ಸಾರಾಂಶ
ಕನ್ನಡಪ್ರಭ ವಾರ್ತೆ ಸೂಲಿಬೆಲೆಗ್ರಾಮೀಣ ಭಾಗದ ರೈತಾಪಿ ವರ್ಗ ಹಾಗೂ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಸಹಕಾರ ಸಂಘಗಳು ಸಾಕಷ್ಟು ಪ್ರೇರಣೆ ನೀಡುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ಪಟ್ಟಣದ ಹೊರವಲಯದ ಸಂಘದ ಸಮುದಾಯ ಭವನದ ಆವರಣದಲ್ಲಿ ನಡೆದ ಎಸ್‌ಸಿಎಫ್‌ಸಿಎಸ್ 50ನೇ ವರ್ಷದ ವಾರ್ಷಿಕ ಸರ್ವದಸ್ಯರ ಸಭೆಯಲ್ಲಿ ಮಾತನಾಡಿದರು.ಸೂಲಿಬೆಲೆಯಲ್ಲಿ 1976ರಲ್ಲಿ ಬಿ.ಎನ್.ಬಚ್ಚೇಗೌಡ, ಬಿ.ಎನ್. ಗೋಪಾಲಗೌಡರ ದೂರದೃಷ್ಠಿಯ ಫಲವಾಗಿ ಪ್ರಾರಂಭಗೊಂಡ ಸಹಕಾರ ಸಂಘ, ಸಹಸ್ರಾರು ಬಡ ಮಧ್ಯಮ ವರ್ಗದವರ ಆರ್ಥಿಕ ಸ್ವಾವಲಂಬನೆಗೆ, ಕೃಷಿಯಲ್ಲಿ ಪ್ರಗತಿ ಕಾಣಲು ಸಾಧ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ 62 ಲಕ್ಷ ಲಾಭವನ್ನು ಸಂಘ ಗಳಿಸಿದ್ದು, ಸಾಲ ಪಡೆದ ಸದಸ್ಯರ ಆರ್ಥಿಕ ಶಿಸ್ತಿನಿಂದ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಹಣವನ್ನು ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಬಿಡಿಸಿಸಿ ಬ್ಯಾಂಕ್‌ಗೆ ಒತ್ತಾಯಿಸಲಿದ್ದು ಸದಸ್ಯರು ಸದುಪಯೋಗಪಡಿಸಿಕೊಂಡು ಸಂಘದ ಅಭಿವೃದ್ದಿಗೂ ಕೈ ಜೋಡಿಸಬೇಕು ಎಂದರು.ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ರಾಜಕಾರಣದಲ್ಲಿ ಶಾಸಕನಾಗಿ, ಸಚಿವನಾಗಿ, ಸಂಸದನಾಗಿ 50 ವರ್ಷಗಳ ಸುದೀರ್ಘ ರಾಜಕಾರಣ ತಾಲೂಕಿನ ಮತದಾರರ ಆಶೀರ್ವಾದದಿಂದ ಮಾಡಿದ್ದೇನೆ. ಪ್ರಸ್ತುತ 208 ಸಹಕಾರ ಸಂಘಗಳು ಜಿಲ್ಲೆಯಲ್ಲಿ ರೈತರ ಪರ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿಯೇ ಬಿಡಿಸಿಸಿ ಬ್ಯಾಂಕ್ ಆರ್ಥಿಕ ವಹಿವಾಟಿನಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಎಂದರು.ಬಿ.ಎನ್. ಗೋಪಾಲಗೌಡ ಮಾತನಾಡಿ, ಪ್ರತಿಯೊಬ್ಬ ಸದಸ್ಯರಿಗೂ ಸಂಘ ನಮ್ಮದು ಎಂಬ ಮನೋಭಾವನೆ ಬರಬೇಕು. ಸಹಕಾರ ಸಂಘ ಬಡವರಿಗೆ ರೈತರಿಗೆ, ಕೃಷಿ ಹೈನುಗಾರಿಕೆ ಸಾಲ ಸೌಲಭ್ಯ ನೀಡುತ್ತಾ ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ವೇರ್ ಹೌಸ್ ನಿರ್ಮಿಸಿ ಬಾಡಿಗೆಗೆ ನೀಡುವ ಚಿಂತನೆ ನಡೆದಿದ್ದು ಈ ಯೋಜನೆ ಸಾಕಾರಗೊಂಡರೆ ಸಂಘಕ್ಕೆ ಮತ್ತಷ್ಟು ಆರ್ಥಿಕ ವರಮಾನ ನಿರಂತರವಾಗಿ ಬರಲಿದೆ ಎಂದರು.ಬಿಡಿಸಿಸಿ ಬ್ಯಾಂಕ್ ಅದ್ಯಕ್ಷ ವಿಜಯದೇವ್ ಮಾತನಾಡಿದರು. ಸಂಘದ ಅಧ್ಯಕ್ಷ ಬಿವಿ ಸತೀಶ್‌ಗೌಡ, ಉಪಾಧ್ಯಕ್ಷ ಮುನಿಯಪ್ಪ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ವ್ಯವಸ್ಥಾಪಕ ಪಿಳ್ಳೆಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಮುತ್ಸದ್ರ ಬಾಬುರೆಡ್ಡಿ, ಹಾಫ್ ಕಾಮ್ಸ್ ಮಾಜಿ ನಿರ್ದೇಶಕ ವೆಂಕಟೇಶಪ್ಪ, ಯುವಮುಖಂಡ ಬಿಜಿ ನಾರಾಯಣಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ, ನಿರ್ದೇಶಕ ತಮ್ಮೆಗೌಡ, ಸಿಇಓ ಶ್ರೀನಿವಾಸಮೂರ್ತಿ, ನಿವೃತ್ತ ಸಿಇಓ ಗಿರೀಶ್ ಹಾಜರಿದ್ದರು.
ಫೋಟೋ: 19 ಎಸ್‌ಎಲ್‌ಬಿ 1 ಮತ್ತು 21: ಹೊಸಕೋಟೆ ತಾಲೂಕಿನ ಸೂಲಿಬೆಲೆ ವಿವಿದ್ದೋದ್ಧೆಶ ಪ್ರಾಥಮಿಕ ಕೃಷಿ ಸಹಕಾರ ಸಂಘದ 50ನೇ ವರ್ಷದ ಸರ್ವಸದಸ್ಯರ ಸಭೆಯನ್ನು ಶಾಸಕ ಶರತ್ ಬಚ್ಚೇಗೌಡ, ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಸಂಘದ ಅಧ್ಯಕ್ಷ ಬಿವಿ.ಸತೀಶ್‌ಗೌಡ ಉದ್ಘಾಟಿಸಿದರು.2: ಹೊಸಕೋಟೆ ತಾಲೂಕಿನ ಸೂಲಿಬೆಲೆ ವಿವಿದ್ದೋದ್ಧೆಶ ಪ್ರಾಥಮಿಕ ಕೃಷಿ ಸಹಕಾರ ಸಂಘದ 50ನೇ ವರ್ಷದ ಸರ್ವಸದಸ್ಯರ ಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಶಾಸಕ ಶರತ್ ಬಚ್ಚೇಗೌಡ, ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಸಂಘದ ಅಧ್ಯಕ್ಷ ಬಿವಿ.ಸತೀಶ್‌ಗೌಡ ಪ್ರಧಾನ ಮಾಡಿದರು.