ಶೃಂಗೇರಿತಮ್ಮಸ್ವಾರ್ಥಕ್ಕಾಗಿ ಮತೀಯ ಭಾವನೆ ಸೃಷ್ಠಿಸಿ, ಜನರ ನಡುವೆ ಸಂಘರ್ಷ, ಅಸೂಯೆ, ದ್ವೇಷ ಭಾವನೆ ಮೂಡಿಸಿ ಸಮಾಜವನ್ನು ಒಡೆಯಬೇಡಿ. ಜನರ ನಡುವೆ ಭಾಂದವ್ಯ, ಸಾಮರಸ್ಯ ಮೂಡಿಸಿ ಸಮಾಜವನ್ನು ಒಗ್ಗೂಡಿ ಕೆಲಸ ಮಾಡಬೇಕು ಎಂದು ಶ್ರೀ ಕ್ಷೇತ್ರ ಹರಿಹರಪುರ ಪೀಠಾಧಾಶ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂತ ಸರಸ್ವತಿ ಮಹಾಸ್ವಾಮಿ ಕರೆ ನೀಡಿದರು.

ಕಿಗ್ಗಾದಲ್ಲಿ ಆಯೋಜಿಸಿದ್ದ ಕಿಗ್ಗಾ ಮಂಡಲ ಹಿಂದೂ ಸಮಾಜೋತ್ಸವ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಮ್ಮಸ್ವಾರ್ಥಕ್ಕಾಗಿ ಮತೀಯ ಭಾವನೆ ಸೃಷ್ಠಿಸಿ, ಜನರ ನಡುವೆ ಸಂಘರ್ಷ, ಅಸೂಯೆ, ದ್ವೇಷ ಭಾವನೆ ಮೂಡಿಸಿ ಸಮಾಜವನ್ನು ಒಡೆಯಬೇಡಿ. ಜನರ ನಡುವೆ ಭಾಂದವ್ಯ, ಸಾಮರಸ್ಯ ಮೂಡಿಸಿ ಸಮಾಜವನ್ನು ಒಗ್ಗೂಡಿ ಕೆಲಸ ಮಾಡಬೇಕು ಎಂದು ಶ್ರೀ ಕ್ಷೇತ್ರ ಹರಿಹರಪುರ ಪೀಠಾಧಾಶ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂತ ಸರಸ್ವತಿ ಮಹಾಸ್ವಾಮಿ ಕರೆ ನೀಡಿದರು.

ತಾಲೂಕಿನ ಕಿಗ್ಗಾದಲ್ಲಿ ಹಿಂದೂ ಸಮಾಜೋತ್ಸವ ಆಚರಣಾ ಸಮಿತಿ ಆಯೋಜಿಸಿದ್ದ ಕಿಗ್ಗಾ ಮಂಡಲ ಹಿಂದೂ ಸಮಾಜೋತ್ಸವದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ದಲಿತ,ಅಸ್ಪೃಷ್ಯತೆ ಹೆಸರಲ್ಲಿ ಹಿಂದೂ ಸಮಾಜವನ್ನು ಒಡೆಯುತ್ತಿರುವುದು ದುಃಖದ ಸಂಗತಿ. ಭಾರತೀಯ ಸಂಸ್ಕೃತಿ ಹಿರಿಮೆ ಶ್ರೇಷ್ಠವಾದುದು. ಇದು ಸಾವಿರಾರು ವರ್ಷಗಳ ಭವ್ಯ ಇತಿಹಾಸ ಪರಂಪರೆ ಹೊಂದಿದೆ. ಎಲ್ಲಾ ಸಂಸ್ಕೃತಿ ಗಳಿಗೆ ತಾಯಿ ಬೇರು ಆಗಿದೆ. ಭಾರತೀಯ ಸಂಸ್ಕೃತಿಯ ಹಿರಿಮೆಯ ಬಗ್ಗೆ ಅರಿವಿರಬೇಕು. ನಮ್ಮ ಧರ್ಮ ಸಂಸ್ಕೃತಿ,ಆಚಾರ ವಿಚಾರ, ಕಾಲ,ದೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವಂತಿರಬೇಕು ಎಂದರು.

ಭಾರತೀಯ ಸಂಸ್ಕೃತಿ ವಿವಿಧತೆಯಲ್ಲಿ ಏಕತೆ ಹೊಂದಿದೆ. ದೇವನೊಬ್ಬ ನಾಮ ಹಲವು, ಸತ್ಯ ಒಂದು ಮಾರ್ಗಗಳ ಹಲವು ಏಕದೇವನಲ್ಲಿ ಬಹುದೇವತಾರಾಧನೆ ಮಾಡುವ ಪದ್ಧತಿ, ಎಲ್ಲಾ ದೇವರನ್ನು ಪೂಜಿಸುವ ಪದ್ಧತಿ ಭಾರತೀಯ ಸಂಸ್ಕೃತಿ ಹಿರಿಮೆಯಾಗಿದೆ. ಜಗತ್ತಿನಲ್ಲಿ ಎಲ್ಲಾ ರೀತಿ ವಿಚಾರ, ವಿಮರ್ಶೆ ಗಳಿಗೆ ಅವಕಾಶ ನೀಡಿದ ಏಕೈಕ ಸಂಸ್ಕೃತಿ ಭಾರತೀಯ ಸಂಸ್ಕೃತಿಯಾಗಿದೆ.

