ಸಾರಾಂಶ
ಶಾಲೆಯ 4 ವಿದ್ಯಾರ್ಥಿಗಳು ಇನ್‌ಸ್ಪಾಯರ್ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಇದೀಗ ಅವರಲ್ಲಿ ಇಬ್ಬರು ಮಕ್ಕಳು ರಾಜ್ಯದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ ಇಲ್ಲಿನ ಕುಕ್ಕುಜೆ ಎಂಬ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ನಡೆಸುವ ಇನ್‌ಸ್ಪಾಯರ್ ಅವಾರ್ಡ್ ಮಾನಕ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ಶಾಲೆಯ 4 ವಿದ್ಯಾರ್ಥಿಗಳು ಇನ್‌ಸ್ಪಾಯರ್ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಇದೀಗ ಅವರಲ್ಲಿ ಇಬ್ಬರು ಮಕ್ಕಳು ರಾಜ್ಯದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿನಿ ಅಮೂಲ್ಯ ಹೆಗ್ಡೆ ರಚಿಸಿದ ‘ಫ್ಲಡ್ ಡಿಟೆಕ್ಟರ್’ ಹಾಗೂ ಹಾಗೂ ನಿಖಿತಾ ರಚಿಸಿ‘ರೋಪೋ ಮೀಟರ್’ ಎಂಬ ಎರಡು ವಿದ್ಯಾರ್ಥಿ ಸಂಶೋಧನೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ.
ಇನ್‌ಸ್ಪಾಯರ್ ಅವಾರ್ಡ್ ಮಾನಕ್ ಸ್ಪರ್ಧೆಯು ಅತ್ಯಂತ ಕ್ಲಿಷ್ಟಕರವಾದ ಹಂತಗಳನ್ನು ಹೊಂದಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದೇ ಒಂದು ದೊಡ್ಡ ಸವಾಲಾಗಿರುತ್ತದೆ. ಸರ್ಕಾರಿ ಲೆಯ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಒಂದು ದಾಖಲೆಯಾಗಿದೆ. ಇದೀಗ ಈ ಒಂದೇ ಶಾಲೆಯ ಇಬ್ಬರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದೂ ವಿಶೇಷವಾಗಿದೆ.ಇನ್ನೊಂದು ವಿಶೇಷ ಎಂದರೆ ಈ ವೈಜ್ಞಾನಿಕ ಸ್ಪರ್ಧೆಗೆ ಈ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದ್ದು ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸುರೇಶ್ ಮರಕಾಲ. ಇವರು ಸಮಾಜ ಪಾಠ ಮಾಡುವ ಶಿಕ್ಷಕರು.
ಅಮೂಲ್ಯ ಹೆಗ್ಡೆ ರಚಿಸಿದ ‘ಫ್ಲಡ್ ಡಿಟೆಕ್ಟರ್’ ಎಂಬ ಜೀವರಕ್ಷಕ ಯಂತ್ರವು ಪ್ರವಾಹ, ಅತಿವೃಷ್ಟಿಯಂತರ ನೈಸರ್ಗಿಕ ವಿಕೋಪದ ಕಾಲದಲ್ಲಿ ಜನರ ಪ್ರಾಣವನ್ನು ಉಳಿಸಬಲ್ಲದು. ದುಬಾರಿಯಲ್ಲದ ಇದನ್ನು ಎಲ್ಲಿ ಯಾರು ಬೇಕಾದರೂ ಅಳವಡಿಸುವಷ್ಟು ಸರಳ ತಂತ್ರಜ್ಞಾನವನ್ನು ಹೊಂದಿದೆ.ನಿಖಿತಾ ರಚಿಸಿದ ‘ರೋಪೋ ಮೀಟರ್’ ಎಂಬ ಯಂತ್ರವು ವೈರ್, ಕೇಬಲ್, ಹಗ್ಗ ಮೊದಲಾದ ಉದ್ದನೆಯ ವಸ್ತುಗಳನ್ನು ಚಿಟಿಕೆ ಹೊಡೆಯುವದೊಳಗೆ ಕರಾರುವಕ್ಕಾಗಿ ಅಳೆದುಕೊಡುತ್ತದೆ.
ರಾಷ್ಟ್ರಮಟ್ಟದ ಸ್ಪರ್ಧೆಗೆ ದೇಶಾದ್ಯಂತ ಒಟ್ಟು ೬೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅವರಲ್ಲಿ ಆಯ್ದ ವಿದ್ಯಾರ್ಥಿಗಳು ಜಪಾನ್‌ನಲ್ಲಿ ನಡೆಯುವ ‘ಸುಕುರಾ’ ಎಂಬ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಸುವರ್ಣಾವಕಾಶವನ್ನು ಪಡೆಯುತ್ತಾರೆ.