ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿಜಿಲ್ಲೆಯಲ್ಲಿ ರಸ್ತೆ ಅಪಘಾತ, ಹೆರಿಗೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಜಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆ ಬಗ್ಗೆ ಇಲ್ಲದ ಮಾಹಿತಿ ನೀಡಿ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವ 108 ಆ್ಯಂಬುಲೆನ್ಸ್ ವಾಹನ ಚಾಲಕರ ದಂಧೆಗೆ ಕಡಿವಾಣ ಹಾಕಬೇಕು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಖಡಕ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆ ಚರ್ಚೆ ವೇಳೆಯಲ್ಲಿ ಮಾತನಾಡಿದ ಅವರು, ರಸ್ತೆ ಅಪಘಾತ ಪ್ರಕರಣದಲ್ಲಿ ತುರ್ತು ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ 108 ಆ್ಯಂಬುಲೆನ್ಸ್ ವಾಹನ ಚಾಲಕರು ಜಿಮ್ಸ್ ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯರಿರಿಲ್ಲ. ಸರಿಯಾಗಿ ಚಿಕಿತ್ಸೆ ಸಿಗಲ್ಲ ಎಂಬಿತ್ಯಾದಿ ಸುಳ್ಳು ಹೇಳಿ ಪ್ರತಿಷ್ಠಿತ ಖಾಸಗಿ ಅಸ್ಪತ್ರೆಗೆ ಸೇರಿಸಿ ರೋಗಿಯ ಒಟ್ಟಾರೆ ಬಿಲ್ಲಿನಿಂದ 15-20 ಪರ್ಸೆಂಟ್ ಅಕ್ರಮವಾಗಿ ಹಣ ಆಸ್ಪತ್ರೆಯಿಂದ ಪಡೆಯುವ ದೊಡ್ಡ ದಂಧೆ ನಡೆಯುತ್ತಿದೆ. ಇದಕ್ಕೆಲ್ಲ ಕೂಡಲೆ ಕಡಿವಾಣ ಹಾಕಿ. ಕೂಡಲೆ ಆ್ಯಂಬುಲೆನ್ಸ್ ವಾಹನಗಳನ್ನು ಜಿ.ಪಿ.ಎಸ್. ತಪಾಸಣೆಗೆ ಒಳಪಡಿಸಿ ಎಂದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಸೇವೆ ಉತ್ತಮಗೊಳಿಸುವ ನಿಟ್ಟಿನಲ್ಲಿಯೆ ಸರ್ಕಾರದ ಮಟ್ಟದಲ್ಲಿ ಹೋರಾಡಿ ಇಲ್ಲಿ ತಾಯಿ-ಮಕ್ಕಳ ಆಸ್ಪತ್ರೆ, ಟ್ರಾಮಾ ಸೆಂಟರ್, ಜಯದೇವ ಹೃದ್ರೋಗ ಸಂಸ್ಥೆ ತರಲಾಗಿದೆ. ಬಡವರಿಗಾಗಿಯೆ ಈ ಆಸ್ಪತ್ರೆ ಇರುವಾಗ ಖಾಸಗಿ ಆಸ್ಪತ್ರೆಗೆ ಹೋಗಿ ಅಲ್ಲಿ 4-5 ಲಕ್ಷ ಹಣ ಸುರಿಯುವುದು ಎಷ್ಟು ಸರಿ. ಆರೋಗ್ಯ ಇಲಾಖೆ ಏನು ಮಾಡುತ್ತಿದೆ. ಖಾಸಗಿ ಅಸ್ಪತ್ರೆಯವರು ರೋಗಿಗೆ ನೀಡಿದ ಚಿಕಿತ್ಸೆ ಮತ್ತು ಅದಕ್ಕೆ ವಿಧಿಸಿದ ಬಿಲ್ಲು ಎಂದಾದರೂ ತಪಾಸಣೆ ಮಾಡಲಾಗಿದಿಯೇ ಎಂದು ಡಿ.ಎಚ್.ಓ ಅವರನ್ನು ಪ್ರಶ್ನಿಸಿದ ಅವರು ಆಸ್ಪತ್ರೆಗೆ ಹೋಗಿ ಬಿಲ್ಲು ಪರಿಶೀಲಿಸಿ. ಚಿಕಿತ್ಸೆಗೆ ಅವಶ್ಯಕತೆ ಇಲ್ಲದ ಡ್ರಗ್ಸ್ ಸೇರಿಸಿ ಹೆಚ್ಚಿನ ಬಿಲ್ಲು ಸೇರಿಸುತ್ತಿದ್ದಾರೆ. ಬಿಲ್ ಹೆಚ್ಚಾದ ಕೂಡಲೆ ಜನ ನಮ್ಮಲ್ಲಿ ಬರುತ್ತಾರೆ ಎಂದರು.
