ಸಾರಾಂಶ
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕೆ.ಕೋಡಿಹಳ್ಳಿ ಸರ್ವಿಸ್ ರಸ್ತೆ, ಮದ್ದೂರು ಮಳವಳ್ಳಿ ರಾಜ್ಯ ಹೆದ್ದಾರಿಯ ಗೊರವನಹಳ್ಳಿ ಗೇಟ್ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ದ್ವಿಚಕ್ರ ವಾಹನಗಳಲ್ಲಿ ತೆರಳುವ ಅಪರಿಚಿತ ವ್ಯಕ್ತಿಗಳನ್ನು ತಡೆದು ಅವರ ಮಾಹಿತಿ, ವಿಳಾಸ ಮತ್ತು ವಾಹನಗಳ ದಾಖಲೆ ತಪಾಸಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಸರಗಳ್ಳತನ ಸೇರಿದಂತೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಪಟ್ಟಣ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ತಪಾಸಣಾ ಕಾರ್ಯ ಕೈಗೊಂಡಿದ್ದಾರೆ.ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕೆ.ಕೋಡಿಹಳ್ಳಿ ಸರ್ವಿಸ್ ರಸ್ತೆ, ಮದ್ದೂರು ಮಳವಳ್ಳಿ ರಾಜ್ಯ ಹೆದ್ದಾರಿಯ ಗೊರವನಹಳ್ಳಿ ಗೇಟ್ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ದ್ವಿಚಕ್ರ ವಾಹನಗಳಲ್ಲಿ ತೆರಳುವ ಅಪರಿಚಿತ ವ್ಯಕ್ತಿಗಳನ್ನು ತಡೆದು ಅವರ ಮಾಹಿತಿ, ವಿಳಾಸ ಮತ್ತು ವಾಹನಗಳ ದಾಖಲೆ ತಪಾಸಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯ ಲೀಲಾವತಿ ಬಡಾವಣೆಯಲ್ಲಿ ಕಳೆದ ಮೇ 17ರಂದು ರಾತ್ರಿ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ವಿಧವೆ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಪಟ್ಟಣದಾದ್ಯಂತ ಗಸ್ತು ಕಾರ್ಯವನ್ನು ಬಿಗಿಗೊಳಿಸಿದ್ದಾರೆ.ಅಲ್ಲದೇ, ಪಟ್ಟಣದಿಂದ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲೂ ಸಹ ಪೊಲೀಸರು ತಪಾಸಣಾ ಕಾರ್ಯ ಕೈಗೊಂಡಿದ್ದು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಅಪರಿಚಿತ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.
ಅನುಮಾನಾಸ್ಪದ ವಾಹನಗಳ ಚಾಲಕರು ಮತ್ತು ಕುಡಿದು ವೇಗವಾಗಿ ವಾಹನ ಚಾಲನೆ ಮಾಡುವ ಚಾಲಕರ ಬಗ್ಗೆಯೂ ಸಹ ಪೊಲೀಸರು ತಪಾಸಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.ಜಿಲ್ಲಾ ಎಸ್ಪಿ ಎನ್.ಯತೀಶ್, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐಗಳಾದ ಕೆ.ಆರ್. ಪ್ರಸಾದ್, ವೆಂಕಟೇಗೌಡ ಮಾರ್ಗದರ್ಶನದಲ್ಲಿ ಕಾನೂನು ಶಿಸ್ತು ವಿಭಾಗದ ಪಿಎಸ್ಐ ಮಂಜುನಾಥ, ಅಪರಾಧ ವಿಭಾಗದ ಪಿಎಸ್ಐ ಜಮೀರ್ ನೇತೃತ್ವದಲ್ಲಿ ಪೊಲೀಸರ ತಂಡ ಸರಗಳ್ಳರ ಪತ್ತೆಗೆ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಈ ಹಿಂದೆ ಮದ್ದೂರು ಠಾಣೆ, ಬೆಸಗರಹಳ್ಳಿ. ಕೊಪ್ಪ, ಕೆ.ಎಂ.ದೊಡ್ಡಿ ಠಾಣಾ ವ್ಯಾಪ್ತಿಗಳಲ್ಲಿ ನಡೆದಿರುವ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಕ್ಕಿಬಿದ್ದು ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿರುವ ಆರೋಪಿಗಳ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಿರುವ ಅಪರಾಧ ಪತ್ತೆ ದಳದ ತಂಡ ನೆರೆ ಜಿಲ್ಲೆಗಳಲ್ಲಿ ನಡೆದಿರುವ ಸರಗಳತನ ಮತ್ತಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಗ್ಗೆಯೂ ಸಹ ಮಾಹಿತಿಗಳನ್ನು ಕಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.