ಚನ್ನಗಿರಿ ಕಳ್ಳನ ಬಂಧಿಸಿ, ₹45.38 ಲಕ್ಷ ಮೌಲ್ಯ ಆಭರಣ ವಶ: ಎಸ್‌ಪಿ ಪತ್ರಿಕಾಗೋಷ್ಠಿ

| Published : Aug 04 2024, 01:15 AM IST

ಚನ್ನಗಿರಿ ಕಳ್ಳನ ಬಂಧಿಸಿ, ₹45.38 ಲಕ್ಷ ಮೌಲ್ಯ ಆಭರಣ ವಶ: ಎಸ್‌ಪಿ ಪತ್ರಿಕಾಗೋಷ್ಠಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ವಡ್ನಾಳ್ ರಾಜಣ್ಣ ಬಡಾವಣೆಯ ಅಫ್ರೋಜ್ ಅಹಮ್ಮದ್ ಎಂಬಾತನನ್ನು ಕಳವು ಪ್ರಕರಣ ಆರೋಪದ ಮೇಲೆ ಬಂಧಿಸಲಾಗಿದ್ದು, ಆತನಿಂದ ₹45.38 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಚನ್ನಗಿರಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

- ಅಫ್ರೋಜ್‌ ಅಮಮ್ಮದ್‌ ಬಂಧಿತ ಆರೋಪಿ । 30ಕ್ಕೂ ಅಧಿಕ ಕಳವು ಕೃತ್ಯ ಪ್ರಕರಣ, 13 ಪ್ರಕರಣ ಪತ್ತೆ: ಉಮಾ ಪ್ರಶಾಂತ್

- - - - ಚನ್ನಗಿರಿ, ಹೊನ್ನಾಳಿ, ಹರಿಹರ, ಭದ್ರಾವತಿ, ಹೊಳಲ್ಕೆರೆ, ದಾವಣಗೆರೆ, ಹರಪನಹಳ್ಳಿ, ಹೊಸದುರ್ಗ ಠಾಣೆ ವ್ಯಾಪ್ತಿಗಳಲ್ಲಿ ಕೈ ಚಳಕ

- 3 ವರ್ಷಗಳಿಂದ ತಲೆತಪ್ಪಿಸಿಕೊಂಡಿದ್ದ ಅಂತರ ಜಿಲ್ಲಾ ಕಳ್ಳನ ಬಂಧಿಸಿದ ಚನ್ನಗಿರಿ ಪೊಲೀಸರು- - -ಕನ್ನಡಪ್ರಭ ವಾರ್ತೆ, ಚನ್ನಗಿರಿ

ಪಟ್ಟಣದ ವಡ್ನಾಳ್ ರಾಜಣ್ಣ ಬಡಾವಣೆಯ ಅಫ್ರೋಜ್ ಅಹಮ್ಮದ್ ಎಂಬಾತನನ್ನು ಕಳವು ಪ್ರಕರಣ ಆರೋಪದ ಮೇಲೆ ಬಂಧಿಸಲಾಗಿದ್ದು, ಆತನಿಂದ ₹45.38 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಚನ್ನಗಿರಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ಶನಿವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಟ್ಟಣದ ಹೊರವಲಯದ ಭದ್ರಾವತಿ ರಸ್ತೆಯ ಬಾಪೂಜಿ ಆಸ್ಪತ್ರೆ ಬಳಿ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಆರೋಪಿ ಅಫ್ರೋಜ್‌ ಬೈಕಿನಲ್ಲಿ ತೆರಳುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಅಫ್ರೋಜ್‌ ಅಹಮ್ಮದ್‌ನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

30ಕ್ಕೂ ಅಧಿಕ ಪ್ರಕರಣ:

ಅಫ್ರೋಜ್‌ ಮೇಲೆ ಚನ್ನಗಿರಿ, ಹೊನ್ನಾಳಿ, ಹರಿಹರ, ಭದ್ರಾವತಿ, ಹೊಳಲ್ಕೆರೆ, ದಾವಣಗೆರೆ, ಹರಪನಹಳ್ಳಿ ಮತ್ತು ಹೊಸದುರ್ಗ ಪೊಲೀಸ್ ಠಾಣೆಗಳ ಸರಹದ್ದುಗಳಲ್ಲಿ ನಡೆಸಿದ ಕಳವು ಕೃತ್ಯಗಳ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಈ 30 ಪ್ರಕರಣಗಳಲ್ಲಿ 13 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಬಂಗಾರದ ಅಂಗಡಿಗಳಲ್ಲಿ ಆರೋಪಿ ಕಡೆಯಿಂದ ಮಾರಾಟ ಮಾಡಿದ ಕಳವು ಮಾಲುಗಳನ್ನು ಜಪ್ತಿ ಮಾಡಲಾಗಿದೆ ಎಂದರು.

ಬಂಧಿತ ಆರೋಪಿ ಅಫ್ರೋಜ್‌ ಅಹಮ್ಮದ್‌ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈತನ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್, ಸಂತೋಷ್, ಮಂಜುನಾಥ್, ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಸಿಪಿಐ ಲಿಂಗನಗೌಡ ಮತ್ತು ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಲಾಗಿತ್ತು. ಆರೋಪಿಯನ್ನು ತಂಡವು ಪತ್ತೆಹಚ್ಚಿದ್ದು, ಚನ್ನಗಿರಿ ಪೊಲೀಸ್ ಠಾಣೆಯ 3 ಪ್ರಕರಣ, ಸಂತೆಬೆನ್ನೂರು 1, ತರೀಕೆರೆಯ 3, ಲಕ್ಕವಳ್ಳಿಯ 4, ಭದ್ರಾವತಿ ಹಾಗೂ ಅಜ್ಜಂಪುರದ ತಲಾ 1 ಪ್ರಕರಣ ಸೇರಿ ಒಟ್ಟು 13 ಪ್ರಕರಣಗಳ ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಉಪಾಧೀಕ್ಷಕರಾದ ಸಂತೋಷ್, ಮಂಜುನಾಥ್, ಡಿವೈಎಸ್‌ಪಿ ರುದ್ರಪ್ಪ ಉಜ್ಜನಕೊಪ್ಪ, ಸರ್ಕಲ್ ಇನ್‌ಸ್ಪೆಕ್ಟರ್‌ ಲಿಂಗನಗೌಡ, ಇಲಾಖೆ ಸಿಬ್ಬಂದಿ ಹಾಜರಿದ್ದರು.

- - - -3ಕೆಸಿಎನ್‌ಜಿ3:

ಚಿನ್ನಾಭರಣ ಕಳವು ಪ್ರಕರಣ ಆರೋಪಿ ಅಫ್ರೋಜ್ ಅಹಮ್ಮದ್ ಬಂಧನ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.