ಸಾರಾಂಶ
ಸಿಂಧನೂರು: ಅಂಬೇಡ್ಕರ್ ಜಯಂತಿ ಅಂಗವಾಗಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ನಗರದ ತಾಲೂಕು ಕ್ರೀಡಾಂಗಣದ ಪಕ್ಕದಲ್ಲಿರುವ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ಆವರಣದಲ್ಲಿ ಅಂಬೇಡ್ಕರ್ ಮೂರ್ತಿಗೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಾ ಎಸ್ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆಯು ಕುಷ್ಟಗಿ ರಸ್ತೆ, ಎಪಿಎಂಸಿ, ಡಾ.ಬಾಬುಜಗಜೀವನರಾಮ್ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ರಸ್ತೆ ಮೂಲಕ ತಾಪಂ ಕಚೇರಿ ಆವರಣಕ್ಕೆ ಬಂದು ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ತದನಂತರ ಮಹಾತ್ಮ ಗಾಂಧೀಜಿ ಸರ್ಕಲ್, ಮಹರ್ಷಿ ವಾಲ್ಮೀಕಿ ವೃತ್ತ, ಕನಕದಾಸ ವೃತ್ತ, ಕಿತ್ತೂರುರಾಣಿ ಚೆನ್ನಮ್ಮ ವೃತ್ತ, ಹಿರೇಹಳ್ಳ ಸೇತುವೆ ಮೂಲಕ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಅಂಬೇಡ್ಕರ್ ಸರ್ಕಲ್ ಗೆ ಮೆರವಣಿಗೆ ತಲುಪಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಅಂಬೇಡ್ಕರ್ ಕುರಿತಾದ ಗೀತೆಗಳಿಗೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ವಿವಿಧ ವಸತಿ ನಿಲಯದ ಮೇಲ್ವಿಚಾರಕರು ಇದ್ದರು.
-----ಫೋಟೊ: ಸಿಂಧನೂರಿನಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅದ್ಧೂರಿ ಮೆರವಣಿಗೆ ನಡೆಸಲಾಯಿತು.