎಸ್ ಅಧಿಕಾರಿಗಳಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಜಿ.ಬಿ.ವಿನಯಕುಮಾರ ತಿಳಿಸಿದರು. ಈ ವೇಳೆ ಸಂಸ್ಥೆಯ ಶರತ್ ಇದ್ದರು.