ಅಧಿವೇಶದಲ್ಲೇ ಕಾಂತರಾಜು ವರದಿ ಜಾರಿಗೆ ಒತ್ತಾಯ

| Published : Dec 14 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಾತಿ ಗಣತಿ (ಕಾಂತರಾಜು ವರದಿ)ಯನ್ನು ಇದೇ ಚಳಿಗಾಲದ ಅಧಿವೇಶನದಲ್ಲಿಯೇ ಜಾರಿಗೊಳಿಸುವಂತೆ ಒತ್ತಾಯಿಸಿ ಅಹಿಂದ ಸಂಘಟನೆಯ ಜಿಲ್ಲಾ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಮಾಡಿದರು. ವಿಜಯಪುರಕ್ಕೆ ಆಗಮಿಸಿದ್ದ ವೇಳೆ ಭೇಟಿ ಮಾಡಿ ಮನವಿ ಸಲ್ಲಿಸಿದರು. ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷಾ ವರದಿ ಜಾರಿಗೊಳಿಸಬೇಕು ಎಂದು ಅಹಿಂದ ಸಂಘಟನೆಯ ಜಿಲ್ಲಾ ಮುಖಂಡರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಾತಿ ಗಣತಿ (ಕಾಂತರಾಜು ವರದಿ)ಯನ್ನು ಇದೇ ಚಳಿಗಾಲದ ಅಧಿವೇಶನದಲ್ಲಿಯೇ ಜಾರಿಗೊಳಿಸುವಂತೆ ಒತ್ತಾಯಿಸಿ ಅಹಿಂದ ಸಂಘಟನೆಯ ಜಿಲ್ಲಾ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಮಾಡಿದರು.

ವಿಜಯಪುರಕ್ಕೆ ಆಗಮಿಸಿದ್ದ ವೇಳೆ ಭೇಟಿ ಮಾಡಿ ಮನವಿ ಸಲ್ಲಿಸಿದರು. ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷಾ ವರದಿ ಜಾರಿಗೊಳಿಸಬೇಕು ಎಂದು ಅಹಿಂದ ಸಂಘಟನೆಯ ಜಿಲ್ಲಾ ಮುಖಂಡರು ಒತ್ತಾಯಿಸಿದರು.ಈ ವೇಳೆ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ರಾಜ್ಯದ ಜನಸಂಖ್ಯೆಯ ಮಕ್ಕಾಲು ಭಾಗಕ್ಕೂ ಹೆಚ್ಚಿರುವ ಅಹಿಂದ ವರ್ಗಗಳಿಗೆ ಈ ವರದಿ ಜಾರಿಯಿಂದ ಅವರ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿದ್ಯ ಉದ್ಯೋಗದ ಅವಕಾಶಗಳು, ಲಭಿಸುತ್ತವೆ ಎಂದು ವಿವರಿಸಿದರು.

ಮಾಜಿ ಶಾಸಕ ರಾಜು ಆಲಗೂರ ಮಾತನಾಡಿ, ಕಾಂಗ್ರೆಸ್ ಪಕ್ಷವು ಸಹ ಜಾತಿಗಣತಿ ವರದಿ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ವಾಗ್ದಾನ ನೀಡಿತ್ತು. ಈ ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಯೇ ಈ ವರದಿಯನ್ನು ಬಿಡುಗಡೆ ಮಾಡಿ ರಾಜ್ಯದಲ್ಲಿ ಹೊಸ ಇತಿಹಾಸ ಬರೆಯುತ್ತೀರಿಂದು ನಂಬಿದ್ದೇವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿ ಮಾಡಲಾಗಿತ್ತು. ದಿ. ದೇವರಾಜ ಅರಸು ಅವರು ’ಹಾವನೂರು ಆಯೋಗ’ ರಚಿಸಿ ಹಿಂದುಳಿದ ವರ್ಗಗಳ ಅಧ್ಯಯನಕ್ಕೆ ಮುನ್ನುಡಿ ಬರೆದರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಮೀಸಲಾತಿ ಮಿತಿಯನ್ನು ಶೇ.೭೩ಕ್ಕೆ ಏರಿಸುವ ಪ್ರಯತ್ನ ಮಾಡಿದ್ದರು. ರಾಜ್ಯದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕೂ ಜಾಸ್ತಿ ಇರುವ ಅಹಿಂದ ವರ್ಗಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ, ಉದ್ಯೋಗದ ಅವಕಾಶಗಳು ಮತ್ತು ವಿದ್ಯಾಭ್ಯಾಸದ ಅವಕಾಶಗಳು ಲಭಿಸಿಲ್ಲ. ಅಹಿಂದ ವರ್ಗಗಗಳಲ್ಲಿ ಅರಿವು ಮತ್ತು ಸಂಘಟನೆಯ ಕೊರತೆಯ ಕಾರಣಕ್ಕಾಗಿ ಅವಕಾಶಗಳು ಸಿಕ್ಕಿಲ್ಲ ಎನ್ನುವುದರ ಜೊತೆಗೆ ನಿರ್ಧಿಷ್ಟವಾಗಿ ಅವರ ಜನಸಂಖ್ಯಾ ಪರಿಸ್ಥಿತಿ ಗೊತ್ತಿಲ್ಲದಿರುವುದು ಪ್ರಮುಖ ಕಾರಣವಾಗಿದೆ ಎಂದರು.

