ಸಾರಾಂಶ
ಅಂತಾರಾಜ್ಯ ಗಡಿ ತಪಾಸಣಾ ಕೇಂದ್ರವಾದ ಚೆಂಬೇರಿ ಚೆಕ್ ಪೋಸ್ಟ್ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕೂಡಿದ್ದು, ಕೂರಲು ಸರಿಯಾದ ಆಸನದ ವ್ಯವಸ್ಥೆಯಿಲ್ಲ. ಇರುವ ಕುರ್ಚಿಗೆ ಕಾಲುಗಳೇ ಇಲ್ಲ. ಶೌಚಾಲಯದ ದುರವಸ್ಥೆಯಂತೂ ಹೇಳತೀರದು. ಸೂಕ್ತ ನಿರ್ವಹಣೆ ಇಲ್ಲದೆ ಅಶುಚಿತ್ವದಿಂದ ಕೂಡಿದ್ದು ದುರ್ವಾಸನೆ ಬೀರುತ್ತಿದೆ ಎಂದು ಆಶಾ ಕಾರ್ಯಕರ್ತೆಯರು ದೂರಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯದ ಪ್ರಮುಖ ಚೆಕ್ ಪೋಸ್ಟ್ ಗಳಲ್ಲೊಂದಾದ ಕೊಡಗು ಕೇರಳ ಗಡಿಯ ಕರಿಕೆ ಚೆಂಬೇರಿ ಚೆಕ್ ಪೋಸ್ಟ್ ನಲ್ಲಿರುವ ಶೌಚಾಲಯ ಅಶುಚಿತ್ವದಿಂದ ಕೂಡಿದ್ದು, ಶೌಚಾಲಯ ಬಳಸಲು ಕರ್ತವ್ಯ ನಿರತ ಮಹಿಳ ಸಿಬ್ಬಂದಿ ಪರದಾಟ ನಡೆಸಿದ್ದಾರೆ.ಈ ಕುರಿತು ಅಳಲು ತೋಡಿಕೊಂಡಿರುವ ಚೆಕ್ ಪೋಸ್ಟ್ ನ ಕರ್ತವ್ಯ ನಿರತ ಆಶಾ ಕಾರ್ಯಕರ್ತೆಯರು ಅಂತಾರಾಜ್ಯ ಗಡಿ ತಪಾಸಣಾ ಕೇಂದ್ರವಾದ ಚೆಂಬೇರಿ ಚೆಕ್ ಪೋಸ್ಟ್ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕೂಡಿದ್ದು, ಕೂರಲು ಸರಿಯಾದ ಆಸನದ ವ್ಯವಸ್ಥೆಯಿಲ್ಲ. ಇರುವ ಕುರ್ಚಿಗೆ ಕಾಲುಗಳೇ ಇಲ್ಲ. ಶೌಚಾಲಯದ ದುರವಸ್ಥೆಯಂತೂ ಹೇಳತೀರದು. ಸೂಕ್ತ ನಿರ್ವಹಣೆ ಇಲ್ಲದೆ ಅಶುಚಿತ್ವದಿಂದ ಕೂಡಿದ್ದು ದುರ್ವಾಸನೆ ಬೀರುತ್ತಿದೆ ಎಂದಿದ್ದಾರೆ.ಶೌಚ ಗೃಹ, ನೀರಿನ ಟ್ಯಾಂಕ್ ಇದ್ದರೂ ಉಪಯೋಗಕ್ಕಿಲ್ಲ. ಟ್ಯಾಂಕ್ ತೂತಾಗಿ ನೀರು ನಿಲ್ಲದೆ ಸೋರುತ್ತಿದೆ. ಇದರಿಂದಾಗಿ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಟ್ಯಾಂಕ್ ಇದ್ದರೂ ಕೂಡ ಬಳಕೆಗೆ ಬಾರದಂತಾಗಿದೆ. ಇದಲ್ಲದೇ ಇಲ್ಲಿ ಮತ್ತಷ್ಟು ಮೂಲಭೂತ ಸೌಕರ್ಯ ಕೊರತೆ ಎದುರಿಸುತ್ತಿದ್ದೇವೆ. ಕೂಡಲೇ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಅಗತ್ಯ ಆರೋಗ್ಯ ಸಿಬ್ಬಂದಿ, ಕುಡಿಯುವ ನೀರು,ಸಮರ್ಪಕ ಶೌಚಾಲಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.