ವಿಜಯಪುರ: ಇಂದಿರಾ ಕ್ಯಾಂಟಿನ್ ನಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದರ ಜೊತೆಗೆ, ಗುಣಮಟ್ಟದ ಆಹಾರ ತಯಾರಿಕೆಗೆ ಹೆಚ್ಚು ಆಧ್ಯತೆ ನೀಡುವಂತೆ ತಹಸೀಲ್ದಾರ್ ಎಂ.ಅನಿಲ್ ಸೂಚಿಸಿದರು

ವಿಜಯಪುರ: ಇಂದಿರಾ ಕ್ಯಾಂಟಿನ್ ನಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದರ ಜೊತೆಗೆ, ಗುಣಮಟ್ಟದ ಆಹಾರ ತಯಾರಿಕೆಗೆ ಹೆಚ್ಚು ಆಧ್ಯತೆ ನೀಡುವಂತೆ ತಹಸೀಲ್ದಾರ್ ಎಂ.ಅನಿಲ್ ಸೂಚಿಸಿದರು.

ಪಟ್ಟಣದ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಆಹಾರದ ಗುಣಮಟ್ಟ, ಕುಡಿಯುವ ನೀರಿನ ವ್ಯವಸ್ಥೆ, ಕ್ಯಾಂಟಿನ್ ಒಳಗೆ ಸ್ವಚ್ಛತೆ, ತರಕಾರಿ, ಸಿಸಿ ಟಿವಿಗಳ ಕಾರ್ಯನಿರ್ವಹಣೆ, ಇಂದಿರಾ ಕ್ಯಾಂಟೀನ್ ಸುತ್ತಲೂ ಸ್ವಚ್ಛತೆ ಪರಿಶೀಲಿಸಿದ ಅವರು, ಕ್ಯಾಂಟಿನ್ ನಿರ್ವಹಣೆಯ ಕುರಿತು ತೃಪ್ತಿ ವ್ಯಕ್ತಪಡಿಸಿದರು.

ಪ್ರತಿನಿತ್ಯ ಬೆಳಗಿನ ತಿಂಡಿ ಎಷ್ಟು ಮಂದಿ, ಮಧ್ಯಾಹ್ನ ಎಷ್ಟು ಮಂದಿಗೆ ಆಹಾರ ತಯಾರಿಸಲಾಗುತ್ತಿದೆ, ಮೆನುವಿನಲ್ಲಿ ಏನೇನಿದೆ ಎಂದು ಮಾಹಿತಿ ಪಡೆದುಕೊಂಡರು.

ಇಂದಿರಾ ಕ್ಯಾಂಟೀನ್ ಆವರಣ ಮಣ್ಣಿನಿಂದ ಕೂಡಿದ್ದು, ಮಳೆ ಬಿದ್ದರೆ, ನಾಗರಿಕರು ಒಳಗೆ ಬರುಲಾವಾಗುವುದಿಲ್ಲ. ಆದ್ದರಿಂದ ಆವರಣಕ್ಕೆ ಕಾಂಕ್ರೀಟ್ ಹಾಕಿಸಿಕೊಡಬೇಕು. ವಿಕಲಚೇತನರು, ವೃದ್ಧರು, ಸುಲಭವಾಗಿ ಒಳಗೆ ಬರುವುದಕ್ಕೆ ಅವಕಾಶವಾಗುವಂತೆ ರ್ಯಾಂಪ್ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದರು.

ನಗರಾಭಿವೃದ್ಧಿ ಕೋಶದ ಕಾರ್ಯಫಾಲಕ ಅಭಿಯಂತರ ಸ್ವಾಮಿ ಪ್ರತಿಕ್ರಿಯಿಸಿ, ಆವರಣದಲ್ಲಿ ಸಿಮೆಂಟ್ ಕಾಂಕ್ರೀಟ್ ಅಳವಡಿಸಲು ಒಂದು ಕ್ರಿಯಾಯೋಜನೆ ತಯಾರಿಸಿ ಕಳುಹಿಸಿಕೊಡಿ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಅವರಿಗೆ ಸೂಚಿಸಿದರು.

ಇಂದಿರಾ ಕ್ಯಾಂಟೀನ್ ನಲ್ಲಿ ತಯಾರಿಸುತ್ತಿರುವ ತಿಂಡಿ, ಮಧ್ಯಾಹ್ನದ ಊಟದ ಪ್ರಮಾಣ ಹೆಚ್ಚಿಸಬೇಕು, ಕೂಲಿ ಕಾರ್ಮಿಕರು, ಹಮಾಲಿ ಕಾರ್ಮಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇಲ್ಲಿ ಊಟ ಮಾಡುವವರ ಸಂಖ್ಯೆ ಜಾಸ್ತಿಯಿದೆ. ೯ ಗಂಟೆಗೆ ಬಂದರೆ ತಿಂಡಿ ಮುಗಿದು ಹೋಗಿರುತ್ತದೆ. ಮಧ್ಯಾಹ್ನ ೨ ಗಂಟೆಗೆ ಊಟ ಮುಗಿದು ಹೋಗಿರುತ್ತದೆ. ಆದ್ದರಿಂದ ತಿಂಡಿ ಹಾಗೂ ಊಟ ತಯಾರಿಸುವ ಪ್ರಮಾಣ ಹೆಚ್ಚಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಮುತಾಫೀರ್ ಅಫೀಜ್, ಉಪತಹಶೀಲ್ದಾರ್ ಮೋಹನ್ ಕುಮಾರ್, ರಾಜಸ್ವ ನಿರೀಕ್ಷಕ ಹೊನ್ನೇಶ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಗ್ರಾಮ ಆಡಳಿತಾಧಿಕಾರಿಗಳಾದ ಜೀವನ್ ಕುಮಾರ್, ರವಿಕುಮಾರ್, ಮುನಿರಾಜು, ಇಂಜಿನಿಯರ್ ಶೇಖರ್ ರೆಡ್ಡಿ, ಆರೋಗ್ಯ ನಿರೀಕ್ಷಕಿ ಲಾವಣ್ಯ, ಪೃಥ್ವಿ ಮುಂತಾದವರು ಹಾಜರಿದ್ದರು.