ಮತದಾರರನ್ನು ಸೆಳೆಯಲು 249 ಮತಗಟ್ಟೆಗಳಲ್ಲಿ ವಿವಿಧ ರೀತಿಯ ಮತಗಟ್ಟೆ ಸ್ಥಾಪನೆ

| Published : Apr 26 2024, 12:48 AM IST

ಮತದಾರರನ್ನು ಸೆಳೆಯಲು 249 ಮತಗಟ್ಟೆಗಳಲ್ಲಿ ವಿವಿಧ ರೀತಿಯ ಮತಗಟ್ಟೆ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಚುನಾವಣಾಧಿಕಾರಿ, ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬರು ಪೊಲೀಸ್ ಸಿಬ್ಬಂದಿ ಇದ್ದಾರೆ. ಮತಗಟ್ಟೆ ಮೇಲೆ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಚುನಾವಣಾ ಲೋಪ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಹಿಂಸಾತ್ಮಕ ಕೃತ್ಯಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಂಡ್ಯ ಲೋಕಸಭಾ ಚುನಾವಣಾಗಾಗಿ ತಾಲೂಕಿನಾದ್ಯಂತ ಒಟ್ಟು 249 ಮತಗಟ್ಟೆ ತೆರೆಯಲಾಗಿದೆ ಎಂದು ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ತಿಳಿಸಿದರು.

ಕ್ಷೇತ್ರದಲ್ಲಿ ಒಟ್ಟು 2,17,632 ಮಂದಿ ಮತದಾರರಿದ್ದು, ಇದರಲ್ಲಿ 1,11,434 ಮಹಿಳೆಯರು, 1,06,157 ಪುರುಷರು ಹಾಗೂ 44 ಮಂದಿ ಇತರ ಮತದಾರರಿದ್ದಾರೆ. ಮತದಾರರನ್ನು ಮತಗಟ್ಟೆಗೆ ಸೆಳೆಯುವ ಸಲುವಾಗಿ ಪಿಂಕ್, ಸಾಂಪ್ರದಾಯಿಕ, ವಿಶೇಷ ಚೇತನ, ವಿಷಯ ಆಧಾರಿತ, ಯುವ ಮತದಾರರ ಮತಗಟ್ಟೆ ತೆರೆಯಲಾಗಿದೆ.

ಪಟ್ಟಣದ ಹಿರಿಯ ಬಾಲಕಿಯರ ಪಾಠ ಶಾಲೆ, ಪಟ್ಟಣದ ಸರ್ಕಾರಿ ಶಾಲೆ (ಗುಂಪು ಮತಗಟ್ಟೆ) ಮತಗಟ್ಟೆಯನ್ನು ತಾಲೂಕು ಸ್ವೀಪ್ ಸಮಿತಿಯಿಂದ ವಿಷಯ ಆಧಾರಿತ 2 ರಂಗನತಿಟ್ಟು ಪಕ್ಷಿಧಾಮ ಮತಗಟ್ಟೆಗಳು, ತಾಲೂಕಿನ ಬೆಳಗೊಳ ಹಾಗೂ ನಗುವಿನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ 2 ಯುವ ಮತದಾರರಿಗಾಗಿ ಯುವ ಮತದಾರರ ಮತಗಟ್ಟೆ, ಕೆ.ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಶಾಲೆ, ಅರಕೆರೆ ಗ್ರಾಮದ ಸರ್ಕಾರಿ ಬಾಲಕಿಯರ ಶಾಲೆ, ಪಟ್ಟಣದ ಪುರಸಭೆ, ಗಂಜಾಂನ ಸರ್ಕಾರಿ (ಮೀನುಗಾರ) ಶಾಲೆ ತೂಬಿನಕೆರೆ ಸರ್ಕಾರಿ ಶಾಲೆ ಸೇರಿದಂತೆ ಒಟ್ಟು 5 ಪಿಂಕ್ ಮತಗಟ್ಟೆ, ಕೊಡಿಯಾಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಶೇಷ ಚೇತನರ ಮತಗಟ್ಟೆ, ಕೆಆರ್‌ಎಸ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆದು ಮತದಾರರನ್ನು ಮತಗಟ್ಟೆಗೆ ಸೆಳೆಯುವ ಪ್ರಯತ್ನ ಮಾಡಲಾಗಿದೆ.

ಸಿಬ್ಬಂದಿ ನಿಯೋಜನೆ:

ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಚುನಾವಣೆ ಸುಸೂತ್ರವಾಗಿ ನಡೆಯಲು ಚುನಾವಣಾ ಮೀಸಲು ಪಡೆಯನ್ನು ನೇಮಿಸಿದ್ದು, ಒಂದು ಮತಗಟ್ಟೆಗೆ 4 ಮಂದಿ ಸಿಬ್ಬಂದಿ ಹಾಗೂ ಒಬ್ಬರು ಪೊಲೀಸರನ್ನು ನಿಯೋಜಿಸಿದೆ. ಅದರಲ್ಲಿ ಎಲ್ಲಾ ಮತಗಟ್ಟೆಗಳನ್ನು ಕ್ರಿಟಿಕಲ್ (ಅತೀಸೂಕ್ಷ್ಮ) ಎಂದು ಗುರುತಿಸಲಾಗಿದೆ.

ಚುನಾವಣೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಚುನಾವಣಾಧಿಕಾರಿ, ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬರು ಪೊಲೀಸ್ ಸಿಬ್ಬಂದಿ ಇದ್ದಾರೆ. ಮತಗಟ್ಟೆ ಮೇಲೆ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಚುನಾವಣಾ ಲೋಪ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಹಿಂಸಾತ್ಮಕ ಕೃತ್ಯಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಶ್ರೀರಂಗಪಟ್ಟಣದಲ್ಲಿ 1 ಡಿವೈಎಸ್‌ಪಿ, ಕೆಎಸ್‌ಆರ್‌ಪಿಯ 2 ತುಕ್ಕಡಿಗಳು ಸೇರಿದಂತೆ 500ಕ್ಕೂ ಹೆಚ್ಚು ಸಿಬ್ಬಂದಿ ನೇಮಿಸಿ, ಚುನಾವಣಾ ಅಕ್ರಮಗಳನ್ನು ತಡೆಯಲು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಲ್ಲಾ ಗ್ರಾಮಗಳ ಮತಗಟ್ಟೆಗೆ ಸಿಬ್ಬಂದಿ ತೆರಳಲು 39 ಬಸ್, 5 ಮಿನಿ ಬಸ್, 6 ಜೀಪುಗಳನ್ನು ಬಳಕೆ ಮಾಡಲಾಗಿದೆ ಎಂದರು.