ಸಾರಾಂಶ
ಧೂಳಿನಿಂದ ಕೃಷಿ ಹಾಗೂ ಜನರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಅಂತರ್ಜಲ ಕಡಿಮೆಯಾಗಲಿದೆ. ಆದ್ದರಿಂದ ತಮ್ಮ ಗ್ರಾಮದ ಬಳಿಯಲ್ಲಿ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಬಾರದು.
ಸಂಡೂರು: ತಾಲೂಕಿನ ಚೋರುನೂರು ಹೋಬಳಿ ಸಿ.ಕೆ. ಹಳ್ಳಿ(ಚಿಕ್ಕಕೆರೆಯಾಗಿನಹಳ್ಳಿ) ಗ್ರಾಮದ ಬಳಿಯಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಡಬಾರದೆಂದು ಒತ್ತಾಯಿಸಿ ಸಿ.ಕೆ. ಹಳ್ಳಿ ಗ್ರಾಮದ ರೈತರು ಮಂಗಳವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಶಿರಸ್ತೇದಾರ್ ಕೆ.ಎಂ. ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ವಿ.ಎನ್. ಭೀಮಾನಾಯ್ಕ, ಗ್ರಾಮದ ಸ.ನಂ. ೨೦೩, ೪೪ ಎಕರೆ ೬೨ ಸೆಂಟ್ಸ್ ಭೂಮಿಯಲ್ಲಿ ಹೊಸಪೇಟೆಯ ಬಸವರಾಜ ಎಂಬವರು ಕಲ್ಲು ಗಣಿಗಾರಿಕೆ ಮಾಡಲು ಅನುಮತಿ ಪಡೆದಿದ್ದಾರೆ. ಈ ಪ್ರದೇಶದ ಪಕ್ಕದಲ್ಲಿ ಸಿಕೆ ಹಳ್ಳಿಯಿಂದ ಶಿವಪುರಕ್ಕೆ ಹೋಗುವ ಮುಖ್ಯ ರಸ್ತೆ ಇದೆ. ಕಲ್ಲು ಗಣಿಗಾರಿಕೆ ಆರಂಭವಾದರೆ, ಅಲ್ಲಿ ಏಳುವ ಧೂಳಿನಿಂದ ಕೃಷಿ ಹಾಗೂ ಜನರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಅಂತರ್ಜಲ ಕಡಿಮೆಯಾಗಲಿದೆ. ಆದ್ದರಿಂದ ತಮ್ಮ ಗ್ರಾಮದ ಬಳಿಯಲ್ಲಿ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದರು.ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಂಎಲ್‌ಕೆ ನಾಯ್ಡು, ರೈತರಾದ ಕೃಷ್ಣನಾಯ್ಕ, ರಾಮನಾಯ್ಕ, ಜಗನ್ನಾಥ, ದೇವದಾಸ್ ನಾಯ್ಕ, ಕೆ. ಗಂಗಾಧರ, ಕೃಷ್ಣ ಮುಂತಾದವರಿದ್ದರು.