ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಬೇಸಿಗೆ, ಬರಗಾಲದ ಹಿನ್ನೆಲೆ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು ಕುಟುಂಬ ನಿರ್ವಹಣೆ ಮಾಡಲು ಕೂಲಿ ಕೆಲಸಕ್ಕಾಗಿ ದೂರದ ನಗರ-ಪಟ್ಟಣಗಳಿಗೆ ವಲಸೆ ಹೋಗದೆ ನರೇಗಾ ಯೋಜನೆಯಡಿ ನಿಮ್ಮೂರಲ್ಲೆ ಕೂಲಿ ಕೆಲಸ ಮಾಡಿ ಎಂದು ಯಾದಗಿರಿ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಬಿ. ಎಸ್. ರಾಠೋಡ ಅವರು ಕೂಲಿಕಾರರಲ್ಲಿ ಮನವಿ ಮಾಡಿದರು.ತಾಲೂಕಿನ ಹತ್ತಿಗೂಡುರು ಗ್ರಾಮದಲ್ಲಿ ಮನರೇಗಾ ವಲಸೆ ಯಾಕ್ರಿ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿಯ, ದುಡಿಮೆ ಖಾತ್ರಿ ಎರಡು ತಿಂಗಳ ವಿಶೇಷ ಅಭಿಯಾನದಡಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿಕಾರರ ಸಮಸ್ಯೆ ಆಲಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಏ.1ರಿಂದ ನರೇಗಾ ಯೋಜನೆಯಡಿ ಕೂಲಿಕೆಲಸ ಮಾಡುವ ಕೂಲಿಕಾರರ ದಿನದ ಕೂಲಿ 316 ರು.ಗಳಿಂದ 349 ರು.ಗಳಿಗೆ ಹೆಚ್ಚಳ ಮಾಡಿದ್ದು, ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ನೂರು ದಿನಗಳ ಅಕುಶಲ ಕೂಲಿ ಕೆಲಸದ ಖಾತ್ರಿ ನೀಡಿದ್ದು, ಒಂದು ಕುಟುಂಬ ನೂರು ದಿನ ಕೆಲಸ ಮಾಡಿದರೆ 34,900 ರು.ಗಳ ಕೂಲಿ ಹಣ ಪಡೆದುಕೊಳ್ಳಬಹುದು ಎಂದರು.ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗಳು ಪೂರ್ಣಗೊಂಡಿದ್ದು, ಕೃಷಿ ಕೂಲಿಕಾರರಿಗೆ ಕೆಲಸವಿಲ್ಲದೆ, ಜೀವನ ನಿರ್ವಹಣೆ ಮಾಡಲು ಕೆಲಸಕ್ಕಾಗಿ ದೂರದ ನಗರಪಟ್ಟಣಗಳಿಗೆ ವಲಸೆ ಹೊಗುವದನ್ನು ತಡೆಯಲು ಗ್ರಾಮ ಪಂಚಾಯ್ತಿಗಳಿಂದ ನರೇಗಾ ಯೋಜನೆಯಡಿ ನಿರಂತರವಾಗಿ ಕೂಲಿ ಕೆಲಸ ನೀಡುತ್ತಿದ್ದು, ಕೂಲಿಕಾರರು ಅರ್ಜಿ ನಮೂನೆ-6ರಡಿ ಗ್ರಾಮ ಪಂಚಾಯ್ತಿಗೆ ಕೂಲಿ ಬೇಡಿಕೆ ಸಲ್ಲಿಸಿ, ಯೋಜನೆಯ ಲಾಭ ಪಡೆದುಕೊಳ್ಳಲು ತಿಳಿಸಿದರು.
ವಿಶೇಷಚೇತನರು, ಮಹಿಳೆಯರು, ಗರ್ಭಿಣಿಯರು, ಹಿರಿಯ ನಾಗರಿಕರು, ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ ದುರ್ಬಲ ವರ್ಗಗಳಿಗೆ ಆದ್ಯತೆ ಮೇರೆಗೆ ಕೂಲಿ ಕೆಲಸ ನೀಡಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಸೇರಿ ಅಗತ್ಯ ಮೂಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಬೇಸಿಗೆ ತಾಪಮಾನ ಹೆಚ್ಚಿದ್ದು, ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ನರೇಗಾ ಕಾಮಗಾರಿ ಕೆಲಸ ಮಾಡುವ ಪ್ರಮಾಣದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಶೇ.30 ಹಾಗೂ ಜೂನ್ ತಿಂಗಳಲ್ಲಿ ಶೇ.20ರಷ್ಟು ರಿಯಾಯ್ತಿ ನೀಡಿದ್ದು, ರಿಯಾಯ್ತಿಯ ಸದುಪಯೋಗ ಪಡೆದು ಕೆಲಸ ಮಾಡಿ ಎಂದು ಕೂಲಿಕಾರರಿಗೆ ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಡಿ ವಿವಿಧ ಯೋಜನೆಯಗಳ ಮಾಹಿತಿ ಮತ್ತು ಕುಂದು-ಕೊರತೆಗಳ ನಿವಾರಣೆಗೆ ಏಕೀಕೃತ ಸಹಾಯವಾಣಿ ಸಂಖ್ಯೆ 8277506000 ಆರಂಭಿಸಿದ್ದು, ಇಲಾಖೆಗೆ ಸಂಬಂಧಿಸಿದ ದೂರು ಹಾಗೂ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.ಗ್ರಾಮ ಪಂಚಾಯ್ತಿ ಪಿಡಿಓ ಅಕ್ಕನಾಗಮ್ಮ, ಜಿಲ್ಲಾ ಪಂಚಾಯ್ತಿ ಅಧಿಕಾರಿ ಬನ್ನಪ್ಪ ಬೈಟಪುಲ್ಲಿ, ತಾಂತ್ರಿಕ ಸಂಯೋಜಕ ಮುಜಾಮಿಲ್, ಸಂಯೋಜಕ ಬಸಪ್ಪ, ತಾಂತ್ರಿಕ ಸಹಾಯಕರಾದ ಪವನಕುಮಾರ, ಮರೆಪ್ಪ ದೊರೆ, ಗ್ರಾಮ ಕಾಯಕ ಮಿತ್ರ ಸೇರಿದಂತೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ನರೇಗಾ ಕೂಲಿಕಾರರು ಇದ್ದರು.