ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಿಂದ ಉಂಟಾಗುವ ಪ್ರವಾಹ ನಿರ್ವಹಣೆಯನ್ನು ಜಿಲ್ಲಾಡಳಿತ ಸಮರ್ಥವಾಗಿ ನಿರ್ವಹಣೆ ಮಾಡಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಜಮಖಂಡಿ ತಾಲೂಕಿನ ಪ್ರವಾಹ ಪೀಡಿತ ಆಲಗೂರು ಮತ್ತು ಕಡಕೋಳ ಗ್ರಾಮ ಹಾಗೂ ಚಿಕ್ಕಪಡಸಲಗಿ ಸೇತುವೆ ವೀಕ್ಷಣೆ ಮಾಡಿದ ನಂತರ ಬಾಗಲಕೋಟೆಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಜಲಾಶಯಕ್ಕೆ ಬರುವ ಒಳಹರಿವು ನೋಡಿಕೊಂಡು ಹೊರಗಡೆ ಬಿಡುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗುವುದನ್ನು ತಪ್ಪಿಸಲಾಗಿದೆ. ಪ್ರಸಕ್ತ ಸಾಲಿನ ಪ್ರವಾಹದಲ್ಲಿ 3 ಜನರ ಜೀವ ಹಾನಿಯಾಗಿದ್ದು, ತಲಾ 5 ಲಕ್ಷದಂತೆ ₹15 ಲಕ್ಷಗಳ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.2499 ಜನರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ:
ಮುಧೋಳ ತಾಲೂಕಿನಲ್ಲಿ ಒಟ್ಟು 13 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಒಟ್ಟು 1540 ಜನ ಆಶ್ರಯ ಪಡೆಯುತ್ತಿದ್ದಾರೆ. ರಬಕವಿ-ಬನಹಟ್ಟಿ ತಾಲೂಕಿನ 7 ಕಾಳಜಿ ಕೇಂದ್ರಗಳಲ್ಲಿ 951 ಜನ ಆಶ್ರಯ ಪಡೆದರೆ, ಬೀಳಗಿ ತಾಲೂಕಿನಲ್ಲಿ 1 ಕಾಳಜಿ ಕೇಂದ್ರ ತೆರೆಯಲಾಗಿದೆ. 8 ಜನ ಆಶ್ರಯ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 22 ಕಾಳಜಿ ಕೇಂದ್ರಗಳಲ್ಲಿ ಒಟ್ಟು 2499 ಜನ ಆಶ್ರಯ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.15455 ಹೆಕ್ಟೇರ್ ಕೃಷಿ ಪ್ರದೇಶ ಹಾನಿ:
ಜಿಲ್ಲೆಯಲ್ಲಿ ಜೂನ್ 1 ರಿಂದ ಜುಲೈ 31ವರೆಗೆ ಒಟ್ಟು 414 ಮನೆಗಳು ಹಾನಿಗೊಳಗಾಗಿದೆ. ಅದರಲ್ಲಿ 255 ಭಾಗಶಃ ಹಾನಿಯಾದ ಮನೆಗಳಿಗೆ ನಿಯಮಾನುಸಾರ ₹16.14 ಲಕ್ಷಗಳ ಪರಿಹಾರ ಪಾವತಿಸಲಾಗಿದೆ. 44 ಮನೆಗಳು ಇತ್ತೀಚಿನ ಮಳೆಯಿಂದ ಹಾನಿಯಾಗಿದ್ದು, ಸಮೀಕ್ಷೆ ಹಂತದಲ್ಲಿ ಬಾಕಿ ಇರುತವೆ. ಕಬ್ಬು, ಮೆಕ್ಕೆಜೋಳ, ಉದ್ದು ಮತ್ತು ಹೆಸರು ಹಾನಿಗೊಳಗಾಗಿದೆ. ಕೃಷಿ 15455 ಹೆಕ್ಟೇರ್ ಪ್ರದೇಶ ಹಾನಿಗೊಳಗಾದರೆ, ತೋಟಗಾರಿಕೆಯಲ್ಲಿ 417 ಹೆಕ್ಟೇರ್ ಪ್ರದೇಶದಷ್ಟು ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.451 ವಿದ್ಯುತ್ ಕಂಬ ಹಾನಿ:
