ಗಂಗಾವತಿಯ ಅಂಜನಾದ್ರಿಯಲ್ಲಿ 500 ಕೆಜಿಯ ಪಂಚಲೋಹದ ರಾಮನ ಮೂರ್ತಿ ಪ್ರತಿಷ್ಠಾಪನೆ

| Published : Jan 22 2024, 02:15 AM IST

ಗಂಗಾವತಿಯ ಅಂಜನಾದ್ರಿಯಲ್ಲಿ 500 ಕೆಜಿಯ ಪಂಚಲೋಹದ ರಾಮನ ಮೂರ್ತಿ ಪ್ರತಿಷ್ಠಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಲೋಹದ ರಾಮನ ಮೂರ್ತಿಗೆ ಸಂಸದ ಕರಡಿ ಸಂಗಣ್ಣ, ವಿಪ ಸದಸ್ಯೆ ಹೇಮಲತಾ ನಾಯ್ಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಸಿಂಗನಾಳ ವಿರುಪಾಕ್ಷಪ್ಪ ಉಪಸ್ಥಿತರಿದ್ದು ಪುಷ್ಪಗುಚ್ಚ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಗಂಗಾವತಿ: ಅಯೋಧ್ಯೆಯಲ್ಲಿ ಜ.22 ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲೇ ಇತ್ತ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಯ ಹನುಮ ಜನಿಸಿದ ಸ್ಥಳದಲ್ಲಿ 500 ಕೆಜಿ ತೂಕದ ಪಂಚಲೋಹದ ಕಂಚಿನ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಗೆ ಮುಜರಾಯಿ ಇಲಾಖೆ ಸಿದ್ಧತೆ ನಡೆಸಿದೆ.

ಬೆಂಗಳೂರಿನ ಅಶ್ವ ರಾಮಾನುಜ ಸಂಸ್ಥೆಯಿಂದ ಈ ಮೂರ್ತಿ ನಿರ್ಮಿಸಲಾಗಿದ್ದು, 9 ಅಡಿ ಎತ್ತರದ ಮೂರ್ತಿಗೆ ₹20 ಲಕ್ಷ ವೆಚ್ಚ ಮಾಡಿದ್ದಾರೆ.

ಬೆಂಗಳೂರಿನಿಂದ ತಂದಿರುವ ಪಂಚಲೋಹದ ಮೂರ್ತಿಯನ್ನು ಕೊಪ್ಪಳ ಸಹಾಯಕ ಆಯುಕ್ತರು ಆಗಿರುವ ಮುಜರಾಯಿ ಇಲಾಖೆಯ ಆಡಾಳಿತಾಧಿಕಾರಿ ಕ್ಯಾ.ಮಹೇಶ ಮಾಲಿಗಿತ್ತಿ ಅವರಿಗೆ ಸಂಸ್ಥೆಯ ಮುಖ್ಯಸ್ಥ ರಾಮಚಂದ್ರ ಹಸ್ತಾಂತರಿಸಿದರು.

ಮೊದಲು ಆಕ್ಷೇಪ: ಬೆಂಗಳೂರಿನಿಂದ ಬಂದಿದ್ದ 9 ಅಡಿಯ ಪಂಚಲೋಹ ರಾಮಮೂರ್ತಿ ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿದ್ದರು. ಸರ್ಕಾರದ ಮತ್ತು ಮುಜರಾಯಿ ಲಾಖೆಯ ಅನುಮತಿ ಇಲ್ಲದಿರುವುದರಿಂದ ಹಸ್ತಾಂತರಕ್ಕೆ ನಿರಾಕರಿಸಿದ್ದರು ಎನ್ನಲಾಗಿದೆ. ನಂತರ ಸ್ಥಳದಲ್ಲಿದ್ದ ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಮುಜರಾಯಿ ಇಲಾಖೆಯ ಸಚಿವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮೇಲಧಿಕಾರಿಗಳಿಗೆ ಮಾತನಾಡಿ, ಕೂಡಲೇ ಅಂಜನಾದ್ರಿಯಲ್ಲಿ ರಾಮನ ಮೂರ್ತಿ ಹಸ್ತಾಂತರಿಸಿಕೊಳ್ಳಬೇಕೆಂದು ಕೋರಿದ್ದರು. ಇದಕ್ಕೆ ಸಹಕರಿಸಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆದೇಶದ ಮೇರೆಗೆ ಅಧಿಕಾರಿಗಳು ಹಸ್ತಾಂತರಿಸಿಕೊಂಡರು.

ಪುಷ್ಪಗುಚ್ಚ ಸಮರ್ಪಣೆ: ಪಂಚಲೋಹದ ರಾಮನ ಮೂರ್ತಿಗೆ ಸಂಸದ ಕರಡಿ ಸಂಗಣ್ಣ, ವಿಪ ಸದಸ್ಯೆ ಹೇಮಲತಾ ನಾಯ್ಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಸಿಂಗನಾಳ ವಿರುಪಾಕ್ಷಪ್ಪ ಉಪಸ್ಥಿತರಿದ್ದು ಪುಷ್ಪಗುಚ್ಚ ಸಮರ್ಪಿಸಿ ಪೂಜೆ ಸಲ್ಲಿಸಿದರು.