ಮೀಸಲಾತಿ ಪರಿಷ್ಕರಣೆ, ಜಾತಿಗಳನ್ನು ಹೊಸ ವರ್ಗಕ್ಕೆ ಸೇರಿಸುವುದು ಅಥವಾ ಕೈಬಿಡುವುದು ಎಲ್ಲಕ್ಕೂ ಸುಪ್ರೀಂ ಕೋರ್ಟ್ ಯಾವುದಾದರೂ ಸಾಂವಿಧಾನಿಕ ಸ್ಥಾನಮಾನ ಇರುವ ಆಯೋಗದ ದತ್ತಾಂಶವನ್ನು ಕೇಳುತ್ತದೆ. ಇದು ಮಂಡಲ್ ವರದಿ ಅನುಷ್ಠಾನವನ್ನು ಪ್ರಶ್ನಿಸಿದ್ದ ಅರ್ಜಿಯಿಂದ ಹಿಡಿದು ಹಲವಾರು ಪ್ರಕರಣಗಳಲ್ಲಿ ಕಂಡುಬಂದಿದೆ. ಆದುದರಿಂದ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷಾವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಬಿಡುಗಡೆ ಮಾಡಬೇಕಾಗಿರುವುದು ಅತ್ಯಾವಶ್ಯಕವಾಗಿದೆ ಎಂದು ಮನವಿ ಮಾಡಿದರು.ಈ ವೇಳೆ ಶಾಸಕ ಪ್ರಕಾಶ ರಾಠೋಡ, ಮಾಜಿ ಶಾಸಕ ಶರಣಪ್ಪ ಸುಣಗಾರ, ದೇವಾನಂದ ಚವ್ಹಾಣ, ಕಾಂಗ್ರೆಸ್ ಮುಖಂಡರಾದ ಹಮೀದ ಮುಶ್ರೀಫ, ಎಸ್.ಪಾಟೀಲ ಗಣಿಯಾರ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಜಕ್ಕಪ್ಪ ಯಡವೆ, ಸಂಜು ಕಂಬಾಗಿ, ಚಂದ್ರಶೇಖರ ಕೊಡಬಾವಿ, ಮಲ್ಲು ಶಿರಶ್ಯಾಡ, ಅಬ್ದುಲರಜಾಕ ಹೋರ್ತಿ, ಬೀರಪ್ಪ ಜುಮನಾಳ, ಟಪಾಲ ಇಂಜಿನೀಯರ್, ಫಯಾಜ ಕಲಾದಗಿ, ಜಟ್ಟೆಪ್ಪ ರವಳಿ, ಸಂಜೀವ ಕಂಬೋಗಿ, ಮಲ್ಲು ಬಿದರಿ, ಸುರೇಶ ಘೋಣಸಗಿ, ದೇವಾನಂದ ಲಚ್ಯಾಣ, ಆರತಿ ಶಹಾಪೂರ, ಸುಜಾತಾ ಕಳ್ಳಿಮನಿ, ಪ್ರಭಾ ನಾಟೀಕಾರ, ಮಲ್ಲು ಬಟಗಿ ಮುಂತಾದವರು ಇದ್ದರು.