ಜಿಲ್ಲೆಯ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವಿವಿಧ ಕಾರಣದಿಂದ ತೆರವಾಗಿರುವ ವೈದ್ಯರ ಹುದ್ದೆಯನ್ನು ತಕ್ಷಣವೇ ವಾಕ್ ಇನ್ ಇಂಟರ್ ವ್ಯೂ ಮೂಲಕ ಭರ್ತಿ ಮಾಡಬೇಕು. ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲಿಯೂ ಖಾಲಿ ಹುದ್ದೆ ಇರದಂತೆ ನೋಡಿಕೊಳ್ಳಬೇಕು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಜಿಲ್ಲಾ ಪಂಚಾಯ್ತಿ ಸಿ.ಇ.ಓ ಅವರಿಗೆ ಸೂಚಿಸಿದರು. ಎನ್.ಎಚ್.ಎಂ. ಯೋಜನೆಯಡಿ ಖಾಲಿ ವೈದ್ಯರ ಹುದ್ದೆ ಭರ್ತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ಭಂವರ್ ಸಿಂಗ್ ಮಾಹಿತಿ ನೀಡಿದರು.ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ಕ್ಷೇತ್ರದ ಶಹಾಬಾದ, ಕಮಲಾಪೂರದಲ್ಲಿ ವೈದ್ಯರ ಕೊರತೆ ಕಾರಣ ಪ್ರತಿ ರೋಗಿಗೆ ಜಿಮ್ಸ್ ಗೆ ಶಿಫಾರಸ್ಸು ಮಾಡಲಾಗುತ್ತಿದೆ. ಮಾರ್ಗ ಮದ್ಯದಲ್ಲಿಯೆ ಅಸುನೀಗಿದ ಪ್ರಕರಣ ವರದಿಯಾಗಿದ್ದು, ವೈದ್ಯರ ಸಮಸ್ಯೆ ಬಗೆಹರಿಸಬೇಕು ಎಂದರು. ಇದಕ್ಕೆ ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ಅಫಜಲ್ಪರ ಶಾಸಕ ಎಂ.ವೈ. ಪಾಟೀಲ ಧ್ವನಿಗೂಡಿಸಿದರು. ತಮ್ಮ ಕ್ಷೇತ್ರದಲ್ಲಿ ಸಾವಳಗಿ ಆಸ್ಪತ್ರೆ ವ್ಯಾಪ್ತಿಗೆ ಒಂದು ಲಕ್ಷ ಜನಸಂಖ್ಯೆ ಇದ್ದು, ಕೇವಲ ಒಬ್ಬ ಡಾಕ್ಟರ್ ಇದ್ದಾರೆ ಎಂದು ಶಾಸಕ ಅಲ್ಲಮಪ್ರಭು ಅಸಹಾಯಕತೆ ವ್ಯಕ್ತಪಡಿಸಿದರು.
