ಸಾರಾಂಶ
ಹೊನ್ನಾವರ: ರೈತರಿಂದ ಬೆಳೆಗಳನ್ನು ಖರೀದಿ ಮಾಡುವ ಜತೆಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬಂದಿರುವ ಕ್ಯಾಂಪ್ಕೋ ಇಂದು ಉತ್ತುಂಗ ಸ್ಥಿತಿಯಲ್ಲಿರಲು ರೈತ ಗ್ರಾಹಕರು ಮುಖ್ಯ ಕಾರಣ ಎಂದು ಮಂಗಳೂರಿನ ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಅಭಿಪ್ರಾಯಪಟ್ಟರು.
ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಮಂಗಳೂರಿನ ಕೇಂದ್ರ ಅಡಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ ನಿಯಮಿತ ಮತ್ತು ಹೊನ್ನಾವರ ಶಾಖೆಯಿಂದ ನಡೆದ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಡಕೆ ಬೆಳೆಗಾರರ ಬೆಂಬಲಕ್ಕೆ ನಿಲ್ಲುವ ಜತೆಗೆ ರೈತರಿಗೆ ಹಲವು ಸೌಲಭ್ಯವನ್ನು ಕ್ಯಾಂಪ್ಕೋ ನೀಡಿ ಬೆಳೆಗಾರರಿಗೆ ಉತ್ತೇಜನ ನೀಡುತ್ತಿದೆ. ರೈತರಿಂದ ಬೆಳೆ ಖರೀದಿ ಮಾಡಿ ವಿಶ್ವಾಸ ಉಳಿಸಿಕೊಂಡಿದೆ ಎಂದರು.ರೈತರ ಜತೆ ನಡೆದ ಸಂವಾದದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಎನ್. ಭಟ್ ಮಾತನಾಡಿ, ಅಡಕೆಗೆ ಉತ್ತಮ ದರ ಬಂದಷ್ಟೇ ಬೇಗ ಇಳಿಕೆಯಾಗುತ್ತಿದೆ. ಹೊರಗಿನಿಂದ ಆಮದಾಗುತ್ತಿರುವ ಅಡಕೆ ತಡೆಯಬೇಕು. ಈ ಮೂಲಕ ಕ್ಯಾಂಪ್ಕೋ ರೈತರ ಸಮಸ್ಯೆ ಬಗೆಹರಿಸುವಲ್ಲಿ ಹೆಚ್ಚಿನ ಪ್ರಯತ್ನ ಮಾಡಬೇಕು ಎಂದರು.ಅಧಿಕಾರಿಗಳಿಂದ ರೈತರ ಬೆಳೆ ರಕ್ಷಣೆಗೆ ಇರುವ ತೊಡಕು, ಅಡಕೆ ಉತ್ಪನ್ನಗಳನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ನಡೆಯಬೇಕಾದ ಸಂಶೋಧನೆ, ಗೊಬ್ಬರ, ಉತ್ತಮ ಇಳುವರಿ ಬರುವ ಸಸಿ ಪೂರೈಕೆ ಸೇರಿದಂತೆ ಹಲವು ವಿಷಯದ ಕುರಿತು ಸಂಸ್ಥೆಯ ನಿರ್ದೆಶಕರು ಹಾಗೂ ಅಧಿಕಾರಿಗಳೊಂದಿಗೆ ರೈತರು ಚರ್ಚೆ ನಡೆಸಿದರು.