ಪ್ರವಾಹದಿಂದ ಹೆಸ್ಕಾಂ ಇಲಾಖೆಗೆ ಸಂಬಂಧಿಸಿದ 451 ವಿದ್ಯುತ್ ಕಂಬ, 90 ಟ್ರಾನ್ಸ್‌ಫಾರಂ ಹಾಗೂ 9.18 ಕಿಮೀ ತಂತಿ ಹಾನಿಯಾಗಿರುವ ಬಗ್ಗೆ ವರದಿಯಾಗದೆ. ಅಂಗನವಾಡಿ ಹಾಗೂ ಶಾಲೆಗಳು ಹಾನಿಯಾಗಿರುವುದಿಲ್ಲ. ಮೂಲಭೂತ ಸೌಕರ್ಯಗಳು ಹಾನಿಯಾಗಿರುವ ಬಗ್ಗೆ ಸಮೀಕ್ಷೆ, ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಿದ್ದು, ವರದಿ ಸ್ವೀಕೃತಗೊಂಡ ನಂತರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ಸಚಿವರು ತಿಳಿಸಿದರು.ಚಿಚಖಂಡಿ ಸೇತುವೆ ಎತ್ತರಕ್ಕೆ ಪ್ರಸ್ತಾವ:
ಪ್ರವಾಹ ಉಂಟಾದಾಗಲೆಲ್ಲ ಮುಧೋಳ ತಾಲೂಕಿನ ಅನೇಕ ಸೇತುವೆಗಳು ಮುಳುಗಡೆ ಹೊಂದುತ್ತಿವೆ. ಇದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುವುದನ್ನು ಅರಿಯಲಾಗಿದೆ. ಚಿಚಖಂಡಿ ಸೇತುವೆಯನ್ನು ಎತ್ತರ ಮಾಡಲು ಪ್ರಸ್ತಾವನೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪೂರ್ಣ ಹಾನಿಯಾದ ಮನೆಗಳಿಗೆ ಮಾರ್ಗಸೂಚಿಯನ್ವಯ ₹1.20 ಲಕ್ಷಗಳ ಪರಿಹಾರ ಜೊತೆಗೆ ಹೆಚ್ಚುವರಿಯಾಗಿ ದೇವರಾಜ ಅರಸು ವಸತಿ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾನ್ಯ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ 1.20 ಲಕ್ಷ ಮತ್ತು ಎಸ್.ಸಿ, ಎಸ್ಟಿ ವರ್ಗಗಳಿಗೆ ₹1.50 ಲಕ್ಷಗಳ ಮಂಜೂರು ಮಾಡಲಾಗುತ್ತದೆ ಎಂದರು.ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ಇತರರು ಇದ್ದರು.
---ಬಾಕ್ಸ್.....
ಸಂಪೂರ್ಣ ಹಾನಿಯಾ ಮನೆಗೆ ₹1 ಲಕ್ಷ, ಭಾಗಶಃ ₹50 ಸಾವಿರಅನಧಿಕೃತ ಜಮೀನಿನಲ್ಲಿ ಸಂಪೂರ್ಣ ಹಾನಿಯಾದ ಮನೆಗಳಿಗೆ ಒಂದು ಬಾರಿ ಪರಿಹಾರವಾಗಿ ₹1 ಲಕ್ಷ ಪಾವತಿಸಲಾಗುತ್ತದೆ. ಭಾಗಶಃ ಹಾನಿಯಾದ ಮನೆಗಳ ದುರಸ್ತಿಗೆ ವಿಪತ್ತು ನಿಧಿಯಿಂದ ₹6500ಗಳ ಜೊತೆಗೆ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ₹43500 ಸೇರಿ ಒಟ್ಟು ₹50 ಸಾವಿರಗಳನ್ನು ನೀಡಲಾಗುತ್ತದೆ. ಪ್ರವಾಹದಿಂದ ಬಟ್ಟೆ ಕಳೆದುಕೊಂಡರೆ ₹2500, ಗೃಹೋಪಯೋಗಿ ವಸ್ತುಗಳು ಹಾನಿಯಾದಲ್ಲಿ ₹2500 ಪರಿಹಾರ ಪಾವತಿಸಲು ನಿಗದಿಪಡಿಸಲಾಗಿದೆ. ವಿಪತ್ತು ನಿಧಿಯಿಂದ ₹5 ಸಾವಿರಗಳನ್ನು ನೀಡಲಾಗುತ್ತಿದೆರೆಂದು ಸಚಿವರು ತಿಳಿಸಿದರು.