ಸಾರಾಂಶ
ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಕಾವೇರಿ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಿದ್ಧಗೊಳಿಸಿ ಎಂದು ಸಚಿವರು ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಗಮಿಸಿ ಕಾವೇರಿ ನದಿ ಪ್ರವಾಹದಿಂದ ಹಾನಿಯುಂಟಾಗಿರುವ ಸ್ಥಳ ಪರಿಶೀಲನೆ ನಡೆಸಿದರು.ಕೆಆರ್‌ಎಸ್ ಅಣೆಕಟ್ಟೆಯಿಂದ 1.70 ಲಕ್ಷಕ್ಕೂ ಅಧಿಕ ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ನದಿ ನೀರು ನುಗ್ಗಿ ಗ್ರಾಮದ ಅಂಗನವಾಡಿ, ಶುದ್ಧ ಕುಡಿಯುವ ಘಟಕ ಹಾಗೂ ಗ್ರಾಮದ ಬೀದಿಗಳು ಜಲಾವೃತಗೊಂಡು ಗ್ರಾಮಸ್ಥರಲ್ಲಿ ಆತಂಕ ಎದುರಾಗಿತ್ತು.
ಅಧಿಕಾರಿಗಳೊಂದಿಗೆ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಭೇಟಿಕೊಟ್ಟ ಸಚಿವ ಚಲುವರಾಯಸ್ವಾಮಿ ಅವರು ಮಾಜಿ ಶಾಸಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.ನಂತರ ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ತೆರಳಿ ಸುರಿಯುವ ಮಳೆಯ ನಡುವೆಯೇ ಹಾನಿ ಪ್ರದೇಶವನ್ನು ವೀಕ್ಷಿಸಿದರು. ಕಾವೇರಿ ನದಿ ತೀರಕ್ಕೆ ತೆರಳಿ ಕಾವೇರಿ ನದಿ ನೀರಿನಿಂದ ಉಂಟಾಗಿರುವ ಹಾನಿಯ ಪರಿಶೀಲಿಸಿದರು. ಇದೇ ವೇಳೆ ಗ್ರಾಮಸ್ಥರು ಕಾವೇರಿ ಪ್ರವಾಹದಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರಲ್ಲಿ ಮನವಿ ಮಾಡಿದರು.
ಇದಕ್ಕೂ ಮುನ್ನ ಬಿ.ಟಿ.ಕೊಪ್ಪಲು ಗ್ರಾಮದ ಕಾಂಗ್ರೆಸ್ ಮುಖಂಡ ಬಿ.ಟಿ.ಮಂಜುನಾಥ್ ಮನೆಗೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ಕೆಲಕಾಲ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ವೇಳೆ ಬಿ.ಟಿ.ಮಂಜುನಾಥ್, ಗ್ರಾಮವು ಜಲಾವೃತಗೊಳ್ಳುವ ಭೀತಿ ಎದುರಾಗುತ್ತಿದೆ. ಜನರ ನೆಮ್ಮದಿ ಬದುಕಿಗಾಗಿ ಶಾಶ್ವತ ಪರಿಹಾರ ಕಂಡುಕೊಡಬೇಕೆಂದು ಸಚಿವರ ಬಳಿ ಮನವಿ ಮಾಡಿದರು.ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಕಾವೇರಿ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಿದ್ಧಗೊಳಿಸಿ ಎಂದು ಸಚಿವರು ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಸೂಚಿಸಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನಬಾಲದಂಡಿ, ಎಸಿ ನಂದೀಶ್, ತಹಸೀಲ್ದಾರ್ ಸಂತೋಷ್, ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು, ಕೆಪಿಸಿಸಿ ಸದಸ್ಯ ಬಿ.ರೇವಣ್ಣ, ಎ.ಎಲ್.ಕೆಂಪೂಗೌಡ, ವಿಜೇಂದ್ರಮೂರ್ತಿ, ರಾಘವ ಸೇರಿ ಹಲವರು ಹಾಜರಿದ್ದರು.