ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

| Published : Oct 31 2025, 03:30 AM IST

ಸಾರಾಂಶ

ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗೆ ವಿಜಯಪುರ ಹಾಗೂ ಬಾಗಲಕೋಟೆ ನಿಷೇಧ ಮರಳಿ ಪಡೆಯುವ ಕುರಿತು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದವರು ಜಿಲ್ಲಾಧಿಕಾರಿ ಡಾ.ಟಿ.ಆನಂದ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಸಕ್ತ ಸಾಲಿನ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿ ಪರಿಹಾರ, ಬೆಳೆ ವಿಮೆ ಹಾಗೂ ಜಿಲ್ಲೆಯ ಸಮಗ್ರ ನೀರಾವರಿ ಬಗ್ಗೆ ಹಾಗೂ ಕನ್ನೆರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗೆ ವಿಜಯಪುರ ಹಾಗೂ ಬಾಗಲಕೋಟೆ ನಿಷೇಧ ಮರಳಿ ಪಡೆಯುವ ಕುರಿತು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದವರು ಜಿಲ್ಲಾಧಿಕಾರಿ ಡಾ.ಟಿ.ಆನಂದ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆ ರಾಜ್ಯಾಧ್ಯಕ್ಷ ಭೀಮಸೇನ ಕೂಕರೆ ಮಾತನಾಡಿ, ಈ ವರ್ಷ ಮುಂಗಾರು ಅತಿವೃಷ್ಟಿ ಮಳೆಯಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಬಾಳೆ, ಲಿಂಬೆ, ತರಕಾರಿ, ಕಾಯಿಪಲ್ಯ ಬೆಳೆ ಹಾಗೂ ತೊಗರಿ, ಹತ್ತಿ ಇತರೆ ಬೆಳೆಗಳು ಹಾಳಾಗಿದ್ದು ರೈತರು ಕಂಗಾಲಾಗಿದ್ದಾರೆ. ಅವರಿಗೆ ತುರ್ತು ನೆರವು ಒದಗಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿ ಅತಿವೃಷ್ಟಿಯಿಂದ ಹಾಗೂ ಡೋಣಿ ನದಿ ನೆರೆ ಬಂದು ಅಪಾರ ಹಾನಿಯಾಗಿದೆ. ತುರ್ತಾಗಿ ಜಿಲ್ಲೆಯ ಎಲ್ಲ ಪಂಚಾಯತಿ ಒಳನ್ನೊಳಗೊಂಡು ಸರಿಯಾಗಿ ಸರ್ವೇ ಮಾಡಿ ತಾರತಮ್ಯ ಮಾಡದೇ ಕನಿಷ್ಟ ಕೃಷಿ ಬೆಳೆಗಳಿಗೆ ಎಕರೆಗೆ ₹25 ರಿಂದ ₹40 ಸಾವಿರ ಪರಿಹಾರ ನೀಡಬೇಕು ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಕರೆಗೆ ₹50 ಸಾವಿರದಿಂದ ₹1 ಲಕ್ಷ ವರೆಗೆ ಪರಿಹಾರ ನೀಡಬೇಕು ಎಂದರು.

ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಫೇಸ್-2ರಲ್ಲಿ ಬರುವ ವಿಜಯಪುರ- ಚಡಚಣ ತಾಲೂಕಿನ 19 ಹಳ್ಳಿಗಳ ಅಂದಾಜು 2500 ಹೆಕ್ಟೇರ್‌ ಪ್ರದೇಶವನ್ನು ಈ ನೀರಾವರಿಗೆ ಒಳಪಡಿಸಿ. ಒಟ್ಟಾರೆ 21730 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದರು.

ಉತ್ತರ ಪ್ರಾಂತ ಉಪಾಧ್ಯಕ್ಷರಾದ ಮಲ್ಲನಗೌಡ ಪಾಟೀಲ ಮಾತನಾಡಿ, ಚಡಚಣ ಏತ ನೀರಾವರಿ ನೆನೆಗುದಿಗೆ ಬಿದ್ದಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

ಆಲಮಟ್ಟಿ ಅಣೆಕಟ್ಟೆಯ ಎತ್ತರ 524.256 ಮೀಟರ್‌ಗೆ ಎತ್ತರಿಸಿ ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳಿಂದ ಭೂಮಿಗೆ ನೀರು ಹರಿಸಲು ಅನುಕೂಲವಾಗುತ್ತದೆ. ಕೃಷ್ಣಾ ಕೊಳ್ಳದ 3ನೇ ಹಂತದ ಎಲ್ಲ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸಿ ಅದರಂತೆ ಮುಳುಗಡೆ ಪ್ರದೇಶದ ರೈತರಿಗೆ ಪುನರ್ವಸತಿ ಹಾಗೂ ಪರಿಹಾರವನ್ನು ಕೊಟ್ಟು ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ರವೀಂದ್ರ ಮೇಡೆಗಾರ, ರಾಜ್ಯ ಕಾ.ಕಾ.ಸ ಗುರುನಾಥ್ ಬಗಲಿ, ಸೋಮಶೇಖರ್ ಬಳ್ಳೊಳ್ಳಿ, ಅರುಣ್ ಕುಮಾರ್ ತೇರದಾಳ, ವಿಟೋಬರಾಯ ಬಿರಾದಾರ ಶಾಂತಗೌಡ ಬಿರಾದರ್ ಭೀಮಣ್ಣ ಕುಂಬಾರ ಪೀರಪ್ಪ ಗೌಡ ಪಾಟೀಲ್ ಪರಮಾನಂದ ಕುಂಬಾರ ಶಿವನಗೌಡ ಬಿರಾದರ್ ಮತ್ತಿತರರು ಇದ್ದರು.