100 ಹಾಸಿಗೆ ಆಸ್ಪತ್ರೆ ಕಟ್ಟಡಕ್ಕೆ ಸಿಎಂ ಸಿದ್ದರಾಮಯ್ಯ ಶಂಕು ಸ್ಥಾಪನೆ

| Published : Dec 08 2024, 01:15 AM IST

ಸಾರಾಂಶ

100 ಹಾಸಿಗೆ ಆಸ್ಪತ್ರೆ ಕಟ್ಟಡಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಯಳಂದೂರಲ್ಲಿ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

100 ಹಾಸಿಗೆ ಆಸ್ಪತ್ರೆ ಕಟ್ಟಡಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ಯಳಂದೂರಲ್ಲಿ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ಅವರು ಮಾತನಾಡಿ, ಸರ್ಕಾರಿ ವೈದ್ಯರು ರೋಗಿಗಳ ಬಳಿ ಚೆನ್ನಾಗಿ ಮಾತನಾಡಿದರೇ ಅರ್ಧ ರೋಗ ಕಡಿಮೆಯಾಗತ್ತೆ, ನಮ್ಮ ವೈದ್ಯರು ಬಹಳಷ್ಟು ಮಂದಿ ಸರಿಯಾಗಿ ಮಾತನಾಡಿಸುವುದಿಲ್ಲ, ಇನ್ಮೇಲಾದರೂ ರೋಗಿಗಳ ಜೊತೆ ವೈದ್ಯರು ಚೆನ್ನಾಗಿ ಮಾತನಾಡಿಸಿ ಎಂದು ಹೇಳಿದರು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಬೇಕು, ತುರ್ತು ಚಿಕಿತ್ಸೆ ಕೊಡಿ, ರೋಗಿಗಳಿಂದ ವೈದ್ಯರು ಏನನ್ನೂ ನಿರೀಕ್ಷೆ ಮಾಡಬೇಡಿ, ಗೋಲ್ಡನ್ ಅವರ್‌ನಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಕೊಡಬೇಕು ಎಂದು ವೈದ್ಯರಿಗೆ ತಾಕೀತು ಮಾಡಿದರು‌.

ಪ್ರತಿ ಜಿಲ್ಲೆಯಲ್ಲೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇರಬೇಕು ಎಂದು ಯೋಚಿಸಿದ್ದೇನೆ, ಪ್ರತಿ ಜಿಲ್ಲಾಕೇಂದ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇವತ್ತು ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತಿಲ್ಲ- ಪ್ಲೇಗ್, ದಡರಾ ಇಲ್ಲದಂತಾಗಿದೆ, ಈ ಹಿಂದೆ ಹಿರಿಯರು ಆಸ್ಪತ್ರೆ ಮುಖ ನೋಡುತ್ತಿರಲಿಲ್ಲ. ಈಗ ಆ ಪರಿಸ್ಥಿತಿ ಇದೆಯಾ..? ಎಂದು ಪ್ರಶ್ನಿಸಿದರು‌.

ಜ್ವರ ಬಂದರೆ ನಾನು ಚಿಕನ್‌, ಮಟನ್‌ ತಿನ್ನುತ್ತಿದ್ದೆ:

ನಾನು ಚಿಕ್ಕವನಿದ್ದಾಗ ಜ್ವರ ಬಂದರೆ ಚಿಕನ್ ಬಿರಿಯಾನಿ, ಮಟನ್ ಪ್ರೈ ತಿನ್ನುತ್ತಿದ್ದೆ, ಈಗ ಜ್ವರ ಬಂದಾಗ ಬಿರಿಯಾನಿ ತಿಂದ್ರೆ ಜ್ವರ ಜಾಸ್ತಿ ಆಗತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಆಗ ಹಳ್ಳಿ ಜನರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತಿತ್ತು, ಈಗ ಕಡಿಮೆಯಾಗಿದೆ, ಜನರನ್ನು ಕೇಳಿದರೇ ಸಕ್ಕರೆ, ಬಿಪಿ ಇದೆ ಎನ್ನುತ್ತಾರೆ, ಬಹಳಷ್ಟು ಮಂದಿ ವ್ಯಾಯಾಮ ಮಾಡುತ್ತಿಲ್ಲ- ಹೊಲ ಉಳುವ ಜಾಗಕ್ಕೆ ಟ್ರ್ಯಾಕ್ಟರ್, ಟಿಲ್ಲರ್ ಬಂದಿದೆ, ವಿಜ್ಞಾನ ಬೆಳೆದಷ್ಟು ಹೊಸ ರೋಗಗಳು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು. ಬೆಳಗ್ಗೆಯಿಂದ ಸಂಜೆ ತ‌ನಕ ದುಡಿದು ಮೈ-ಕೈ ನೋವು ಎಂದು ಕುಡಿದರೇ ಅನಾರೋಗ್ಯ ಬರಲಿದೆ, ಕುಡಿಯುವರು ಇರುವುದರಿಂದ ಮಾರಾಟ ಮಾಡುತ್ತೇವೆ, ಕುಡಿಯಲ್ಲ ಅಂದರೆ ಮಾರಾಟ ಮಾಡಲ್ಲ, ಅಬಕಾರಿ ಇಲಾಖೆಯು ಈ ವರ್ಷ ₹38,528 ಕೋಟಿ ಗುರಿ ಇಟ್ಟುಕೊಂಡಿದೆ‌. ಕಳೆದ ಬಾರಿ ₹36 ಸಾವಿರ ಕೋಟಿ ಇತ್ತು, ಟಾರ್ಗೆಟ್ ರೀಚ್ ಅಗತ್ತೆ, ದಯಮಾಡಿ ಕುಡಿಯಬೇಡಿ ಎಂದು ಮದ್ಯಪಾನ ತೊರೆಯುವಂತೆ ಸಲಹೆ ನೀಡಿದರು.

ಗಂಡಸರಿಗೂ ಫ್ರೀ ಬಸ್ ಕೊಡುವಂತೆ ಆಗ್ರಹ:

ಗ್ಯಾರಂಟಿ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡುವಾಗ ಸ್ಥಳೀಯ ಪುರುಷರು ನಮಗೂ ಫ್ರೀ ಬಸ್ ಕೊಡುವಂತೆ ಆಗ್ರಹಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಗಂಡಸರಿಗೂ ಫ್ರೀ ಕೊಟ್ರೆ ಕೆಎಸ್ಆರ್ ಟಿಸಿ ಮುಚ್ಚಬೇಕಾಗುತ್ತೆ ಎಂದರು‌.

ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಸಿ. ಪುಟ್ಟರಂಗಶೆಟ್ಟಿ, ಎಂ.ಆರ್‌. ಮಂಜುನಾಥ್‌, ಗಣೇಶ್ ಪ್ರಸಾದ್‌, ಜಿಲ್ಲಾಧಿಕಾರಿ ಶಿಲ್ಪಾನಾಗ್‌, ಜಿಪಂ ಸಿಇಓ ಮೋನಾರೋತ್‌, ಎಸ್ಪಿ ಬಿ.ಟಿ. ಕವಿತಾ, ಡಿಎಚ್‌ಒ ಚಿದಂಬರ ಇತರರು ಇದ್ದರು.

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕು: ಎಚ್‌ಸಿಎಂ ಅಬ್ಬರಅಧಿಕಾರ ಹಂಚಿಕೆ ಮಾತು ಜೋರಾಗಿ ಕೇಳಿಬರುತ್ತಿರುವ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವ ಸಿದ್ದರಾಮಯ್ಯ ಸಮ್ಮುಖದಲ್ಲೇ ಸಿಎಂ 5 ವರ್ಷ ಸಿಎಂ ಆಗಿರಬೇಕು ಎಂದರು. ಜನರ ಆಶೀರ್ವಾದ ಇರುವ ತನಕ ಸಿದ್ದರಾಮಯ್ಯ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ, ಸರ್ಕಾರ ಅಲುಗಾಡಿದರೇ ನೀವು ಸುಮ್ಮನಿರುತ್ತೀರಾ ಎಂದು ಜನರಿಗೇ ಪ್ರಶ್ನೆ ಕೇಳಿದರು. ಸಿದ್ದರಾಮಯ್ಯಗೆ ಕಳಂಕ ತರಲು ಬಿಜೆಪಿ, ಜೆಡಿಎಸ್ ಹುನ್ನಾರ ನಡೆಸುತ್ತಿದೆ, ಜನರ ಆಶೀರ್ವಾದ ಇರುವ ತನಕ ಸರ್ಕಾರವನ್ನು ಏನು ಮಾಡಲಾಗಲ್ಲ, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿ ಮುಂದುವರೆಯಲು ನೀವು ಆಶೀರ್ವಾದ ಮಾಡಬೇಕು ಎಂದರು.