ಡಿ.ಎಚ್.ಓ ರಾಜಶೇಖರ ಮಾಲಿ ಮಾತನಾಡಿ, ಜಿಲ್ಲೆಯ 83 ಪಿ.ಎಚ್.ಸಿ. ಯಲ್ಲಿ ಓರ್ವ ವೈದ್ಯರಿದ್ದು, ಕೆಲವು ಸಂದರ್ಭದಲ್ಲಿ ಅವರು ಬೇರೆ ಕೆಲಸಕ್ಕೆ ನಿಯೋಜನೆ ಮಾಡಿದಾಗ ವೈದ್ಯರ ಸಮಸ್ಯೆ ಕಾಣುತ್ತಿದೆ. ಕೆ.ಕೆ.ಆರ್.ಡಿ.ಬಿ.ಯಿಂದ ಹೆಚ್ಚುವರಿಯಾಗಿ ವೈದ್ಯರ ಭರ್ತಿ ಮಾಡಿದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು. ಇದೇ ಸಂದರ್ಭದಲ್ಲಿ ನಕಲಿ ವೈದ್ಯರ ಕಡಿವಾಣ ಹಾಕಬೇಕೆಂದು ಶಾಸಕ ತಿಪ್ಪಣಪ್ಪ ಕಮಕನೂರ ಆಗ್ರಹಿಸಿದರು. ತಾವು ವಾಸಿಸುವ ಕಲಬುರಗಿ ನಗರದ ಪ್ರದೇಶದಲ್ಲಿಯೆ 15-20 ಜನ ನಕಲಿ ವೈದ್ಯರಿದ್ದಾರೆ ಎಂದರು. ಇದಕ್ಕೆ ಶಾಸಕರೆಲ್ಲರು ಒಕ್ಕೂರಿಲಿನಿಂದ ಧ್ವನಿಗೂಡಿಸಿದರು.ಫಲಿತಾಂಶ ಸುಧಾರಣೆಗೆ ಶಿಕ್ಷಕರ ಕೊರತೆ:
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ಮಾಡಬೇಕೆಂದರೆ ಶಿಕ್ಷಕರ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಖಾಲಿ ಇರುವ 14 ಸಾವಿರ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಡಿ.ಡಿ.ಪಿ.ಐ ಅವರಿಗೆ ಸೂಚಿಸಿದರು.ಭ್ರೂಣ ಹತ್ಯೆ, ಲಿಂಗ ಪತ್ತೆಗೆ ಕಡಿವಾಣ ಹಾಕಿ:
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜಿಲ್ಲೆಯಲ್ಲಿ ನಿನ್ನೆ ನಡೆದ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯವನ್ನು ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಜೊತೆಗೆ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಹಠಾತ್ ದಾಳಿ ನಡೆಸಿ. ಭ್ರೂಣ ಹತ್ಯೆ, ಲಿಂಗ ಪತ್ತೆ ಮಾಡದಂತೆ ಕಡಿವಾಣ ಹಾಕಬೇಕು. ಅಪ್ರಾಪ್ತರು ಗರ್ಭಿಣಿಯರು ಆಗುತ್ತಿರುವ ಘಟನೆ ನಡೆಯುತ್ತಿವೆ. ಈ ಎಲ್ಲ ಘಟನೆಗಳನ್ನು ತಡೆಯಲು ಪ್ರತ್ತೇಕ ತಂಡವೊಂದನ್ನು ರಚಿಸಬೇಕು ಹಾಗೂ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಉಲ್ಲೇಖಿಸಿದ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಅಜಯ್ ಸಿಂಗ್ ಕಲ್ಯಾಣ ಕರ್ನಾಟಕ ಪ್ರದೇಶದಿಂದ ವಿವಿಧ ಜಿಲ್ಲೆಯಿಂದ 47 ಪಿ.ಎಚ್.ಸಿ ಪ್ರಸ್ತಾವನೆ ಬಂದಿವೆ. ಅವುಗಳಲ್ಲಿ ಕಲಬುರಗಿ ಜಿಲ್ಲೆಯಿಂದ ಒಂದು ಪ್ರಸ್ತಾವನೆ ಇಲ್ಲ ಎಂದರೆ ಹೇಗೆ? ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದ ಅವರು, ಎಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಹಿಂದಿದೆ. ಕಳೆದ ಬಾರಿ 28ನೇ ಸ್ಥಾನದಲ್ಲಿದೆ. ಈ ಸಲ 10ನೇ ಸ್ಥಾನಕ್ಕೆ ತರುವ ಬಗ್ಗೆ ಗುರಿ ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ಮಂಡಳಿಯಿಂದ ಅಕ್ಷರ ಆವಿಷ್ಕಾರ ಮೂಲಕ ಅತಿಥಿ ಶಿಕ್ಷಕರ ಭರ್ತಿ ಮಾಡಿದೆ. ಕೊನೆ ಪಕ್ಷ 12-13ನೇ ಸ್ಥಾನಕ್ಕಾದರೂ ತರಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮುಂದಾಗಬೇಕು ಎಂದರು.
