ಸಾರಾಂಶ
- ನನ್ನ, ನಿನ್ನ ನಾಯಕತ್ವ ಎಂಬ ಯಾವುದೇ ಪದವಿಗಳಿಲ್ಲ: ಎಚ್.ಎಸ್. ಶಿವಕುಮಾರ್ ಹೇಳಿಕೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಭಾರತೀಯ ಜನತಾ ಪಾರ್ಟಿಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಮಾಡುತ್ತಿದ್ದೇವೆ. ನನ್ನ ನಾಯಕತ್ವ, ನಿನ್ನ ನಾಯಕತ್ವ ಎಂಬ ಯಾವುದೇ ಪದವಿಗಳಿಲ್ಲ ಎಂದು ಬಿಜೆಪಿ ಪಕ್ಷದ ಸಹಕಾರ ಪ್ರಕೋಷ್ಠಕ ರಾಜ್ಯಾಧ್ಯಕ್ಷ, ಬಿಜೆಪಿ ಮುಖಂಡ ಎಚ್.ಎಸ್. ಶಿವಕುಮಾರ್ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಕಳೆದ ಶನಿವಾರ ಬಿಲ್ಲಹಳ್ಳಿ ಗ್ರಾಮದ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ, ಸದಸ್ಯತ್ವ ನೋಂದಣಿಯ ಅಂಕಿ, ಅಂಶಗಳನ್ನು ತಪ್ಪಾಗಿ ಹೇಳಿದ್ದಾರೆ ಎಂದು ದಾವಣಗೆರೆ ವಿ.ವಿ.ಯ ಸಿಂಡಿಕೇಟ್ ಮಾಜಿ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಗಾಯಿತ್ರಿ ಸಿದ್ದೇಶ್ವರ್ ಸದಸ್ಯತ್ವ ಅಭಿಯಾನಕ್ಕೆ ಬಂದರೆ ತಪ್ಪೇನು. ಇದರಿಂದ ಪಕ್ಷದ ವರ್ಚಸ್ಸು ಇನ್ನೂ ವೃದ್ಧಿಸಲಿದೆ ಎಂದರು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ 20ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಯಲ್ಲಿ ಧಕ್ಕೆ ಮಾಡುತ್ತಿದ್ದಾರೆ ಎನ್ನುವುದು ಎಷ್ಟು ಸರಿ? ಮಲ್ಲಿಕಾರ್ಜುನ್ ಏನಾದರೂ ಶಾಸಕರಾಗಿದ್ದಾರಾ? ಅವರ ತಂದೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಜಿ.ಎಂ.ಸಿದ್ದೇಶ್ವರ್ ಜೊತೆಯಲ್ಲಿದ್ದುಕೊಂಡು ಕ್ಷೇತ್ರ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಪಡೆದಂಥವರು ಎಂದು ತಿಳಿಸಿದರು.ಬಿಜೆಪಿ ಇಲ್ಲದೇ ಇದ್ದರೆ ಮಾಡಾಳು ವಿರೂಪಾಕ್ಷಪ್ಪ ಅವರು ಶಾಸಕರಾಗುತ್ತಿರಲಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಬಲವರ್ಧನೆಗೆ ಜಿ.ಎಂ.ಸಿದ್ದೇಶ್ವರ್ ತ್ಯಾಗ ಮಾಡಿದ್ದಾರೆ. ದಾವಣಗೆರೆ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಅಭ್ಯರ್ಥಿಗೆ ಸೋಲುಂಟಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ಸಂಕಷ್ಟದಲ್ಲಿದ್ದಾಗ ಎರಡು ಬಾರಿ ವಿಧಾನಸಭಾ ಚುನಾವಣೆಗೆ ಸ್ಫರ್ಧಿಸಿ, ಬಿಜೆಪಿ ಗೌರವವನ್ನು ಉಳಿಸಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ಶ್ರೇಯಸ್ಸಿಗಾಗಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲ್ಲಬೇಕು. ಆ ನಿಟ್ಟಿನಲ್ಲಿ ಪಕ್ಷದ ಸಂಘಟನೆ ಕೆಲಸ ನಡೆಯುತ್ತಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಚಂದ್ರಶೇಖರ್, ಪಾಂಡೋಮಟ್ಟಿ ನಾಗರಾಜ್, ಶಿವಕುಮಾರ್, ಕೆ.ಎಂ.ಪ್ರಕಾಶ್ ಉಪಸ್ಥಿತರಿದ್ದರು.
- - - ಬಾಕ್ಸ್ * ಕಾಂಗ್ರೆಸ್ ಸೇರಿದ್ದರೆ ಶಾಸಕನಾಗಿರುತ್ತಿದ್ದೆ ಒಂದೂವರೆ ವರ್ಷಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ದೊಡ್ಡ ದೊಡ್ಡ ನಾಯಕರೇ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು, ನನ್ನ ಮನವೊಲಿಸಲು ಭಾರಿ ಪ್ರಯತ್ನ ಪಟ್ಟಿದ್ದರು. ನಾನೇನಾದರೂ ಆಗ ಕಾಂಗ್ರೆಸ್ ಸೇರಿದ್ದರೆ ಪ್ರಸ್ತುತ ಚನ್ನಗಿರಿ ಕ್ಷೇತ್ರ ಶಾಸಕನಾಗಿದ್ದೆ. 30 ವರ್ಷಗಳಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವೆ ಎಂದು ವಿಧಾನಸಭಾ ಚುನಾವಣೆ ಪರಾಜಿತ ಅಭ್ಯರ್ಥಿಯೂ ಆಗಿರುವ ಎಚ್.ಎಸ್. ಶಿವಕುಮಾರ್ ಹೇಳಿದರು.- - - -28ಕೆಸಿಎನ್‌ಜಿ1: ಬಿಜೆಪಿ ಸಹಕಾರ ಪ್ರಕೋಷ್ಠಕ ರಾಜ್ಯಾಧ್ಯಕ್ಷ ಎಚ್.ಎಸ್.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.