ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಕನ್ನಡಕ್ಕೆ ವಿಶಿಷ್ಟವಾದ, ಮೌಲಿಕವಾದ ಗಟ್ಟಿ ಬರೆವಣಿಗೆ ನೀಡಿದ ಕಮಲಾ ಹಂಪನಾ ಬದುಕು, ಪರಿಶುದ್ಧ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ನಾಡೋಜ ಹಂ.ಪ. ನಾಗರಾಜಯ್ಯ ಹೇಳಿದರು.ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ‘ನಾಡೋಜ ಪ್ರೊ. ಕಮಲಾ ಹಂಪನಾ ನುಡಿನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಮಲಾ ಹಂಪನಾ 6 ವರ್ಷ ಸಹಪಾಠಿಯಾಗಿ, 61 ವರ್ಷ ಸಹಧರ್ಮಿಣಿಯಾಗಿ ದಾಂಪತ್ಯ ಜೀವನದಲ್ಲಿ ಜೊತೆಯಾದರು. ಸಾಹಿತ್ಯ ಪಯಣದಲ್ಲಿ ವಿರಳವಾಗಿರುವ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ವಾಗ್ಮಿತೆಯ ದೃಷ್ಟಿಯಿಂದ ಪ್ರಬುದ್ಧ ವಿಷಯಗಳನ್ನು ಪ್ರಸ್ತಾಪಿಸಿ, ಸಂಶೋಧನೆ ನಡೆಸಿದರು. ಅವರ ಕಥೆಗಳು, ಕವನಗಳು, ವಚನಗಳು ವಿಮರ್ಶಾತ್ಮಕ ದೃಷ್ಟಿಯಿಂದ ಕೂಡಿವೆ ಎಂದು ತಿಳಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಮಾತನಾಡಿ, ಕಮಲಾ ಹಂಪನಾ ಅವರ ವ್ಯಕ್ತಿತ್ವದ ಪ್ರಭಾವ ಸಕಾರಾತ್ಮಕವಾಗಿ ಅವರ ಸಂಗಡಿಗರ ಮೇಲೆ ಪರಿಣಾಮ ಬೀರಿತು. 18 ಸಂಪುಟಗಳ ಅವರ ಆತ್ಮಚರಿತ್ರೆಯಲ್ಲಿ ವಾಸ್ತವ ಸತ್ಯಗಳಿವೆ. 60 ವರ್ಷಗಳು ಸುದೀರ್ಘ ಸಾಹಿತ್ಯ ಸೇವೆ ಸಲ್ಲಿಸಿದರು. ಅನುಭವಕ್ಕೆ ದಕ್ಕಿದ ವಸ್ತುವಿನಿಂದ ಬರಹದಲ್ಲಿ, ಭಾಷಣದಲ್ಲಿ ಪ್ರಭುತ್ವ ಸಾಧಿಸಿದರು ಎಂದು ತಿಳಿಸಿದರು.
ಸಮಕಾಲೀನ ಸಂದರ್ಭದ ಸಾಕ್ಷಿ ಪ್ರಜ್ಞೆಯ ಕಮಲಾ ಹಂಪನಾ ಅವರು, ಕ್ರೂರ ಸಮಾಜದಲ್ಲಿ ಸಾಮಾಜಿಕ ಹೊಣೆಗಾರಿಕೆ ಹೊತ್ತು, ಶಿಕ್ಷಣದ ಮೂಲಕ ಸಮಾಜದ ಅನಿಷ್ಟ ಕಟ್ಟುಪಾಡುಗಳಿಂದ ಮುಕ್ತವಾಗಲು ಹೋರಾಡಿದರು. ಸ್ತ್ರೀ ಸಂವೇದನೆ ಕಥೆಗಳನ್ನು, ಬಂಡಾಯದ ಕವನಗಳನ್ನು ಬರೆದರು. ಈಗಿನ ಸಾಹಿತ್ಯಲೋಕ ಕೆಸರುಗದ್ದೆಯಾಗಿದೆ ಎಂಬ ಅಸಮಾಧಾನ ಅವರಿಗಿತ್ತು ಎಂದು ತಿಳಿಸಿದರು.ಜಾನಪದ ತಜ್ಞೆ ಡಾ. ಕೆ. ಆರ್. ಸಂಧ್ಯಾ ರೆಡ್ಡಿ ಮಾತನಾಡಿ, ರಾಷ್ಟ್ರಕ ವಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಾಹಿತ್ಯಾಭ್ಯಾಸ ಮಾಡುವ ಏಕೈಕ ಗುರಿ ಕಮಲಾ ಹಂಪನಾ ಅವರಿಗಿತ್ತು. ಕನ್ನಡಕ್ಕಾಗಿ ಯಾರನ್ನಾದರೂ ಎದುರಿ ಹಾಕಿಕೊಳ್ಳುವಂಥ ಧೈರ್ಯಗಾತಿ ಎಂದು ತಿಳಿಸಿದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಸಾಹಿತ್ಯಲೋಕದ ಮಿನುಗುತಾರೆ ಕಮಲಾ ಹಂಪನಾ ಅವರನ್ನು ಕಳೆದುಕೊಂಡಿದ್ದೇವೆ. ಅವರ ಕಾರ್ಯಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿವೆ. ಜೈನ ಸಮುದಾಯದ ಕುರಿತು ಸಂಶೋಧನೆ ನಡೆಸಿ, ಸಂಪುಟಗಳನ್ನು ಪ್ರಕಟಿಸುವುದರಲ್ಲಿ ಅಗ್ರಗಣ್ಯರು ಎಂದರು.ನಾಡೋಜ ಪ್ರೊ. ಕಮಲಾ ಹಂಪನಾ ಅವರ ಕುಟುಂಬದವರಿಂದ ತುಮಕೂರು ವಿಶ್ವವಿದ್ಯಾನಿಲಯಕ್ಕೆ ‘ಕಮಲಾ ಹಂಪನಾ’ ದತ್ತಿನಿಧಿ ಸಮರ್ಪಣೆಯಾಗಿ 5 ಲಕ್ಷ ರು. ಶಾಶ್ವತ ನಿಧಿ ಮತ್ತು ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರತಿ ವರ್ಷ ಪ್ರಥಮ ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗೆ ಚಿನ್ನದ ಪದಕ ನೀಡುವ ಸಲುವಾಗಿ ನಿಧಿ ಸ್ಥಾಪನೆಯ ಚೆಕ್‌ಗಳನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹಾಗೂ ಪ್ರೊ. ಕೆ. ಪ್ರಸನ್ನಕುಮಾರ್ ಅವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದ ಸಂಯೋಜಕಿ ಡಾ. ಗೀತಾ ವಸಂತ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಉಪಸ್ಥಿತರಿದ್ದರು.