ನಮ್ಮ ಜಿಲ್ಲೆ ಗಡಿಭಾಗದಲ್ಲಿದ್ದರೂ ಭಾಷೆ ಮೇಲಿನ ಸ್ವಾಭಿಮಾನದಿಂದ ಅನ್ಯರೂಡನೆ ಸಹಬಾಳ್ವೆ ನಡೆಸುತ್ತಿದ್ದೇವೆ. ಕನ್ನಡವನ್ನು ತಮಿಳುನಾಡಿನ ಧರ್ಮಪುರಿವರೆಗೆ ಬೆಳೆಸಿರುವ ನಾವು ತಮಿಳು ಭಾಷೆಯನ್ನು ನಮ್ಮ ತಾಲೂಕಿನ ಒಳಗೆ ಬಿಟ್ಟುಕೊಂಡಿಲ್ಲ .

ಕನ್ನಡಪ್ರಭ ವಾರ್ತೆ ಮಾಲೂರು

ಕೋಲಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಪ್ರತಿಮೆ ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಅವರು ಇಲ್ಲಿನ ನಗರಸಭೆ ಆವರಣದಲ್ಲಿ ಸುಸಜ್ಜಿತವಾಗಿ ನವೀಕರಣಗೊಂಡ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗ ಮಂದಿರ ಲೋಕಾರ್ಪಣೆಗೊಳಿಸಿ ಮಾತನಾಡಿ, ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು ಕೋಲಾರ ಜಿಲ್ಲೆಯವರಾಗಿದ್ದು, ಅವರ ಹುಟ್ಟೂರಾದ ಕ್ಯಾಸಂಬಳ್ಳಿಯಲ್ಲಿ ಅವರ ಪ್ರತಿಮೆ ಸ್ಥಾಪನೆಗೆ ಸಿದ್ಧತೆ ನಡೆದಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅವರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸುವುದಾಗಿ ತಿಳಿಸಿದರು. ಮಾಲೂರು ತಾಲೂಕು ಖ್ಯಾತ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಹುಟ್ಟೂರಾಗಿದ್ದು, ಅವರ ಹೆಸರಿನಲ್ಲಿ ಸ್ಥಾಪಿಸಿರುವ ರಂಗ ಮಂದಿರವು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿ ಎಂದು ಆಶಿಸಿದರು. ಸಮಾಜಕ್ಕೆ ಕೊಡುಗೆ ನೀಡಿದ್ದ ಗಣ್ಯರನ್ನು ಗೌರವಿಸುವ ಆದ್ಯತೆ ಹೊಂದಿರುವ ನಮ್ಮ ಸರ್ಕಾರವು ಮುಳಬಾಗಿಲಿನ ಖ್ಯಾತ ಸಾಹಿತಿ ಡಿ.ವಿ.ಗುಂಡಪ್ಪ ಅವರ ಸ್ಮಾರಕ ನಿರ್ಮಾಣಕ್ಕೂ ಒತ್ತು ನೀಡಲಿದೆ. ಹೈನುಗಾರಿಕೆ ಕ್ಷೇತ್ರ ಬೆಳವಣಿಗೆಗೆ ಕಾರಣೀಭೂತರಾದ ಎಂ.ವಿ.ಕೃಷ್ಣಪ್ಪ ಅವರ ಹೆಸರಿನಲ್ಲಿ ಕೋಲಾರದಲ್ಲಿ ಎಂವಿಕೆ ಗೋಲ್ಡನ್ ಡೈರಿ ಪೂರ್ಣಗೊಂಡಿದ್ದು, ಶೀಘ್ರ ಲೋಕಾರ್ಪಣೆಗೊಳಲಿದೆ ಎಂದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ನಮ್ಮ ಜಿಲ್ಲೆ ಗಡಿಭಾಗದಲ್ಲಿದ್ದರೂ ಭಾಷೆ ಮೇಲಿನ ಸ್ವಾಭಿಮಾನದಿಂದ ಅನ್ಯರೂಡನೆ ಸಹಬಾಳ್ವೆ ನಡೆಸುತ್ತಿದ್ದೇವೆ. ಕನ್ನಡವನ್ನು ತಮಿಳುನಾಡಿನ ಧರ್ಮಪುರಿವರೆಗೆ ಬೆಳೆಸಿರುವ ನಾವು ತಮಿಳು ಭಾಷೆಯನ್ನು ನಮ್ಮ ತಾಲೂಕಿನ ಒಳಗೆ ಬಿಟ್ಟುಕೊಂಡಿಲ್ಲ ಎಂದರು.

ಸಿಕ್ಕ ಅವಕಾಶವನ್ನು ಕ್ಷೇತ್ರ ಅಭಿವೃದ್ಧಿ ಮಾಡುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕೆಂಬ ಆಶಯದೊಂದಿಗೆ ನಾನು ಆಡಳಿತ ನಡೆಸುತ್ತಿದ್ದೇನೆ ಎಂದ ಶಾಸಕರು, ಪ್ರಥಮ ಬಾರಿಗೆ ಶಾಸಕನಾಗಿದ್ದಾಗ ನಮ್ಮ ಸರ್ಕಾರ ಇಲ್ಲದಿದ್ದರಿಂದ ತಾಲೂಕನ್ನು ಅಭಿವೃದ್ಧಿ ಪಡಿಸಲು ಆಗಿರಲಿಲ್ಲ. ಆದರೂ ತಾಲೂಕಿನ ಜನತೆ ಎರಡನೇ ಬಾರಿ ಆಯ್ಕೆ ಮಾಡುವ ಮೂಲಕ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಈಗ ನಮ್ಮ ಸರ್ಕಾರ ಇದ್ದು, ಕಳೆದ ಮೂರುವರೆ ವರ್ಷದಲ್ಲಿ ₹3800 ಕೋಟಿ ಅನುದಾನ ತಂದು ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯ ನಡೆಸಿರುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ,ತಹಸೀಲ್ದಾರ್ ರೂಪ, ವರ್ಗಾವಣೆಗೊಂಡಿದ್ದ ಇಒ ಕೃಷ್ಣಪ್ಪ ಸೇರಿ ಅನೇಕ ಗಣ್ಯರು ಮಾತನಾಡಿದರು.

ಖ್ಯಾತ ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಸೇರಿ ಅನೇಕ ಗಣ್ಯರನ್ನು ಅಭಿನಂದಿಸಲಾಯಿತು. ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿ ಸುಹಾನ ಸೈಯದ್ ,ಕಂಬದ ರಂಗಯ್ಯ, ಅಂಕಿತ ಕುಂದು, ಆಶಾ ಭಟ್, ಕಾರ್ತಿಕ್ ನಾಗಲಾಪುರ ಅವರಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ಕಸಪಾ ಅಧ್ಯಕ್ಷ ಎಂ.ವಿ.ಹನುಂತಯ್ಯ ಕಾರ್ಯಕ್ರಮ ನಿರೂಪಿಸಿದರು. ರತ್ಮಮ್ಮ ನಂಜೇಗೌಡ ,ಪ್ರಾಧಿಕಾರದ ಅಧ್ಯಕ್ಷ ವಿಜಯನರಸಿಂಹ, ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಚಾಕನ ಹಳ್ಳಿ ನಾಗರಾಜು, ಎಸ್.ಎಂ.ರಾಜು, ದಯಾನಂದ್, ಅಶ್ವಥ್ ರೆಡ್ಡಿ, ರವಿಕುಮಾರ್, ಇಓ ಪ್ರಸಾದ್, ಪೌರಾಯುಕ್ತ ಮಹದೇವ್ ಇನ್ನಿತರರು ಇದ್ದರು.