ಸಾರಾಂಶ
ನೌಕರರಿಗೆ ನೂತನ ಪಿಂಚಣಿ ಯೋಜನೆ ರದ್ಧತಿ ಮತ್ತು ಆರೋಗ್ಯ ಸಂಜೀವಿನಿ ಯೋಜನೆ ಅತ್ಯಂತ ಅಗತ್ಯವಾಗಿದ್ದು ಸರ್ಕಾರ ಜಾರಿಗೊಳಿಸಬೇಕು.
ನವಲಗುಂದ:
ಸರ್ಕಾರ 7ನೇ ವೇತನ ಆಯೋಗ ಜಾರಿಗೊಳಿಸಿದ್ದು ಆಯೋಗ ಶಿಫಾರಸು ಮಾಡಿದಂತೆ ಎಲ್ಲ ಸೌಲಭ್ಯಗಳು ನೌಕರರಿಗೆ ಸಿಗಲಿವೆ. ಜತೆಗೆ ನೂತನ ಪಿಂಚಣಿ ಯೋಜನೆ ರದ್ಧತಿ ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನೂ ಖಂಡಿತವಾಗಿ ಸರ್ಕಾರ ಜಾರಿಗೊಳಿಸಲಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಭರವಸೆ ನೀಡಿದರು.ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನವಲಗುಂದ ತಾಲೂಕು ಗುರುಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.
ನೌಕರರ ಸಂಘದ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿ, ನೌಕರರ ಜತೆ ಸದಾ ಜತೆಯಾಗಿದ್ದು ನಮ್ಮ ನೋವು-ನಲಿವುಗಳಿಗೆ ಸದಾ ಸ್ಪಂದಿಸುವ ಹಾಗೂ ನಮ್ಮ ಹೋರಾಟಗಳಿಗೆ ಧ್ವನಿಯಾಗಿ ಸರ್ಕಾರಕ್ಕೆ ನಮ್ಮ ಆಶೋತ್ತರ ಮುಟ್ಟಿಸುವ ಶಾಸಕರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ನೌಕರರಿಗೆ ನೂತನ ಪಿಂಚಣಿ ಯೋಜನೆ ರದ್ಧತಿ ಮತ್ತು ಆರೋಗ್ಯ ಸಂಜೀವಿನಿ ಯೋಜನೆ ಅತ್ಯಂತ ಅಗತ್ಯವಾಗಿದ್ದು ಸರ್ಕಾರ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.ಇದೇ ವೇಳೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ಸಿ ಆ್ಯಂಡ್ ಆರ್ ತಿದ್ದುಪಡಿ ಸಲುವಾಗಿ ರಾಜ್ಯ ಸಂಘದಿಂದ ಕೈಗೊಂಡಿರುವ ಫ್ರೀಡಂ ಪಾರ್ಕ್ ಚಲೋ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಶಾಸಕರಿಗೆ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬಿಇಒ ಎಸ್.ಬಿ. ಮಲ್ಲಾಡದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ತಹಸೀಲ್ದಾರ್ ಸುಧೀರ ಸಾಹುಕಾರ, ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡ್ರ, ಡಾ. ಎನ್.ಬಿ. ಕರ್ಲವಾಡ, ಎನ್.ವ್ಹಿ. ಬೀಡಿ, ಗೀತಾ ತೆಗ್ಯಾಳ, ವೈ.ಎಚ್. ಬಣವಿ, ಎಸ್.ಎಫ್. ನೀರಲಗಿ, ಶ್ರೀನಿವಾಸ ಅಮಾತೆಣ್ಣವರ, ವ್ಹಿ.ಎಂ. ಹಿರೇಮಠ, ಎಸ್.ಕೆ. ಕುರಹಟ್ಟಿ, ಸುಮಿತ್ರಾ ಕೋನರಡ್ಡಿ, ಎ.ಎಂ. ಮುಲ್ಲಾ, ಜಯಲಕ್ಷ್ಮೀ ಬೋಳನವರ, ಪಿ.ಕೆ. ಹಿರೇಗೌಡ್ರ, ವೈ.ಎಸ್. ಬೆಣ್ಣಿ, ಎನ್.ವೈ. ಕಳಸಾಪುರ, ವ್ಹಿ.ಆರ್. ಹಾದಿಮನಿ, ಎಂ.ಎನ್. ವಗ್ಗರ, ರಾಜು ಕಮತರ ಉಪಸ್ಥಿತರಿದ್ದರು.