ತುಂಗಭದ್ರಾ ಜಲಾಶಯದಲ್ಲಿ ಹೊಸ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮೇ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಲಾಶಯಗಳ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಹೊಸ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮೇ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಲಾಶಯಗಳ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್‌ಗಳ ಪೈಕಿ ಕೊನೆಯ ಒಂದು ಗೇಟ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಅದು ಸಹ ಶನಿವಾರ ಪೂರ್ಣಗೊಳ್ಳಲಿದೆ. ಈಗಾಗಲೇ 15 ಗೇಟ್‌ಗಳ ರಬ್ಬರಿಂಗ್ ಮಾಡಲಾಗಿದೆ. ಅಳವಡಿಕೆಯಾಗಿರುವ ಕ್ರಸ್ಟ್‌ಗೇಟ್‌ಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿದೆ. ಅವುಗಳು ಹೇಗೆ ಕಾರ್ಯನಿರ್ವಹಣೆ ಮಾಡುತ್ತವೆ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್‌ಗೇಟ್ ಅಳವಡಿಸಿದ್ದರಿಂದ ಜಲಾಶಯ ಮುಂದಿನ 70 ವರ್ಷಗಳಿಗೆ ಅದರ ಬಾಳಿಕೆ ಅವಧಿ ವಿಸ್ತರಣೆಯಾಗಿದೆ. ಜಲಾಯಶದ ನಿರ್ಮಾಣದ ವೇಳೆ ಅಂದಾಜಿಸಿದಂತೆ 50 ವರ್ಷಗಳ ಬಳಿಕ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ಬದಲಾವಣೆ ಮಾಡಬೇಕಿತ್ತು. ಅದನ್ನು ರಾಷ್ಟ್ರೀಯ ಜಲಾಶಯಗಳ ಸುರಕ್ಷತಾ ಪ್ರಾಧಿಕಾರದ ತಜ್ಞರೂ ಸೂಚಿಸಿದ್ದರು. ಆದರೆ, ಅವುಗಳು ಗಟ್ಟಿಮುಟ್ಟಾಗಿರುವುದರಿಂದ ಗೇಟ್‌ಗಳ ಅಳವಡಿಕೆ ಮುಂದೂಡಲಾಗಿತ್ತು. ಆನಂತರ 19ನೇ ಕ್ರಸ್ಟ್ ಗೇಟ್ ಕಳಚಿ ಬೀಳುವ ಮೂಲಕ ಎಚ್ಚರಿಕೆಯ ಸಂದೇಶ ನೀಡಿತು. ಅದಕ್ಕೆ ತಕ್ಷಣವೇ ಹಗಲು ರಾತ್ರಿ ಶ್ರಮವಹಿಸಿ ತಾತ್ಕಾಲಿಕವಾಗಿ ಸ್ಟಾಪರ್ ಗೇಟ್ ಅಳವಡಿಕೆ ಮಾಡಿ, ಪರಿಹಾರ ಕ್ರಮ ವಹಿಸಲಾಗಿತ್ತು ಎಂದರು.
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಅಲ್ಟ್ರಾಸೌಂಡ್ ಪರೀಕ್ಷೆಗೊಳಪಡಿಸಿದಾಗ ಗೇಟ್‌ಗಳು ನೀರಿನ ಅಲೆಗಳ ಹೊಡೆತದಿಂದ ಹಿಂಭಾಗದಲ್ಲಿ ಸವಕಳಿಯಾಗಿರುವುದು ದೃಢಪಟ್ಟಿತು. ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳ ಸಹಕಾರದಿಂದ ಎಲ್ಲ ಕ್ರಸ್ಟ್‌ಗೇಟ್‌ಗಳ ಬದಲಾವಣೆ ಸಾಧ್ಯವಾಯಿತು ಎಂದು ನಾಯ್ಡು ವಿವರಿಸಿದರು.ಆರಂಭದಲ್ಲಿ ಕ್ರಸ್ಟ್‌ಗೇಟ್‌ಗಳ ಅಳವಡಿಕೆಗೆ ಎದುರಾದ ಹಣಕಾಸು ಮತ್ತು ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಕೊಂಚ ವಿಳಂಬವಾಯಿತು. ಆದರೂ ನಂತರ ಎಲ್ಲವೂ ನಿರೀಕ್ಷೆಯಂತೆ ನಿಗದಿತ ಸಮಯದಲ್ಲೇ ಪೂರ್ಣಗೊಂಡಿದೆ. ಈ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ನಿರೀಕ್ಷೆಯಂತೆ ಎಲ್ಲ ಸರ್ಕಾರಗಳು ತಮ್ಮ ಪಾಲಿನ ಅನುದಾನ ಒದಗಿಸಿವೆ. ನೂರಾರು ಕಾರ್ಮಿಕರು ಹಗಲಿರುಳು ಶ್ರಮಿಸಿದ್ದಾರೆ. ಇಂತಹ ಮಹತ್ತರ ಕಾಮಗಾರಿಯಲ್ಲಿ ಭಾಗಿಯಾಗಿರುವುದಕ್ಕೆ ನನಗೂ ಧನ್ಯತೆ ಇದೆ. ಈ ಭಾಗದ ರೈತರಿಗೆ ಸರ್ಕಾರಗಳು ನೀಡಿದ ಬಹುದೊಡ್ಡ ಕೊಡುಗೆ ಇದು ಎಂದು ಕನ್ನಯ್ಯ ನಾಯ್ಡು ಬಣ್ಣಿಸಿದರು.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಸದ್ಯ 105.788 ಟಿಎಂಸಿ ಇದೆ. ಆದರೆ, 70 ವರ್ಷಗಳ ಹಳೆಯ ಜಲಾಶಯದ ತಡೆಗೋಡೆಗಳ ಸಾಮರ್ಥ್ಯವನ್ನು ಗಮನದಲ್ಲಿ ಇರಿಸಿಕೊಂಡು ನೀರಿನ ಸಂಗ್ರಹವನ್ನು ಗರಿಷ್ಠ 100 ಟಿಎಂಸಿಗೆ ಇಳಿಕೆ ಮಾಡುವಂತೆ ತುಂಗಭದ್ರಾ ಮಂಡಳಿಗೆ ಶಿಫಾರಸು ಮಾಡಿದ್ದೇವೆ. ಇದರಿಂದ ಕೆಳ ಭಾಗದ ರೈತರ ಎರಡು ಬೆಳೆಗಳಿಗೆ ನೀರು ಒದಗಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ, ಟಿಬಿ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಎನ್. ಚಂದ್ರಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್. ನಾರಾಯಣ ನಾಯ್ಕ್ ಉಪಸ್ಥಿತರಿದ್ದರು.