ಬಯೋ ಮೆಡಿಕಲ್ ವೇಸ್ಟ್ ನಿರ್ವಹಣೆ, ತನಿಖೆ ಮಾಡಿ:ಜಿಲ್ಲೆಯ ಆರೋಗ್ಯ ಸಂಸ್ಥೆಯಲ್ಲಿ ಉತ್ಪನ್ನೆಯಾಗುವ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಶರಣ ಸಿರಸಗಿಯಲ್ಲಿ ಘಟಕ ಸ್ಥಾಪಿಸಿದ್ದು, ಇದರ ನಿರ್ವಹಣೆಗೆ ಬೃಂದಾವನ ಸಂಸ್ಥೆಯನ್ನು ನಿಯಮ ಮೀರಿ 5 ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸದರಿ ಸಂಸ್ಥೆಯ ಅಣತಿಯಂತೆ ಅರೋಗ್ಯ ಇಲಾಖೆ, ಪರಿಸರ ಮಂಡಳಿ ಅಧಿಕಾರಿಗಳು ಆರೋಗ್ಯ ಸಂಸ್ಥೆಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಹಿಂದೆ ಪ್ರಾದೇಶಿಕ ಆಯುಕ್ತರು ಬೃಂದಾವನ ಸಂಸ್ಥೆಗೆ ನೀಡಿದ ಒಪ್ಪಂದ ರದ್ದುಪಡಿಸುವಂತೆ ತಿಳಿಸಿದ್ದರೂ ಮುಂದುವರೆಸಿದ್ದು ಏಕೆ ಎಂದು ಪರಿಸರ ಮಂಡಳಿ ಅಧಿಕಾರಿ ಮಂಜಪ್ಪ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಈ ಸಂಬಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ ಪಾಟೀಲ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ನೀಡುವಂತೆ ಸೂಚಿಸಿದರು.
ಬಿಸಿಯೂಟಕ್ಕೆ 2 ಕಿ.ಮೀ ನಡಿಬೇಕಾ!?:ಚಿತ್ತಾಪುರ ಕ್ಷೇತ್ರದ ಲಾಡ್ಲಾಪುರ ಸರ್ಕಾರಿ ಶಾಲೆ ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕೆ 2 ಕಿ.ಮೀ. ನಡೆದುಕೊಂಡು ಹೋಗಬೇಕೆಂದು ಇತ್ತೀಚೆಗೆ ಪತ್ರಿಕೆಯಲ್ಲಿ ವರದಿಯಾಗಿದೆ. ಊಟಕ್ಕೆ ಮಕ್ಕಳು 2 ಕಿ.ಮೀ. ನಡಿಬೇಕಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಡಿ.ಡಿ.ಪಿ.ಐ ಸಕ್ರೆಪ್ಪ ಬಿರಾದಾರಗೆ ಪ್ರಶ್ನಿಸಿದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಬಿಸಿ ಊಟದಲ್ಲಿ ಕಳಪೆ ಮಟ್ಟದ ಬೇಳೆ ಪೂರೈಸಲಾಗುತ್ತಿದೆ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಇದನ್ನು ಕಣ್ಣಾರೆ ಕಂಡಿರುವೆ. ಕ್ಷೀರ ಭಾಗ್ಯ ಪೌಡರ್ ಬಗ್ಗೆಯೂ ಎಚ್ಚರಿಕೆ ವಹಿಸಬೇಕೆಂದರು.ಇಒ ಅಮಾನತಿಗೆ ಸೂಚನೆ:
ಹೊನ್ನಕಿರಣಗಿ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆ ಮಾಡಿದ ಅಡುಗೆಯನ್ನು ಶಾಲಾ ಮಕ್ಕಳು ತಿನ್ನಬಾರದು ಎಂದು ಡಂಗೂರ ಹೊರಡಿಸಿದ ಪ್ರಕರಣ ಸಭೆಯಲ್ಲಿ ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸದರಿ ಅಡುಗೆ ಮಾಡುವ ಮಹಿಳೆಯರನ್ನು ಸ್ಥಳಾಂತರಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಕಾರಣರಾದ ಕಲಬುರಗಿ ತಾಪಂ ಇ.