ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಿ: ಡಿಹೆಚ್‌ಒ ಡಾ. ವೈ. ರಮೇಶ್‌ಬಾಬು

| Published : Aug 04 2024, 01:15 AM IST

ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಿ: ಡಿಹೆಚ್‌ಒ ಡಾ. ವೈ. ರಮೇಶ್‌ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಈಡಿಸ್ ಇಜಿಪ್ಟೈ ಸೊಳ್ಳೆ ಉತ್ಪತಿ ತಾಣಗಳ ನಿರ್ಮೂಲನಾ ದಿನದ ಅಂಗವಾಗಿ ಬಳ್ಳಾರಿಯ ಗಾಂಧಿನಗರ, ನಾಗಲಕೇರಿ ಪ್ರದೇಶಗಳ ಮನೆಗಳಿಗೆ ಶುಕ್ರವಾರ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸಲಾಯಿತು.

ಬಳ್ಳಾರಿ: ಡೆಂಘೀ ವೈರಾಣು ಹೊಂದಿದ ಈಡಿಸ್ ಸೊಳ್ಳೆಗಳ ಕಚ್ಚುವಿಕೆಯಿಂದ ರಕ್ಷಣೆ ಪಡೆಯಲು ಮಲಗುವಾಗ ಬೇವಿನ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ ಕೈಕಾಲುಗಳಿಗೆ ಹಚ್ಚಿಕೊಳ್ಳುವ ಮೂಲಕ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶಬಾಬು ಅವರು ವಿನಂತಿಸಿದರು.

ಈಡಿಸ್ ಇಜಿಪ್ಟೈ ಸೊಳ್ಳೆ ಉತ್ಪತಿ ತಾಣಗಳ ನಿರ್ಮೂಲನಾ ದಿನದ ಅಂಗವಾಗಿ ನಗರದ ಗಾಂಧಿನಗರ, ನಾಗಲಕೇರಿ ಪ್ರದೇಶಗಳ ಮನೆಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

ಡೆಂಘೀ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲವಾದರೂ ಲಕ್ಷಣಗಳನ್ನು ಆಧರಿಸಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಸಾರ್ವಜನಿಕರು ಮನೆಯ ಒಳಗೆ ಸೊಳ್ಳೆಗಳ ಉತ್ಪತ್ತಿ ಮಾಡುವ ಫ್ರೀಜ್‌ನ ಹಿಂಭಾಗ, ಅಲಂಕೃತವಾಗಿ ಬಳಸುವ ಮನಿ ಪ್ಲಾಂಟ್ ಕುಂಡಗಳು (ಬಾಟಲ್), ಸ್ನಾನ ಗೃಹದಲ್ಲಿರಬಹುದಾದ ತೊಟ್ಟಿ ಸೇರಿದಂತೆ ಮುಚ್ಚಳ ಮುಚ್ಚಲು ಸಾಧ್ಯವಿಲ್ಲದ ಸಿಮೆಂಟ್ ತೊಟ್ಟಿಗಳನ್ನು ವಾರಕ್ಕೊಮ್ಮೆ ನೀರು ಖಾಲಿ ಮಾಡಿ, ಶುಚಿಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್. ಅಬ್ದುಲ್ಲಾ, ಮಾತನಾಡಿ ವಾರದಲ್ಲಿ ಒಂದು ದಿನ ಶುಕ್ರವಾರ ಡೆಂಘೀ ರೋಗ ಹರಡುವ ಈಡಿಸ್ ಸೊಳ್ಳೆ ನಿರ್ಮೂಲನಾ ದಿನದವಲ್ಲದೆ ಯಾವುದೇ ಜ್ವರ ಪ್ರಕರಣ ವರದಿಯಾದರೂ ವೈದ್ಯಕೀಯ ಸಿಬ್ಬಂದಿ ಮನೆ ಭೇಟಿ ಮಾಡಿ, ಶಂಕಿತವೆಂದು ಪರಿಭಾವಿಸಿ ನೀರು ಸಂಗ್ರಹಕಗಳ ಪರೀಕ್ಷೆ, ಜಿಲ್ಲಾ ಕೀಟ ಶಾಸ್ತ್ರಜ್ಞರ ಮೂಲಕ ಸೊಳ್ಳೆ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದರು.

ವೈದ್ಯಾಧಿಕಾರಿಗಳು ತಮ್ಮ ಗ್ರಾಮ, ವಾರ್ಡ್‌ಗಳಲ್ಲಿ ಸಿಬ್ಬಂದಿಯೊಂದಿಗೆ ಆಗಮಿಸಿದಾಗ ಸಾರ್ವಜನಿಕರು ಸಹಕರಿಸಬೇಕು ಹಾಗೂ ಶಾಲಾ-ಕಾಲೇಜುಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ನೀರು ಸಂಗ್ರಹಕಗಳನ್ನು ಪ್ರತಿ ವಾರ ಪರಿಶೀಲಿಸಿ ಡೆಂಘೀ ರೋಗ ಹರಡುವ ಲಾರ್ವಾ ಉತ್ಪತ್ತಿಯಾಗದಂತೆ ಗಮನಹರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಾ ಕಡಿ, ವೈದ್ಯಾಧಿಕಾರಿ ಡಾ. ಸುಜಿಲ್ಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಈಶ್ವರ ದಾಸಪ್ಪನವರ, ಎಸ್‌ಟಿಎಸ್ ಸೇರಿದಂತೆ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.