ಸಾರಾಂಶ
ನ್ಯಾಯವಾದಿ, ಅಹಿಂದ ಜನಚಳುವಳಿಯ ಪ್ರಧಾನ ಸಂಚಾಲಕ ಬಿ.ಎ.ಮುಹಮ್ಮದ್ ಹನೀಫ್ ಅವರು ಕ್ರಿಮಿನಲ್ ಕಾನೂನು ಬಗ್ಗೆ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಸಾಮಾಜಿಕ ಸಮಾನತೆಗೆ ಹೆಚ್ಚು ಒತ್ತು ನೀಡಿ ಕಾರ್ಯಾಚರಿಸುವ ಅಹಿಂದ ಚಳವಳಿ ದ.ಕ.ಜಿಲ್ಲೆಯಲ್ಲಿ ಮತ್ತಷ್ಟು ಬಲಗೊಳ್ಳುವ ಅಗತ್ಯವಿದೆ. ಗತಕಾಲದ ಸಾಮರಸ್ಯವನ್ನು ಮರಳಿ ಪಡೆಯಲು ಅಹಿಂದ ಚಳವಳಿಗೆ ಜಾತ್ಯತೀತ ಪಕ್ಷಗಳಲ್ಲದೆ ಸಮಾನ ಮನಸ್ಕ ಸಂಘಟನೆಗಳು ಕೂಡ ಕೈ ಜೋಡಿಸಬೇಕಿದೆ ಎಂದು ಮಾಜಿ ಸಚಿವ ರಮಾನಾಥ ರೈ ಅಭಿಪ್ರಾಯಪಟ್ಟರು.ಅಹಿಂದ ಜನಚಳುವಳಿ ವತಿಯಿಂದ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ನಡೆದ ನೂತನ ಕ್ರಿಮಿನಲ್ ಕಾನೂನಿನ ಬಗ್ಗೆ ಮಾಹಿತಿ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಡಪಕ್ಷಗಳ ಹೋರಾಟ ಮತ್ತು ಅಂದಿನ ಸರ್ಕಾರದ ಪ್ರಯತ್ನದಿಂದ ಭೂಮಸೂದೆ ಕಾಯ್ದೆ ಜಾರಿಗೆ ಬಂದಿತ್ತು. ಇದರಿಂದ ಸಾವಿರಾರು ಕುಟುಂಬಗಳು ಪಟ್ಟಾ ಜಮೀನು ಹೊಂದುವಂತಾಯಿತು. ವಿಪರ್ಯಾಸವೆಂದರೆ ಅಂದಿನ ಭೂಮಸೂದೆಯ ಕಾಯ್ದೆಯ ಬಹುತೇಕ ಫಲಾನುಭವಿಗಳ ಮಕ್ಕಳು ಇಂದು ಮತೀಯ ಶಕ್ತಿಗಳ ಜೊತೆ ಗುರುತಿಸಿಕೊಂಡಿದ್ದಾರೆ. ಅವರಿಗೆ ವಾಸ್ತವ ಸ್ಥಿತಿ ತಿಳಿಸಿಕೊಡುವ ಪ್ರಯುತ್ನವನ್ನು ಅಹಿಂದ ಮಾಡಬೇಕಿದೆ. ಅದಕ್ಕೆ ಮುನೀರ್ ಕಾಟಿಪಳ್ಳರಂತಹ ಸಾಮಾಜಿಕ ಹೋರಾಟಗಾರರು ಮುಂಚೂಣಿಯಲ್ಲಿ ನಿಲ್ಲುವ ಅನಿವಾರ್ಯತೆ ಇದೆ ಎಂದು ರಮಾನಾಥ ರೈ ಹೇಳಿದರು. ರಾಜ್ಯ ವಿಧಾನ ಪರಿಷತ್ ನೂತನ ಸದಸ್ಯ ಐವನ್ ಡಿಸೋಜಾ, ಬ್ಯಾರಿ ಅಕಾಡಮಿಯ ನೂತನ ಅಧ್ಯಕ್ಷ ಉಮರ್ ಯು.ಎಚ್., ಕೊಂಕಣಿ ಅಕಾಡಮಿಯ ನೂತನ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಸದಾಶಿವ ಉಳ್ಳಾಲ್ ಇವರನ್ನು ಸನ್ಮಾನಿಸಲಾಯಿತು.ನ್ಯಾಯವಾದಿ, ಅಹಿಂದ ಜನಚಳುವಳಿಯ ಪ್ರಧಾನ ಸಂಚಾಲಕ ಬಿ.ಎ.ಮುಹಮ್ಮದ್ ಹನೀಫ್ ಅವರು ಕ್ರಿಮಿನಲ್ ಕಾನೂನು ಬಗ್ಗೆ ಮಾಹಿತಿ ನೀಡಿದರು. ಅಹಿಂದ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ, ಲೇಖಕಿ ಡಾ. ಚಂಚಲಾ ದಯಾಕರ್, ಕೊಂಕಣಿ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು.ಎಚ್. ಖಾಲಿದ್ ಉಜಿರೆ ಭಾಗವಹಿಸಿದ್ದರು. ಅಹಿಂದ ಉಪಾಧ್ಯಕ್ಷರಾದ ಪುಂಡರೀಕಾಕ್ಷ, ಯೂಸುಫ್ ವಕ್ತಾರ್ ಇದ್ದರು.
ಅಹಿಂದ ಜನ ಚಳವಳಿ ಅಧ್ಯಕ್ಷ ಭರತೇಶ್ ಅಮೀನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಜತ್ತಬೈಲ್ ಮತ್ತು ಕೋಶಾಧಿಕಾರಿ ಇಬ್ರಾಹಿಂ ನಡುಪದವು ನಿರೂಪಿಸಿದರು. ಕಾರ್ಯದರ್ಶಿ ಮೀನಾಕ್ಷಿ ಪಜೀರ್ ವಂದಿಸಿದರು.