ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ವಿಧಾನ ಪರಿಷತ್ ಸದಸ್ಯರಾದ ಸೂರಜ್ ರೇವಣ್ಣ ಅವರು ತಾಲೂಕಿನ ವಿವಿಧ ಗ್ರಾಮಗಳ ಸಮುದಾಯ ಭವನ ಮತ್ತು ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕುರಿತು ತಮ್ಮ ಅನುದಾನವನ್ನು ಈ ಹಿಂದೆ ನೀಡಲಾಗಿದ್ದು ,ಅವುಗಳ ಪ್ರಗತಿ ಪರಿಶೀಲನೆಯನ್ನು ಮಂಗಳವಾರ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರುನಂತರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಆಲೂರು ತಾಲೂಕಿನ ವಿವಿಧ ಗ್ರಾಮಗಳ ಸಮುದಾಯ ಭವನ ಮತ್ತು ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ 25ರಿಂದ 30 ಲಕ್ಷ ರು.ಗಳ ಅನುದಾನವನ್ನು ನೀಡಲಾಗಿದೆ. ಈಗ ನೀಡಲಾಗಿರುವ ಅನುದಾನದಲ್ಲಿ ಕಾಮಗಾರಿಯು ಯಾವ ಹಂತದಲ್ಲಿದೆ ಹಾಗೂ ಆ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಬೇಕಾಗಿರುವ ಅನುದಾನಗಳ ಕುರಿತಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದ್ದು, ಈಗಾಗಲೇ ಶೇಕಡವಾರು ಕಾಮಗಾರಿಗಳು ಮುಗಿದಿರುವ ಸಂದರ್ಭದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲು ಅಗತ್ಯವಾಗಿ ಬೇಕಾಗಿರುವ ಅನುದಾನವನ್ನು ಈ ವರ್ಷದ ಅನುದಾನದಲ್ಲಿ ಬಿಡುಗಡೆ ಮಾಡಿ ಕಾಮಗಾರಿಗಳು ಪೂರ್ಣಗೊಳ್ಳಲು ಸಹಕರಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.ಆಲೂರು ಪಟ್ಟಣದಲ್ಲಿ ಈಗಾಗಲೇ ನಡೆಯುತ್ತಿರುವ ಮರು ಡಾಂಬರೀಕರಣ ಕಾಮಗಾರಿಗೆ ಈ ಹಿಂದೆ ಎಚ್.ಡಿ ರೇವಣ್ಣ ಅವರು ಪಿಡಬ್ಲ್ಯೂಡಿ ಮಂತ್ರಿಗಳಾಗಿದ್ದಾಗ ಎರಡು ಕೋಟಿ ರು.ಗಳನ್ನ ಆಲೂರು ಪಟ್ಟಣದ ಕೊನೆಪೇಟೆಯ ಸರ್ಕಲ್ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದರು ಹಾಗೂ ಅವರೇ ಭೂಮಿ ಪೂಜೆಯನ್ನು ಕೂಡ ನೆರವೇರಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಸರ್ಕಲ್ ಅಭಿವೃದ್ಧಿ ಸಾಧ್ಯವಾಗದೇ ಇರುವುದರಿಂದ ಆ ಅನುದಾನದಲ್ಲಿ ಪಟ್ಟಣದ ಮುಖ್ಯ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಇದು ರೇವಣ್ಣ ಅವರು ಪಿಡಬ್ಲ್ಯೂಡಿ ಮಿನಿಸ್ಟರ್ ಆಗಿದ್ದಾಗ ಬಿಡುಗಡೆಯಾದ ಅನುದಾನವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಆಲೂರು ತಾಲೂಕಿನ ಮಲೆನಾಡು ಭಾಗದಲ್ಲಿ ಪ್ರಮುಖ ಸಮಸ್ಯೆಯಾಗಿರುವ ಕಾಡಾನೆ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಭಾಗವಾಗಿ ಹಿಂದಿನ ಸಂಸದರಾದ ಪ್ರಜ್ವಲ್ ರೇವಣ್ಣ, ಈ ಕ್ಷೇತ್ರದ ಹಿಂದಿನ ಶಾಸಕರಾದ ಎಚ್.ಕೆ ಕುಮಾರಸ್ವಾಮಿ ಹಾಗೂ ನಾನು ಸೇರಿದಂತೆ ನಿಯೋಗವು ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾಗಿ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಮನವಿಯನ್ನು ಕೂಡ ಸಲ್ಲಿಸಲಾಗಿತ್ತು. ಅದರಂತೆ ಕೇಂದ್ರ ಅರಣ್ಯ ಸಚಿವರು ಪೂರಕವಾಗಿ ಕೂಡ ಸ್ಪಂದಿಸಿದ್ದರು. ನಾನು ಈ ಸಮಸ್ಯೆ ಕುರಿತಾಗಿ ನಮ್ಮ ರಾಜ್ಯದ ಹಾಗೂ ಹೊರ ರಾಜ್ಯದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನ ಸಲಹೆ ಪಡೆದಾಗ ಅವರು ಆನೆ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಆನೆಗಳ ಹಾವಳಿ ಇರುವ ಪ್ರದೇಶಗಳಲ್ಲಿ ಇರುವ ಎಲ್ಲಾ ಆನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಿ ಅವುಗಳಿಗೆ ಆನೆಧಾಮವನ್ನು ನಿರ್ಮಿಸುವುದೇ ಶಾಶ್ವತ ಪರಿಹಾರವೇ ಹೊರತು ಸಾರ್ವಜನಿಕರ ಕಣ್ಣೊರೆಸುವ ದೃಷ್ಟಿಯಿಂದ ಒಂದು ಎರಡು ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಿದರೆ ಆನೆಯ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೋಡು, ಹಿಂದುಳಿದ ವರ್ಗಗಳ ಮುಖಂಡ ಬಿ.ಸಿ ಶಂಕರಾಚಾರ್, ಜೆಡಿಎಸ್ ಮುಖಂಡರಾದ ರಾಜಪ್ಪ ಕದಾಳು, ಬಸವರಾಜು ಗೇಕರವಳ್ಳಿ, ಎಚ್ ಬಿ ಧರ್ಮರಾಜು ಉಪಸ್ಥಿತರಿದ್ದರು.