ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು ಪ್ರತಿವರ್ಷ ಕಪಿಲಾ ನದಿಯಲ್ಲಿ ಪ್ರವಾಹ ಉಂಟಾದಾಗ ತಾಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಸುಮಾರು 100 ಮನೆಗಳಿಗೆ ನೀರು ತುಂಬಿಕೊಂಡು ತೊಂದರೆಯಾಗಲಿದೆ. ಆ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಬದಲಿ ನಿವೇಶನ ನೀಡಿ, ಮನೆ ನಿರ್ಮಿಸಿಕೊಡಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತೂವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.ಅವರು ತಾಲೂಕಿನ ಬೊಕ್ಕಹಳ್ಳಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ, ಕಪಿಲಾ ನದಿ ಪ್ರವಾಹಕ್ಕೆ ಸಿಲುಕಿ ತೊಂದರೆಗೆ ಒಳಗಾಗಿರುವ ಬಡಾವಣೆಗಳನ್ನು ಪರಿಶೀಲನೆ ನಡೆಸಿದ ನಂತರ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.ಬೊಕ್ಕಹಳ್ಳಿ ಗ್ರಾಮದಲ್ಲಿ ಸುಮಾರು 225 ಮನೆಗಳಿದ್ದು, ಅವುಗಳ ಪೈಕಿ 2018 ರಿಂದ ಪ್ರತಿವರ್ಷ ಸುಮಾರು 100 ಮನೆಗಳಿಗೆ ಕಪಿಲಾನದಿ ಪ್ರವಾಹದಿಂದ ತೊಂದರೆಗೆ ಒಳಗಾಗುತ್ತಿದೆ, ನದಿಯಂಚಿನ ಪ. ಜಾತಿ ಮತ್ತು ಪಂಗಡದವರು ವಾಸಿಸುವ 100 ಮನೆಗಳು ಜಲಾವೃತವಾಗಿ ತೊಂದರೆಗೆ ಸಿಲುಕುತ್ತಿವೆ, ಗ್ರಾಮಸ್ಥರು ಇಡೀ ಗ್ರಾಮವನ್ನೇ ಸ್ಥಳಾಂತರಿಸುವಂತೆ ಬೇಡಿಕೆ ಇಟ್ಟಿದ್ದಾರೆ, ಇಡೀ ಗ್ರಾಮವನ್ನು ಸ್ಥಳಾಂತರಿಸಲು 40 ಎಕರೆ ಜಾಗ ಬೇಕಾಗುತ್ತದೆ, ಸದ್ಯ ಈ ವಿಚಾರ ಕಾರ್ಯ ಸಾಧುವಲ್ಲ, ಆದ್ದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ಸಲುವಾಗಿ ಮುಳುಗಡೆಯಾಗುವ 100 ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಕಂದಾಯ ಇಲಾಖೆ 10 ಎಕರೆ ಜಾಗವನ್ನು ಗುರುತಿಸಿದ್ದು, ಅದರಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಅಲ್ಲದೆ ಪ್ರವಾಹಕ್ಕೆ ಸಿಲುಕಿದ ಮನೆಗಳಿಗೆ ರಾಜ್ಯ ಸರ್ಕಾರದಿಂದ ತಲಾ 50 ಸಾವಿರ ಪರಿಹಾರ ಧನ ನೀಡಲಿದೆ ಎಂದು ಹೇಳಿದರು.ಈ ಸಲ ವಾಡಿಕೆಗಿಂತ ಶೇ. 85 ಹೆಚ್ಚಿನ ಮಳೆಯಾಗಿದೆ, ಕಬಿನಿ ಜಲಾಶಯದಿಂದ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದಾಗಲೆಲ್ಲ ಗ್ರಾಮಸ್ಥರು ತೊಂದರೆ ಸಿಲುಕುತ್ತಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮಕ್ಕೆ ಭೇಟಿ ನೀಡಬೇಕಾಗಿತ್ತು, ಶಿರಾಡಿ ಘಾಟ್ ನಲ್ಲಿ ಬೆಟ್ಟಗಳು ಕುಸಿದು ತೊಂದರೆಯಾಗಿರುವುದರಿಂದ, ಅಲ್ಲಿಗೆ ತೆರಳಿದ್ದಾರೆ, ಶಾಸಕ ಯತೀಂದ್ರ ಹಾಗೂ ನನ್ನನ್ನು ಭೇಟಿ ನೀಡಿ ಕ್ಷೇತ್ರದ ಜನರ ಅಹವಾಲು ಕೇಳುವಂತೆ ಹೇಳಿದ್ದಾರೆ, ತೊಂದರೆಗೆ ಒಳಗಾದ 80 ಕುಟುಂಬಗಳಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ, ಊಟ, ತಿಂಡಿ ಹಾಗೂ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ, ಶೀಘ್ರವೇ ಸಂತ್ರಸ್ತರಿಗೆ ಪರಿಹಾರ ಧನ ದೊರಕಲಿದೆ ಎಂದು ಹೇಳಿದರು.ನೆರೆಯಿಂದಾಗಿ ರಾಜ್ಯಾದ್ಯಂತ ಸುಮಾರು 365 ಮನೆಗಳಿಗೆ ಹಾನಿಯಾಗಿದೆ. 1,321 ಶಾಲೆಗಳು, 58 ಅಂಗನವಾಡಿ, ಸುಮಾರು 58 ಕಿ.ಮೀ ರಸ್ತೆ ಹಾಳಾಗಿದೆ. ಅಲ್ಲದೆ 3 ಹಸು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಸಣ್ಣ ಪ್ರಮಾಣದಲ್ಲಿ ಹಾನಿಯಾಗಿರುವ 268 ಮನೆಗಳಿಗೆ ರಾಷ್ಟ್ರೀಯ ವಿಪತ್ತು ನಿಧಿಯ ನಿಯಮಾವಳಿ ಅನ್ವಯ 6.5 ಸಾವಿರ, ಪೂರ್ಣ ಹಾನಿಯಾದ ಮನೆಗಳಿಗೆ 1.20 ಲಕ್ಷ ಪರಿಹಾರ ನಿಗದಿಪಡಿಸಿದೆ. ಆದರೆ ಸಿ.ಎಂ. ಸಿದ್ದರಾಮಯ್ಯರವರು ಇದು ಸಾಕಾಗುವುದಿಲ್ಲ, 50 ಸಾವಿರ ಕೊಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ, ಸದ್ಯಕ್ಕೆ ಹಾನಿಗೊಳದ 268 ಮನೆಗಳಿಗೆ 50 ಸಾವಿರ ಪರಿಹಾರ ನೀಡಲಾಗುವುದು. ಪೂರ್ಣ ಹಾನಿಯಾದ ಮನೆಗಳಿಗೆ 1.20 ಲಕ್ಷ ನೀಡುವುದರಿಂದೊಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುವುದು ಎಂದರು. ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ತೊಂದರೆಗೆ ಒಳಗಾದ 100 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಜಾಗ ಗುರ್ತಿಸಲಾಗಿದೆ, ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ಕಂದಾಯ ಅಧಿಕಾರಿಗಳು ಸಂತ್ರಸ್ತ ಕುಟುಂಬಗಳ ಪಟ್ಟಿ ಮಾಡಿದ್ದು, ಸ್ಥಳಾಂತರ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ಜಿ. ರೆಡ್ಡಿ, ಜಿಪಂ ಸಿಇಒ ಗಾಯಿತ್ರಿ, ವಿಭಾಗಾಧಿಕಾರಿ ರಕ್ಷಿತ್, ಜಿಪಂ ಕಾರ್ಯದರ್ಶಿ ಕೃಷ್ಣರಾಜು, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭೀಮರಾವ್ ವಡ್ಡಾರ್, ತಾಪಂ ಇಒ ಹೆರಾಲ್ಡ್ ರಾಜೇಶ್, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಚ್.ಸಿ. ಬಸವರಾಜು, ವಿಶ್ವಕರ್ಮ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮುಖಂಡರಾದ ಇಂಧನ್ ಬಾಬು, ದಕ್ಷಿಣಮೂರ್ತಿ, ಬಿ.ಪಿ. ಮಹದೇವು, ಕೆಂಪಣ್ಣ, ಹೊಸಕೋಟೆ ಕುಮಾರ್, ಗಿರಿಧರ್, ಅಭಿ, ಕೆಂಪಿಸಿದ್ದನಹುಂಡಿ ಗ್ರಾಪಂ ಅಧ್ಯಕ್ಷ ರವಿ ಇದ್ದರು.