ಸಾರಾಂಶ
ಹುಬ್ಬಳ್ಳಿ:
ಸಿಲಿಂಡರ್ ಸೋರಿಕೆಯಿಂದಾಗಿ ನಡೆದ ಅಗ್ನಿ ಅವಘಡದಲ್ಲಿ 8 ಜನ ಅಯ್ಯಪ್ಪ ಮಾಲಾಧಾರಿಗಳ ಸಾವಿಗೆ ಕಾರಣವಾಗಿರುವ ಇಲ್ಲಿನ ಸಾಯಿನಗರದ ಅಚ್ಚವ್ವನ ಕಾಲನಿಯಲ್ಲಿರುವ ಈಶ್ವರ ದೇವಸ್ಥಾನದ ಬಳಿಯ ಕಟ್ಟಡವನ್ನು ಗುರುವಾರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ನೇತೃತ್ವದ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಕುರಿತು ಗುರುವಾರ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು.ಕಾಲನಿಯ ರಸ್ತೆಯಲ್ಲಿಯೇ ಈಶ್ವರ ದೇವಸ್ಥಾನ ಹಾಗೂ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ಈಚೆಗೆ ನಡೆದ ದುರಂತದ ಹಿನ್ನೆಲೆಯಲ್ಲಿ ಕಟ್ಟಡದ ತೆರವು ಕುರಿತು ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಪ್ರಾಥಮಿಕ ಹಂತದಲ್ಲಿ ಚರ್ಚೆ ನಡೆಸಲಾಗಿದೆ. ಮತ್ತೊಮ್ಮೆ ಚರ್ಚೆ ನಡೆಸಿ ಕಟ್ಟಡದ ತೆರವಿಗೆ ಬೇಕಾದ ಕ್ರಮಕೈಗೊಳ್ಳುವುದಾಗಿ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
ಬೇರೆಡೆ ಭವನ ನಿರ್ಮಾಣ:ಸಾಯಿನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಜನರಿಗೆ ಅನಕೂಲವಾಗಲು ಈ ಭಾಗದಲ್ಲಿ ನೂತನ ಸಮುದಾಯ ಭವನ ನಿರ್ಮಿಸುವಂತೆ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಸೇರಿದಂತೆ ಸ್ಥಳೀಯರು ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ. ಸಮುದಾಯ ಭವನ ನಿರ್ಮಿಸಲು ಬೇಕಾದ ಸ್ಥಳ ಪರಿಶೀಲಿಸಲಾಗಿದೆ. ಇದೇ ಕಾಲನಿಯಲ್ಲಿ ಪಾಲಿಕೆಗೆ ಸಂಬಂಧಿಸಿದ 3 ಗುಂಟೆ ಜಾಗವಿದ್ದು, ಅಲ್ಲಿಯೇ ₹ 30 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ಇದಕ್ಕೆ ಬೇಕಾದ ಅನುದಾನ ಸಹ ಮಂಜೂರು ಸಹ ಮಾಡಿದ್ದು ಟೆಂಡರ್ ಕಾರ್ಯ ಪೂರ್ಣಗೊಳಿಸಿ, ಜನವರಿ ಅಂತ್ಯದೊಳಗೆ ಭವನ ನಿರ್ಮಾಣ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು ಆಯುಕ್ತರು ತಿಳಿಸಿದರು.
ಈ ವೇಳೆ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಪಾಲಿಕೆ ಉಪ ಆಯುಕ್ತ ವಿಜಯಕುಮಾರ್ ಹಾಗೂ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು, ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.ವಿಸ್ತೃತ ವರದಿ ಪ್ರಕಟಅಗ್ನಿ ಅವಘಡಕ್ಕೆ ತುತ್ತಾಗಿ 8 ಜನರ ಸಾವಿಗೆ ಕಾರಣವಾಗಿದ್ದ ಕಟ್ಟದ ತೆರವುಗೊಳಿಸುವ ಕುರಿತು ಗುರುವಾರ ಕನ್ನಡಪ್ರಭದಲ್ಲಿ "ಅಗ್ನಿ ಅವಘಡದ ಕಟ್ಟಡ ನೆಲಸಮಕ್ಕೆ ನಿರ್ಧಾರ? " ಶೀರ್ಷಿಕೆಯ ಅಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿ ಗಮನಿಸಿದ ಆಯುಕ್ತರು ಗುರುವಾರ ಅಚ್ಚವ್ವನ ಕಾಲನಿಯಲ್ಲಿರುವ ಕಟ್ಟಡದ ಪರಿಶೀಲನೆ ನಡೆಸಿದರು.
5 ಲಕ್ಷ ಪರಿಹಾರಕ್ಕೆ ಸಿಎಂ ಆದೇಶಸಿಲಿಂಡರ್ ಸೋರಿಕೆಯಿಂದಾಗಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಅಗ್ನಿ ಅವಘಡದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಇವರಲ್ಲಿ ಈಗಾಗಲೇ 8 ಜನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮೃತ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಬರೆದು ಒತ್ತಾಯಿಸಿದ್ದರು. ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ತಕ್ಷಣವೇ ಮೃತ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಲು ಆದೇಶಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಮೃತರ ಕುಟುಂಬಕ್ಕೆ ಸಚಿವ ಸಂತೋಷ ಲಾಡ್ ಅವರು ತಮ್ಮ ಲಾಡ್ ಫೌಂಡೇಶನ್ ಮೂಲಕವೂ ವೈಯಕ್ತಿಕ ಧನಸಹಾಯ ಮಾಡಿದ್ದರು.