ಒ. ಅವರನ್ನು ಕೂಡಲೆ ಅಮಾನತು ಮಾಡುವಂತೆ ಮತ್ತು ಸದರಿ ಪರಿಶಿಷ್ಟ ಮಹಿಳೆಯನ್ನು ಅಲ್ಲಿಯೇ ಮುಂದುವರೆಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದರು. ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಡಂಗೂರ ಬಾರಿಸಲು ಅನುಮತಿ ಕೊಟ್ಟವರು ಯಾರು? ನಂತರ ಮಹಿಳೆಯನ್ನು ಬದಲಾಯಿಸಿದ್ದೇಕೆ ಎಂದರು. ಬಿಸಿಯೂಟ ಅಧಿಕಾರಿ ರಾಮಲಿಂಗಪ್ಪ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್. ದಾಖಲಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಶಾಸಕರಾದ ಬಿ.ಆರ್.ಪಾಟೀಲ, ಕನೀಜ್ ಫಾತಿಮಾ, ಶಶೀಲ ಜಿ. ನಮೋಶಿ, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನೂರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೆಷನರಿ ಐ.ಎ.ಎಸ್. ಅಧಿಕಾರಿ ಗಜಾನನ ಬಾಳೆ, ಹೆಚ್ಚುವರಿ ಎಸ್.ಪಿ. ಶ್ರೀನಿಧಿ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕೆಆರ್‌ಐಡಿಎಲ್ ಸರಿದಾರಿಗೆ ತರುವ ಪ್ರಯತ್ನ: ಪ್ರಿಯಾಂಕ್ ಖರ್ಗೆಕರ್ನಾಟಕ ಗ್ರಾಮೀಣಾಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿ ನಿಗಮದಡಿಯಿಂದ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯೆಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೆ.ಆರ್.ಐ.ಡಿ.ಎಲ್ ಸಂಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನ ಆರಂಭಿಸಿರುವೆ. ಸ್ವಲ್ಪ ಸಮಯಾವಕಾಶ ಕೊಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕೆ.ಆರ್.ಐ.ಡಿ.ಎಲ್, ಕಿಯೋನಿಕ್ಸ್ ಹಗರಣ ತನಿಖೆ ನಡೆದಿದೆ. ಕಿಯೋನಿಕ್ಸ್ ನಲ್ಲಿ ಶೇ.5ರಷ್ಟು ಕಾಮಗಾರಿಗಳು ತಪಾಸಣೆಗೆ ಒಳಪಡಿಸಿದಾಗ 400 ಕೋಟಿ ರು. ಹಗರಣ ಬೆಳಕಿಗೆ ಬಂದಿದೆ. ಕೆ.ಆರ್.ಡಿ.ಐ.ಎಲ್ ಕಾಮಗಾರಿಯಲ್ಲಿ ಭ್ರಷ್ಟಾಚಾರದ ಸಮಗ್ರ ವರದಿ ಬಂದ ಮೇಲೆ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.ಶಾಸಕರು ನಡೆಸುವ ಕೆ.ಡಿ.ಪಿ. ಸಭೆಗೆ ಬರುವುದಿಲ್ಲವೇಕೆ ಎಂದು ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಸಭೆಗೆ ಬರದಿದ್ದಕ್ಕೆ ಆಗದಿದ್ದಲ್ಲಿ ಲಿಖಿತ ಅನುಮತಿ ಪಡೆಯಿರಿ. ವಿನಾಕಾರಣ ಸತತ ಎರಡು ಕೆ.ಡಿ.ಪಿ. ಸಭೆ ಗೈರಾದಲ್ಲಿ ಅಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ರಿಲೀವ್ ಮಾಡಿ ಎಂದು ಡಿ.ಸಿ.ಗೆ ಖಡಕ್ ಸೂಚನೆ ನೀಡಿದರು.