ಕ್ಯಾಂಪ್ಕೋ ಸದಸ್ಯರು ತಿಳಿಸಿದ ಎಲ್ಲ ಸಮಸ್ಯೆಗಳ, ನ್ಯೂನತೆಗಳ ಬಗ್ಗೆ ಅವಲೋಕನ ನಡೆಸುತ್ತೇವೆ. ಗೊಬ್ಬರ ಪೂರೈಕೆ, ವಿವಿಧ ಸೌಲಭ್ಯಗಳ ಮಾಹಿತಿ, ಬೆಳೆ ಖರೀದಿ ಇರುವ ತೊಡಕು ನಿವಾರಣೆಯ ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸಿದರು. ಗಂಭೀರ ವಿಷಯಗಳ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚೆಮಾಡಿ, ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಉತ್ತರಿಸಿದರು.ಅಡಕೆ ಬೆಳೆಗಾರ ಜಿ.ಎನ್. ಗೌಡ ಮಾತನಾಡಿ, ಗ್ರಾಮೀಣ ಭಾಗದ ಸಣ್ಣಪುಟ್ಟ ಅಡಕೆ ಬೆಳೆ ರೈತರಿಗೂ ಅನೂಕೂಲವಾಗುವಂತೆ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಕಚೇರಿ ತೆರೆದು, ವಹಿವಾಟಿಗೆ ಅನುಕೂಲ ಮಾಡಬೇಕು. ಜತೆಗೆ ಯಾವ ಗುಣಮಟ್ಟದ ಅಡಕೆ ಖರೀದಿ ಮಾಡುತ್ತೀರಿ ಎನ್ನುವುದು ತಿಳಿಸಬೇಕು ಎಂದರು.
ಹೊನ್ನಾವರ ಭಾಗದಲ್ಲಿ 9 ಸಾವಿರ ಸದಸ್ಯರಿದ್ದಾರೆ. ಅದರಲ್ಲಿ 2 ಸಾವಿರ ಸದಸ್ಯರು ಮಾತ್ರ ಸಕ್ರಿಯರಿದ್ದಾರೆ. ಸಕ್ರಿಯರಲ್ಲದ ಸದಸ್ಯರನ್ನು ಸಕ್ರಿಯರನ್ನಾಗಿಸುವ ಜತೆಗೆ ಸದಸ್ಯರಿಗೆ ಬೆಂಬಲ ನೀಡುತ್ತೇವೆ ಎಂದರು.ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಪ್ರಾಸ್ತವಿಕವಾಗಿ ಮಾತನಾಡಿ, 16 ಅಡಕೆ ಖರೀದಿ ಕೇಂದ್ರ, 12 ಚಾಕಲೇಟ್ ಉತ್ಪನ್ನ, 32 ಉಪಕೇಂದ್ರದ ಮೂಲಕ ₹3300 ಕೋಟಿಯಷ್ಟು ವ್ಯವಹಾರ ಮಾಡುತ್ತಾ ಬಂದಿದೆ ಎಂದು ವಿವರಿಸಿದರು.
ಸಂಸ್ಥೆಯ ಜನರಲ್ ಮ್ಯಾನೇಜರ್ ರೇಷ್ಮಾ ಮಲ್ಯ ಯೋಜನೆಯಿಂದ ದೊರೆಯುವ ಸೌಲಭ್ಯ ವಿವರಿಸಿದರು. ಕೃಷಿ ಅಧಿಕಾರಿ ಕೃಷ್ಣ, ಗೊಬ್ಬರ ಹಾಗೂ ಕೃಷಿ ಉತ್ಪನ್ನಗಳ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.ಸಂಸ್ಥೆಯ ಕೃಷ್ಣಪ್ರಸಾದ, ಬಾಲಕೃಷ್ಣ ರೈ, ಮಹೇಶ ಚೌಟಾ, ಸುರೇಶ ಶೆಟ್ಟಿ, ಜಯಪ್ರಕಾಶ, ರಾಘವೇಂದ್ರ ಭಟ್, ಜಯರಾಮ ಶೆಟ್ಟಿ, ರತ್ನಾಕರ ಮತ್ತಿತರು ಇದ್ದರು. ಸಂಸ್ಥೆಯ ನಿರ್ದೇಶಕ ಶಂಭುಲಿಂಗ ಹೆಗ್ಡೆ ನಡಗೋಡು ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಖಂಡಿಗೆ ವಂದಿಸಿದರು.