ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ನಾಡಿನಲ್ಲಿ ಎಲ್ಲರು ಸಮಾನರು ಎಂಬುವುದನ್ನು ಬಸವಾದಿ ಶರಣರು ಸಾಧಿಸಿ ತೋರಿಸಿದ್ದಾರೆ. ಬಸವ ಧರ್ಮ ಪರಂಪರೆ ಉಳಿಸಿ ಬೆಳೆಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಶ್ರೀಮಠದ ಸನ್ಮಾನ ಸ್ವೀಕರಿಸಿ ಮಾತನಾಡಿ, ಜೀವನದಲ್ಲಿ ಯಾರನ್ನು ಕೀಳಾಗಿ ಕಾಣಬಾರದು. ದೇವರ ದಾಸಿಮಯ್ಯನವರ ಕಾಯಕ ನಿಷ್ಠೆ ನಮಗೆ ಉತ್ತಮ ಕೆಲಸ ಮಾಡಲು ಸಹಕಾರಿ. ಇದು ನನ್ನ ಜೀವನದಲ್ಲಿ ನೆಮ್ಮದಿ ತಂದಿದೆ. ಬಸವಾದಿ ಶರಣರ ತತ್ವ ಚಿಂತನೆಗಳು ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಿವೆ ಎಂದರು. ಇತ್ತೀಚೆಗೆ ಧರ್ಮಗಳ ಬಗ್ಗೆ ಸಾಕಷ್ಟು ವ್ಯಾಖ್ಯಾನಗಳು ಕೇಳಿಬರುತ್ತಿವೆ. ಆದರೆ ಬಸವಣ್ಣನವರು ಬಹಳ ಸರಳವಾಗಿ ಹೇಳಿದ್ದಾರೆ. ದಯವೇ ಧರ್ಮದ ಮೂಲವಯ್ಯ ಎಂದು ತಿಳಿಸಿದ್ದಾರೆ. ಜೀವನದಲ್ಲಿ ನಾವು ಹೆಸರು ಮಾಡಿದರೆ ಖುಷಿ ತರುವುದಿಲ್ಲ. ಒಳ್ಳೆಯ ಚಿಂತನೆ ಬೆಳೆಸಿಕೊಂಡಾಗ ಇನ್ನೊಬ್ಬರಿಗೆ ಸಹಾಯ ಮಾಡಿದಾಗ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.
ಹುಟ್ಟಿನಿಂದ ಯಾರು ಶ್ರೇಷ್ಠರಾಗಲ್ಲ. ಬದುಕಿನಲ್ಲಿ ಶ್ರೇಷ್ಠರಾಗುತ್ತಾರೆ. ಬಸವಣ್ಣನವರು ದೇವರು ಮತ್ತು ಮನುಷ್ಯರ ನಡುವೆ ಯಾವುದೇ ಏಜೆಂಟರನ್ನು ಇಟ್ಟಿಲ್ಲ. ಕೈಯಲ್ಲಿ ಲಿಂಗವನ್ನಿಟ್ಟು ಅದರಲ್ಲಿ ದೇವರೇ ನಿನ್ನ ಬಳಿಯಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಬಸವಾದಿ ಶರಣರ ವಚನಗಳಲ್ಲಿ ನಮ್ಮ ಬದುಕಿನ ಹಲವಾರು ಜಟಿಲ ಸಮಸ್ಯೆಗಳಿಗೆ ಉತ್ತರವಿದೆ. ನಾನು ಮುಖ್ಯಮಂತ್ರಿಯಾದಾಗ ಪೌರ ಕಾರ್ಮಿಕರ ಕಾಯಂ ನೇಮಕಾತಿ, ಡಯಾಲಿಸಿಸ್ ಚಿಕಿತ್ಸೆಗೆ ಹೆಚ್ಚಿನ ಅನುದಾನ ನೆರವು ನೀಡಿದ್ದು ಖುಷಿ ತಂದಿದೆ. ಇದು ನಾನು ಮಾಡಿಲ್ಲ. ನೀವು ಕೊಟ್ಟಿರುವ ಶಕ್ತಿ, ಸ್ಥಾನದ ಬಲದಿಂದ ಕೆಲಸ ಮಾಡಿದ್ದೇನೆ. ಇದರ ಶ್ರೇಯಸ್ಸು ನಿಮಗೆ ಸಲ್ಲಬೇಕು ಎಂದು ಬೊಮ್ಮಾಯಿ ಹೇಳಿದರು.ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಬಸವರಾಜ ಬೊಮ್ಮಾಯಿಯವರು ಎಲ್ಲಾ ಸಮುದಾಯದ ಜನಾಂಗದ ಏಳಿಗೆಗೆ ಶ್ರಮಿಸಿದ್ದಾರೆ. ಬಸವ ತತ್ವ ಪಾಲನೆ ಮಾಡುತ್ತಾರೆ. ಶ್ರೀಮಠ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದರು. ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮೀಜಿ, ನೂತನ ಜಗದ್ಗುರು ಶ್ರೀ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಸಂಗನಬಸಪ್ಪ ಚಿಂದಿ, ಅಶೋಕ ಹೆಗಡೆ, ಮುರಗೇಶ ರಾಜನಾಳ, ನಗರ ಘಟಕದ ಅಧ್ಯಕ್ಷ ಪ್ರಶಾಂತ ಜವಳಿ, ಬಾಲು ನಿರಂಜನ, ನಾಗೇಶಪ್ಪ ಪಾಗಿ, ಶಿವಾನಂದ ಎಣ್ಣಿ, ಗೌರಮ್ಮ ಕಲಬುರ್ಗಿ, ಭಾಗ್ಯಾ ಉದ್ನೂರ, ಬಸವರಾಜ ತಾಂಡೂರ, ಸಿ.ಎಂ.ಚಿಂದಿ, ಸಂಗಪ್ಪ ಜವಳಿ, ಆನಂದ ತಿಪ್ಪಾ, ಸೋಮಶೇಖರ್ ಕಲಬುರ್ಗಿ, ಮೃತ್ಯುಂಜಯ ಕರನಂದಿ, ವಿರೂಪಾಕ್ಷಪ್ಪಾ ಅರುಟಗಿ, ಶ್ರೀಕಾಂತ ಭಾವಿ, ಭುವನೇಶ ಪೂಜಾರ, ರಾಜು ಚಿತ್ತರಗಿ, ಶಿವು ಬಾದೋಡಗಿ, ರವಿ ಅಂಗಡಿ ಇತರರು ಇದ್ದರು.------------
ಕ್ಲೀನ್ ಚೀಟ್ ನಿರೀಕ್ಷಿತ: ಬೊಮ್ಮಾಯಿಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕ್ಲೀನ್ ಚೀಟ್ ನೀಡಿದ ಸುದ್ದಿ ನಿರೀಕ್ಷಿತವಾದುದು. ಏಕೆಂದರೆ ಲೋಕಾಯುಕ್ತ ತನಿಖೆ ನಡೆದಿರುವ ರೀತಿ ನೋಡಿದರೆ ಎಲ್ಲಿಯು ಒಬ್ಬರನ್ನು ಬಂಧಿಸಿಲ್ಲ. ವಿಚಾರಣೆ ನಡೆಸಲಿಲ್ಲ. ಹಗರಣ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದರೂ ಮುಖ್ಯಮಂತ್ರಿಗಳನ್ನು ಉಳಿಸಲು ಲೋಕಾಯುಕ್ತ ತನಿಖೆ ಮಾಡಿದಂತಿದೆ. ಹೊರತಾಗಿ ಯಾರು ಇದಕ್ಕೆ ಕಾರಣಿಭೂತರು, ಯಾರು ಲೂಟಿ ಮಾಡಿದ್ದಾರೆ ಎಂಬುವವರನ್ನು ಪತ್ತೆ ಹಚ್ಚುವ ಕೆಲಸವನ್ನು ಲೋಕಾಯುಕ್ತ ಮಾಡಿಲ್ಲ. ಲೋಕಾಯುಕ್ತದಿಂದ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಅಧೀಕೃತವಾಗಿ ಬರಲಿ ಮುಂದೆ ನೋಡೋಣ ಎಂದು ಮಾಜಿಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.