ದ್ವೇಷ,ಅಸೂಯೆ,ಸಂಘರ್ಷಗಳಿಂದ ದೇಶ ಕಟ್ಟಲು ಸಾದ್ಯವಿಲ್ಲ.ಪರಸ್ಪರ ನಂಬಿಕೆ,ಪ್ರೀತಿಯಿಂದ ದೇಶ ಕಟ್ಟಲು ಸಾದ್ಯ. ಆರ್ಯ ವೆಂದರೆ ಪಂಗಡ, ಜಾತಿಯಲ್ಲಿ ಗೌರವದ ಸಂಕೇತವಾಗಿದೆ. ಚೋಳರು, ಮೌರ್ಯರು, ಗಂಗರು ಸೇರಿದಂತೆ ಅನೇಕ ರಾಜಮನೆತನಗಳು ನಮ್ಮನ್ನು ಆಳಿದವು. ನ್ಯಾಯಾಂಗ, ಕಾರ್ಯಾಂಗ,ಶಾಸಕಾಂಗ ಎಲ್ಲವೂ ರಾಜನಲ್ಲಿ ಇತ್ತು ಆದರೂ ಏನು ಬದಲಾಗಲಿಲ್ಲ. ಏಕೆಂದರೆ ಆಗ ಸಮಸ್ಯೆ ಇರಲಿಲ್ಲ. ಬ್ರಿಟೀಷರು ನಮ್ಮ ದೇಶಕ್ಕೆ ಬಂದನಂತರ ಸಮಸ್ಯೆಗಳು ಆರಂಭಗೊಂಡಿತು.

ಭಾರತೀಯ ಸಂಸ್ಕ್ರೃತಿಯಲ್ಲಿನ ವೈವಿಧ್ಯತೆಯನ್ನೇ ವೈರುಧ್ಯಗಳನ್ನಾಗಿ ಬಿಂಬಿಸಿ ಸಾಮರಸ್ಯ ಹಾಳು ಮಾಡಿ ಸಮಾಜ ಒಡೆಯುವ ಕೆಲಸ ಮಾಡುತ್ತಿರುವುದು ವಿಷಾದಕರ. ಒಡೆಯುವುದು ಪಾಪದ ಕೆಲಸ, ಜೋಡಿಸುವುದು ಪುಣ್ಯದ ಕೆಲಸ. ಭಾರತೀಯ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಮಹತ್ತರ ಹೊಣೆ ಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಪ್ರೇಮಾನಂದ ಶೆಟ್ಟಿ ದಿಕ್ಕೂಚಿ ಭಾಷಣ ಮಾಡಿ ಗೋವು ಭಾರತೀಯರಿಗೆ ಪೂಜನೀಯ ಹಾಗೂ ಶ್ರೇಷ್ಠ. ಮನಸ್ಸಿನಲ್ಲಿರುವ ಮಲಿನತೆ ಮೊದಲು ಹೋಗಲಾಡಿಸಿದರೆ ಸಮಾಜ ಸುದಾರಣೆ ಸಾಧ್ಯ. ಮಕ್ಕಳಲ್ಲಿ ಆಚಾರ, ವಿಚಾರ ಸಂಸ್ಕೃತಿ ಬೆಳೆಸಬೇಕು. ಹಿಂದೂಗಳು ಎಚ್ಚೆತ್ತು ಕೊಳ್ಳಬೇಕು. ಕೇವಲ ಕಾರ್ಯಕ್ರಮಗಳಲ್ಲಿ ಒಂದಾದರೆ ಸಾಲದು. ಸನಾತನ ಧರ್ಮ,ಸಂಸ್ಕೃತಿ ಉಳಿವಿಗೆ ಪಣ ತೊಡಬೇಕು ಎಂದರು.

ಇದಕ್ಕೂ ಮೊದಲು ಕೆಲ್ಲಾರಿನಿಂದ ಕಿಗ್ಗಾದವರೆಗೆ ಆಕರ್ಷಕ ಶೋಭಾಯಾತ್ರೆ ನಡೆಯಿತು. ಹಿಂದೂ ಸಮಾಜೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಚೋಳರಮನೆ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಟಿ.ಕೆ.ಪರಾಶರ, ಬೆಟ್ಟಗೆದ್ದೆ ಸುದೀಂದ್ರ ಮತ್ತಿತರರು ಇದ್ದರು.

22 ಶ್ರೀ ಚಿತ್ರ 1-

ಶೃಂಗೇರಿ ಕಿಗ್ಗಾದಲ್ಲಿ ನಡೆದ ಹಿಂದೂ ಸಮಾಜೋತ್ಸವವನ್ನು ಶ್ರೀ ಕ್ಷೇತ್ರ ಹರಿಹರಪುರ ಪೀಠಾಧೀಶ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಶ್ರೀಗಳು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.