ಮುಂದಿನ ವಾರದಿಂದಲೇ ಮಸಾಜ್‌ ಪಾರ್ಲರ್‌ಗಳ ಪರಿಶೀಲನೆ

| Published : Jan 26 2025, 01:32 AM IST

ಸಾರಾಂಶ

ಮಹಾನಗರ ಪಾಲಿಕೆ ನೀಡಿದ ಲೈಸನ್ಸ್‌ ನಿಯಮ ಮೀರಿದ ಇತರ ಚಟುವಟಿಕೆ ನಡೆಸುತ್ತಿದ್ದರೆ ಅಥವಾ ಲೈಸನ್ಸ್‌ನನ್ನು ಯಾವ ರೀತಿಯಿಂದಲಾದರೂ ಉಲ್ಲಂಘನೆ ಮಾಡಿದರೆ ಮಹಾನಗರ ಪಾಲಿಕೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರತಿ ಸೆಂಟರ್‌ಗೂ ಭೇಟಿ ನೀಡಿ ಪರಿಶೀಲನೆ ನಡೆಸಲು ತಂಡ ರಚಿಸಲಾಗುವುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಸಾಜ್‌ ಪಾರ್ಲರ್‌, ಯೂನಿಸೆಕ್ಸ್‌ ಸೆಲೂನ್‌ ಇತ್ಯಾದಿಗಳು ಲೈಸನ್ಸ್‌ ಮೀರಿ ಕಾರ್ಯಾಚರಿಸುತ್ತಿವೆಯೇ ಎಂಬುದನ್ನು ತಿಳಿಯಲು ಮುಂದಿನ ವಾರದಿಂದಲೇ ಪರಿಶೀಲನೆ ಕಾರ್ಯ ಆರಂಭಿಸಲಾಗುವುದು ಎಂದು ಮೇಯರ್‌ ಮನೋಜ್‌ ಕುಮಾರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸಾಜ್‌ ಪಾರ್ಲರ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆದರೆ ಅದರ ಮೇಲ್ವಿಚಾರಣೆಯನ್ನು ಪೊಲೀಸ್‌ ಇಲಾಖೆ ನೋಡಿಕೊಳ್ಳುತ್ತದೆ. ಆದರೆ ಮಹಾನಗರ ಪಾಲಿಕೆ ನೀಡಿದ ಲೈಸನ್ಸ್‌ ನಿಯಮ ಮೀರಿದ ಇತರ ಚಟುವಟಿಕೆ ನಡೆಸುತ್ತಿದ್ದರೆ ಅಥವಾ ಲೈಸನ್ಸ್‌ನನ್ನು ಯಾವ ರೀತಿಯಿಂದಲಾದರೂ ಉಲ್ಲಂಘನೆ ಮಾಡಿದರೆ ಮಹಾನಗರ ಪಾಲಿಕೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರತಿ ಸೆಂಟರ್‌ಗೂ ಭೇಟಿ ನೀಡಿ ಪರಿಶೀಲನೆ ನಡೆಸಲು ತಂಡ ರಚಿಸಲಾಗುವುದು ಎಂದು ಹೇಳಿದರು.

ಎಂಆರ್‌ಪಿಎಲ್‌ಗೆ ಎಸ್‌ಟಿಪಿ ನಿರ್ವಹಣೆ: ನಗರದಲ್ಲಿರುವ ನಾಲ್ಕು ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳ ನಿರ್ವಹಣೆಯನ್ನು ಈಗ ಗುತ್ತಿಗೆದಾರರಿಗೆ ವಹಿಸಲಾಗಿದೆ. ಈ ಎಲ್ಲ ಎಸ್‌ಟಿಪಿಗಳ ನಿರ್ವಹಣೆಯನ್ನು ಎಂಆರ್‌ಪಿಎಲ್‌ ಕಂಪೆನಿಗೆ ವಹಿಸಿ, ಅದರಿಂದ ಶುದ್ಧೀಕರಣವಾಗುವ ನೀರನ್ನು ಕಂಪೆನಿಗೇ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ಈಗಾಗಲೇ ಈ ಬಗ್ಗೆ ಶಾಸಕರು ಕಂಪೆನಿ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮೇಯರ್‌ ತಿಳಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ನೋಟಿಸ್‌

ನಗರದ ಸ್ಟೇಟ್‌ ಬ್ಯಾಂಕ್‌ ಬಳಿ ಬೀದಿ ಬದಿ ವ್ಯಾಪಾರ ವಲಯದಲ್ಲಿ ಶೇ.10ರಷ್ಟು ವ್ಯಾಪಾರಿಗಳು ಮಾತ್ರ ಸ್ಥಳಾಂತರಗೊಂಡಿದ್ದು, ಉಳಿದವರು ಇನ್ನೂ ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಸ್ಥಳಾಂತರ ಆಗಲು ಒಂದು ವಾರ ಕಾಲಾವಕಾಶ ನೀಡಿ ನೋಟಿಸ್‌ ನೀಡಲಾಗಿದೆ. ಸ್ಥಳಾಂತರ ಆಗದಿದ್ದರೆ ಅವರ ಗುರುತಿನ ಚೀಟಿಯನ್ನು ರದ್ದುಪಡಿಸಲಾಗುವುದು ಎಂದು ಮೇಯರ್ ಮನೋಜ್‌ ಕುಮಾರ್‌ ಎಚ್ಚರಿಕೆ ನೀಡಿದರು. 114 ಮಂದಿಗೆ ಬೀದಿ ಬದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡಲು ಗುರುತಿನ ಚೀಟಿ ನೀಡಲಾಗಿತ್ತು ಎಂದು ಹೇಳಿದರು.