ಸಾರಾಂಶ
ಸೂಕ್ತ ಚರಂಡಿ ಇಲ್ಲದೇ ಸರಾಗವಾಗಿ ಮುಖ್ಯ ರಸ್ತೆಯ ಚರಂಡಿಗೆ ಸಂಪರ್ಕ ಹೊಂದದೆ ಎಲ್ಲೆಂದರಲ್ಲಿ ಚರಂಡಿ ನೀರು ಸಂಗ್ರಹವಾಗಿ ವಾರ್ಡಿನಲ್ಲಿ ದುರ್ನಾತ ಬೀರಿ ವಾಸಿಸುವುದಕ್ಕೂ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ 1ನೇ ವಾರ್ಡಿನ ಜನತಾ ಕಾಲೋನಿಯ ಜನರಿಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ತಕ್ಷಣ ಕ್ರಮ ಕೈಗೊಂಡು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ನಿವಾಸಿಗಳು ಪಟ್ಟಣ ಪಂಚಾಯ್ತಿ ಮುಖ್ಯ ಅಧಿಕಾರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಯುವ ಮುಖಂಡ ಸಿದ್ದು ಭಾವಿಮನಿ ಮಾತನಾಡಿ, 1ನೇ ವಾರ್ಡಿನಲ್ಲಿ ಸುಮಾರು 2000 ಜನರು ವಾಸವಾಗಿದ್ದು, 1ನೇ ವಾರ್ಡಿಗೆ ಹೊಂದಿಕೊಂಡಿರುವ ಅಂದಾಜು 4 ಎಕರೆ ಜಮೀನಿನಲ್ಲಿ ಕಲುಷಿತ ನೀರು ಸಂಗ್ರಹವಾಗಿ ಸಂಜೆಯಾಗುತಿದ್ದಂತೆ, ವಿಪರೀತ ಸೊಳ್ಳೆಗಳ ಕಾಟದಿಂದ ಬೇಸತ್ತು, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದ ಹಲವಾರು ವಾರ್ಡ್ ಗಳಿಂದ ಚರಂಡಿ ನೀರು ಜನತಾ ಕಾಲೋನಿಯ ಪಕ್ಕದಲ್ಲಿರುವ ಚರಂಡಿಗೆ ಬಂದು ಸಂಗ್ರಹವಾಗುತ್ತದೆ. ಇಲ್ಲಿಂದ ಸೂಕ್ತ ಚರಂಡಿ ಇಲ್ಲದೇ ಸರಾಗವಾಗಿ ಮುಖ್ಯ ರಸ್ತೆಯ ಚರಂಡಿಗೆ ಸಂಪರ್ಕ ಹೊಂದದೆ ಎಲ್ಲೆಂದರಲ್ಲಿ ಚರಂಡಿ ನೀರು ಸಂಗ್ರಹವಾಗಿ ವಾರ್ಡಿನಲ್ಲಿ ದುರ್ನಾತ ಬೀರಿ ವಾಸಿಸುವುದಕ್ಕೂ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.1ನೇ ವಾರ್ಡಿನ ಪಕ್ಕದಲ್ಲಿ ಸೂಕ್ತ ಚರಂಡಿ ನಿರ್ಮಿಸಿ ಚರಂಡಿ ನೀರು ಸರಾಗವಾಗಿ ಹೋಗಲು ಕ್ರಮ ಕೈಗೊಂಡು ನಿವಾಸಿಗಳ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾಗಪ್ಪ ಬೇವಿನಗಿಡ, ಮಹಾಲಿಂಗ ಗ್ಯಾಂಗಮನ, ಮೌನೇಶ ಕಟ್ಟಿಮನಿ, ದೇವು ಬೇವಿನಗಿಡ, ಆಂಜನೇಯ ಗ್ಯಾಂಗಮನ್ ಇತರರಿದ್ದರು.